ಬದಿಯಡ್ಕ: ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ವೈರಾಣು ವಿರುದ್ಧ ಹೋರಾಟಕ್ಕೆ ದೇಶದ ಐಕ್ಯತೆಯನ್ನು ಸಾರುವ ಸಲುವಾಗಿ ದೀಪಬೆಳಗಿಸಲು ಕರೆ ನೀಡಿದ ಸಂದರ್ಭದಲ್ಲಿ ಯುವಗಾಯಕ ಈಶ್ವರ ಪ್ರಕಾಶ್ ಸರಳಿ ಅವರ ಕಂಠಸಿರಿಯಲ್ಲಿ ಮೂಡಿಬಂದ 9 ನಿಮಿಷಗಳ ದೀಪೋಜ್ಯೋತಿ ಪರಂಜ್ಯೋತಿ ಹಾಡು ಅಮೇರಿಕಾದಲ್ಲೂ ವೈರಲ್ ಆಗಿದೆ. ಮಧ್ಯಾಹ್ನ ವೇಳೆ ಹಾಡನ್ನು ಕಂಪೋಸ್ ಮಾಡಿ ವಾಟ್ಸಪ್ ರವಾನಿಸಲಾಗಿತ್ತು.
ಪ್ರಸ್ತುತ ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯರಾದ ಕೃಷ್ಣ ಭಟ್ ಪೊಳಲಿ ಉತ್ತರ ಕೊರೊಲಿನಾ,ಯು.ಎಸ್.ಎ..ಯಲ್ಲಿ ನೆಲೆಸಿದ್ದಾರೆ. ಊರಿನ ಸಂಪರ್ಕದ ಮೂಲಕ ಅವರಿಗೆ ಲಭಿಸಿದ ಹಾಡನ್ನು ಅವರು ತನ್ನ ಭಾರತೀಯರ ಬಳಗಕ್ಕೆ ಹಂಚಿಕೊಂಡಿದ್ದರು. ಭಾರತೀಯ ಕಾಲಮಾನ ಹಾಗೂ ಅಮೇರಿಕದ ಸಂಯ 9 ಗಂಟೆಯಿಂದ 9 ನಿಮಿಷಗಳ ಕಾಲ ಈ ಹಾಡನ್ನು ಪ್ಲೇ ಮಾಡಿ ದೀಪ ಬೆಳಗಿಸಿದ್ದರು. ಬಳಗದವರೆಲ್ಲರೂ ಇವರೊಂದಿಗೆ ತಮ್ಮ ಮನೆಗಳಲ್ಲಿ ಹಾಡಿನೊಂದಿಗೆ ದೀಪಬೆಳಗಿಸಿದ್ದರು.
ಕೇರಳ ಕರ್ನಾಟಕ ರಾಜ್ಯಗಳ ವಿವಿಧೆಡೆಗಳಲ್ಲಿಯೂ ಈ ಹಾಡು ವೈರಲ್ ಆಗಿದ್ದು ದೀಪಬೆಳಗಿಸುವ ವೇಳೆ ಜನರು ಉಪಯೋಗಿಸಿಕೊಂಡಿದ್ದರು.
ಈಶ್ವರ ಪ್ರಕಾಶ ಸರಳಿ: ಪ್ರಸ್ತುತ ಬೆಂಗಳೂರಿನಲ್ಲಿ ಸಂಗೀತ ನಿರ್ದೇಶನ ಹಾಗೂ ಹಿನ್ನೆಲೆ ಗಾಯಕನಾಗಿ ಸರಳಿ ಈಶ್ವರ ಪ್ರಕಾಶ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಸರಗೋಡು ಜಿಲ್ಲೆಯ ನೀರ್ಚಾಲು ಸಮೀಪದ ಕುಂಟಿಕಾನ ಸರಳಿ ಸುಬ್ರಹ್ಮಣ್ಯ ಭಟ್ – ತಿರುಮಲೇಶ್ವರಿ ದಂಪತಿಗಳ ಪುತ್ರ ಕುಟುಂಬಸಮೇತ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ.
ನೂರಾರು ಸಂಗೀತಾಸಕ್ತರಿಗೆ ಲಾಕ್ ಡೌನ್ ವೇಳೆಯಲ್ಲೂ ಆನ್ ಲೈನ್ ಮುಖಾಂತರ ಸಂಗೀತ ಪಾಠವನ್ನು ಮಾಡುತ್ತಿದ್ದಾರೆ. ದಕ, ಕಾಸರಗೋಡು ಸಹಿತ ಬೆಂಗಳೂರಿನ ನಾನಾ ಕಡೆಗಳಲ್ಲಿ ಸಂಗೀ ಕಾರ್ಯಕ್ರಮಗಳನ್ನೂ ನೀಡಿ ಮೆಚ್ಚುಗೆಯನ್ನು ಗಳಿಸಿರುತ್ತಾರೆ. ಬಾಲ್ಯದಲ್ಲಿಯೇ ಇವರ ಕಂಠಸಿರಿಗೆ ತಂದೆ ನಿವೃತ್ತ ಅಧ್ಯಾಪಕ ಸುಬ್ರಹ್ಮಣ್ಯ ಭಟ್ ಅವರ ನಿರಂತರ ಪ್ರೋತ್ಸಾಹವು ಸಂಗೀತದಲ್ಲಿ ತೊಡಗಿಕೊಳ್ಳಲು ಪ್ರೇರೇಪಣೆಯಾಗಿದೆ. ಹಲವಾರು ಧ್ವನಿಸುರುಳಿ, ಆಲ್ಬಮ್ ಸಾಂಗ್ ಗಳಲ್ಲಿ, ವಿವಿಧ ಕಡೆ ಸುಗಮ ಸಂಗೀತ, ಸಂಗೀತ ನಿರ್ದೇಶಕರೊಂದಿಗೆ ಟ್ರ್ಯಾಕ್ ಗಾಯನಕ್ಕೂ ಸಹಕರಿಸುತ್ತಿದ್ದಾರೆ.
ಮಿತ್ರ ಚಂದ್ರಶೇಖರ ಏತಡ್ಕ ಅವರ ಮುಖಾಂತರ ಲಭಿಸಿದ ಈ ಹಾಡು ಮೋದಿ ಆಶಯದಂತೆ ದೀಪಜ್ವಲನೆ ಸಂದರ್ಭದಲ್ಲಿ ಒಂಭತ್ತು ನಿಮಿಷ ತದೇಕ ಚಿತ್ತದಿಂದ ಪ್ರಾರ್ಥಿಸಲು ತುಂಬಾ ಸಹಕಾರಿಯಾಯಿತು..
– ಕೃಷ್ಣ ಭಟ್ ಪೊಳಲಿ, ಉತ್ತರ ಕೊರೊಲಿನಾ, ಯು.ಎಸ್.ಎ. IBM ಉದ್ಯೋಗಿ.
ದೀಪಜ್ವಲನೆಯ.ವೇಳೆ ಜನರ ಭಕ್ತಿಯ.ಪ್ರಾರ್ಥನೆಗೆ ಹಾಡು ಸಹಕಾರಿಯಾಗಿರುವುದು ತುಂಬಾ ಖುಷಿಯಾಯಿತು. ನಮ್ಮ ನೆಚ್ಚಿನ ಪ್ರಧಾನಿಯವರ ಆಶಯಕ್ಕೆ ದೇಶದ ಜನತೆ ಬೆಂಬಲ ನಮಗೆಲ್ಲಾ ಹೆಮ್ಮೆಯ ವಿಚಾರವಾಗಿದೆ.
– ಈಶ್ವರ ಪ್ರಕಾಶ ಸರಳಿ, ಬೆಂಗಳೂರು, ಗಾಯಕ.