ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಮಸೀದಿಗೆ 1857ರ ಬ್ರಿಟಿಷರ ವಿರುದ್ಧದ ದಂಗೆಯ ಯೋಧ ಮೌಲ್ವಿ ಅಹ್ಮದುಲ್ಲಾ ಷಾ ಹೆಸರಿಡುವ ಸಾಧ್ಯತೆಯಿದೆ.
ಮಸೀದಿಯ ನಿರ್ಮಾಣದ ಮೇಲ್ವಿಚಾರಣೆಗೆ ಸುನ್ನಿ ವಕ್ಫ್ ಮಂಡಳಿಯು ರಚಿಸಿರುವ ಟ್ರಸ್ಟ್ ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್, ಅವಧ್ ಪ್ರದೇಶದಲ್ಲಿ ‘ದಂಗೆಯ ದೀಪಸ್ತಂಭ’ ಎಂದು ಕರೆಯಲ್ಪಡುವ ಷಾ ಅವರ ಹೆಸರನ್ನು ಇಡುವ ಕುರಿತು ಗಂಭೀರವಾಗಿ ಚರ್ಚೆ ನಡೆಸುತ್ತಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಅಥರ್ ಹುಸೇನ್ ಹೇಳಿದ್ದಾರೆ.
ಈ ಮೊದಲು ಮಸೀದಿಗೆ ಮೊಘಲ್ ಚಕ್ರವರ್ತಿ ಬಾಬರ್ ಹೆಸರಿಡಬೇಕೇ ಅಥವಾ ಬೇರೆ ಯಾವುದಾದರೂ ಹೆಸರನ್ನು ನೀಡಬೇಕೆ ಎಂಬ ಬಗ್ಗೆ ಚರ್ಚೆಗಳು ನಡೆದಿವೆ. ಬಾಬರಿ ಮಸೀದಿಗೆ ಬಾಬರ್ ಹೆಸರಿಡಲಾಯಿತು.
ಅಯೋಧ್ಯಾ ಮಸೀದಿ ಯೋಜನೆಯನ್ನು ಕೋಮು ಭ್ರಾತೃತ್ವ ಮತ್ತು ದೇಶಪ್ರೇಮದ ಸಂಕೇತವನ್ನಾಗಿ ಮಾಡಲು, ಈ ಮೌಲ್ಯಗಳನ್ನು ಪ್ರತಿನಿಧಿಸುವ ಮತ್ತು ಇಸ್ಲಾಂ ಧರ್ಮದ ನಿಜವಾದ ಅನುಯಾಯಿಯಾಗಿದ್ದ ಷಾಗೆ ಯೋಜನೆಯನ್ನು ಅರ್ಪಿಸಲು ಟ್ರಸ್ಟ್ ನಿರ್ಧರಿಸಿದೆ ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ.
‘ನಮ್ಮ ಅಯೋಧ್ಯೆ ಮಸೀದಿ ಯೋಜನೆಯನ್ನು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮೌಲ್ವಿ ಅಹ್ಮದುಲ್ಲಾ ಷಾಗೆ ಅರ್ಪಿಸುವ ಪ್ರಸ್ತಾಪದ ಬಗ್ಗೆ ಟ್ರಸ್ಟ್ ಬಹಳ ಗಂಭೀರವಾಗಿ ಯೋಚಿಸುತ್ತಿದೆ. ವಿವಿಧ ವೇದಿಕೆಗಳಿಂದ ನಾವು ಈ ಬಗ್ಗೆ ಸಲಹೆಗಳನ್ನು ಪಡೆದುಕೊಂಡಿದ್ದೇವೆ. ಇದು ಉತ್ತಮ ಸಲಹೆಯಾಗಿದೆ. ನಾವು ಅದನ್ನು ಚರ್ಚೆಯ ನಂತರ ಅಧಿಕೃತವಾಗಿ ಪ್ರಕಟಿಸುತ್ತೇವೆ’ ಎಂದಿದ್ದಾರೆ.