Thursday, June 30, 2022

Latest Posts

ಅಯೋಧ್ಯೆಗೆ ತೆರಳಲು ಸಿದ್ಧ ವಾಗಿದೆ ಬೆಳ್ಳಿ ಇಟ್ಟಿಗೆ: ಶ್ರೀರಾಮನ ಕೈಂಕರ್ಯಕ್ಕೆ ದಾವಣಗೆರೆ ಭಕ್ತರ ಸೇವೆ

ದಾವಣಗೆರೆ:  ಅಯೋಧ್ಯೆ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪೂರಕವಾಗಿ ದೇಶದ ವಿವಿಧೆಡೆಯಿಂದ ರಾಮಭಕ್ತರು ತಮ್ಮ ಶ್ರದ್ಧಾ-ಭಕ್ತಿಗನುಗುಣವಾಗಿ ಸಾಮಗ್ರಿಗಳನ್ನು ಕಳಿಸಿಕೊಡುತ್ತಿದ್ದಾರೆ. ಅದರಂತೆ ದಾವಣಗೆರೆಯ ಭಕ್ತರು ಪ್ರಭು ಶ್ರೀರಾಮನ ಕೈಂಕರ್ಯಕ್ಕೆ ಬೆಳ್ಳಿ ಇಟ್ಟಿಗೆ ಸಮರ್ಪಿಸಲು ಮುಂದಾಗಿದ್ದಾರೆ.
ಅಯೋಧ್ಯೆ ರಾಮಜನ್ಮಭೂಮಿಗೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪು ಪ್ರಕಟವಾದ ನಂತರ ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಿಂದ ಪವಿತ್ರ ಜಲ, ಮೃತ್ತಿಕೆ ಹೀಗೆ ಅನೇಕ ಸಾಮಗ್ರಿಗಳು ಅಯೋಧ್ಯೆ ತಲುಪುತ್ತಿವೆ. ಇದೀಗ ಮಧ್ಯ ಕರ್ನಾಟಕ ದಾವಣಗೆರೆಯ ಹಿಂದೂಪರ ಸಂಘಟನೆಗಳು ಹಾಗೂ ಭಕ್ತ ವೃಂದದವರು ಬರೋಬ್ಬರಿ 15 ಕೆಜಿ ತೂಕದ ಬೆಳ್ಳಿ ಇಟ್ಟಿಗೆಯನ್ನು ಅಯೋಧ್ಯೆಗೆ ಕಳಿಸಿಕೊಡುವ ಸಿದ್ಧತೆಯಲ್ಲಿದ್ದಾರೆ.
30 ಇಂಚು ಉದ್ದ, 20 ಇಂಚು ಎತ್ತರ, 10 ಇಂಚು ಅಗಲದ ಈ ಇಟ್ಟಿಗೆ ತಯಾರಿಕೆಗೆ ಅಂದಾಜು 12 ಲಕ್ಷ ರೂ. ವೆಚ್ಚವಾಗಿದೆ. ಇದಕ್ಕಾಗಿ ಯಾರಿಂದಲೂ ದೇಣಿಗೆ ಸಂಗ್ರಹಿಸಿದೆ, ಸಮಾನಮನಸ್ಕರು ಸ್ವಯಂಪ್ರೇರಿತರಾಗಿ ಖರ್ಚು ಭರಿಸಿರುವುದು ವಿಶೇಷವಾಗಿದೆ. ಇಟ್ಟಿಗೆಯ ಒಂದು ಪಾರ್ಶ್ವದಲ್ಲಿ ಶ್ರೀರಾಮಚಂದ್ರ, ರಾಮಮಂದಿರ ಹಾಗೂ ಇನ್ನೊಂದು ಪಾರ್ಶ್ವದಲ್ಲಿ ರಾಮಮಂದಿರ ಹೋರಾಟದ ದಾವಣಗೆರೆ ಹುತಾತ್ಮರ ಹೆಸರುಗಳನ್ನು ಕೆತ್ತಿಸಲಾಗಿದೆ. ಇನ್ನುಳಿದ ಎರಡೂ ಬದಿಗಳಲ್ಲಿ ಕಮಲದ ಚಿತ್ತಾರ ಮೂಡಿಬಂದಿದ್ದು, ಇಟ್ಟಿಗೆಯ ಮೇಲ್ಭಾಗದಲ್ಲಿ ಜಯ ಶ್ರೀರಾಮ ಎಂಬ ಘೋಷವಾಕ್ಯ ಬರೆಸಲಾಗಿದೆ. ಮಹಾರಾಷ್ಟ್ರ ರಾಜ್ಯ ಕೊಲ್ಹಾಪುರದ ಗೌತಮ್ ಕೈಕುಸುರಿಯಲ್ಲಿ ಇಟ್ಟಿಗೆಯ ವಿನ್ಯಾಸ ಅರಳಿದೆ.
ಇದೇ ಅ.6ರಂದು ಕೊಲ್ಹಾಪುರದಿಂದ ನಗರಕ್ಕೆ ಬರಲಿರುವ ಬೆಳ್ಳಿ ಇಟ್ಟಿಗೆಯನ್ನು ಹಿಂದೂಪರ ಸಂಘಟನೆಗಳು ಬರಮಾಡಿಕೊಳ್ಳಲಿವೆ. ಮಂದಿರ ಹೋರಾಟಗಾರರು ಹುತಾತ್ಮರಾದ ವೆಂಕಟೇಶ್ವರ ವೃತ್ತಕ್ಕೆ ಬೆಳಗ್ಗೆ 10.30ಕ್ಕೆ ಆಗಮಿಸಲಿರುವ ಬೆಳ್ಳಿ ಇಟ್ಟಿಗೆಯನ್ನು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ರಾಮರಥದಲ್ಲಿ ಇರಿಸಿ, ಪುಷ್ಪಾರ್ಚನೆ ಮಾಡಲಾಗುವುದು. ನಂತರ ಬೈಕ್ ರ್ಯಾಇಲಿ ಮೂಲಕ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಕೊಂಡೊಯ್ದು, ಪಿ.ಜಿ. ಬಡಾವಣೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಪೂಜೆ ಸಲ್ಲಿಸಲಾಗುವುದು.
ಎಲ್.ಕೆ.ಅಡ್ವಾಣಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗಬೇಕೆಂಬ ವಿಚಾರ ಮುಂದಿಟ್ಟುಕೊಂಡು ನಡೆದ ರಥಯಾತ್ರೆಯು ದಾವಣಗೆರೆಗೆ ಆಗಮಿಸಿದ ಸಂದರ್ಭದಲ್ಲಿ 1990 ಅಕ್ಟೋಬರ್ 6ರಂದು ಸಂಭವಿಸಿದ ಘರ್ಷಣೆಯಲ್ಲಿ 8 ಜನರು ಹುತಾತ್ಮರಾಗಿ, 72ಕ್ಕೂ ಅಧಿಕ ಜನ ಗಾಯಗೊಂಡಿದ್ದರು. ಇದರ ಸ್ಮರಣಾರ್ಥ ಅದೇ ದಿನದಂದು ಹೋರಾಟಗಾರರನ್ನು ಗೌರವಿಸುವ ಜೊತೆಗೆ ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಕಳಿಸಿಕೊಡಬೇಕೆಂಬ ಉದ್ದೇಶ ಹೊಂದಲಾಗಿತ್ತು. ಆದರೆ ಕೋವಿಡ್-19 ಕಾರಣ ಡಿಸೆಂಬರ್ ಅಥವಾ ಜನವರಿಯಲ್ಲಿ ಪೇಜಾವರ ಶ್ರೀಗಳ ಸಲಹೆಯಂತೆ ಅಯೋಧ್ಯೆಗೆ ಇಟ್ಟಿಗೆ ಕಳಿಸಿಕೊಡಲು ತೀರ್ಮಾನಿಸಲಾಗಿದೆ.
ಬೆಳ್ಳಿ ಇಟ್ಟಿಗೆಯನ್ನು ವಸ್ತು ಸಂಗ್ರಹಾಲಯದಲ್ಲಿ ಇರಿಸುವುದು ಅಥವಾ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದು ಅಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್ ನಿರ್ಧಾರಕ್ಕೆ ಬಿಟ್ಟದ್ದು. ಸದ್ಯ ಬೆಳ್ಳಿ ಇಟ್ಟಿಗೆಯನ್ನು ಬ್ಯಾಂಕ್ ಲಾಕರ್‌ನಲ್ಲಿ ಇರಿಸಲಾಗುವುದು. ಕೊರೋನಾ ಹಾವಳಿ ತಣ್ಣಗಾದ ನಂತರ 8-10 ಸಾವಿರ ಜನರನ್ನು ಸೇರಿಸಿ ಬೃಹತ್ ಸಮಾರಂಭದಲ್ಲಿ ರಾಮಮಂದಿರ ಹೋರಾಟಗಾರರಿಗೆ ಗೌರವಾರ್ಪಣೆ ಹಾಗೂ ಬೆಳ್ಳಿ ಇಟ್ಟಿಗೆ ಸಮರ್ಪಣೆ ಮಾಡಲಾಗುವುದು ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss