ಹೊಸದಿಗಂತ ಆನ್ ಲೈನ್ ಡೆಸ್ಕ್:
ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಈವರೆಗೂ 1,511 ಕೋಟಿ ಸಂಗ್ರಹವಾಗಿರುವುದಾಗಿ ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ ದೇವ ಗಿರಿ ಶುಕ್ರವಾರ ತಿಳಿಸಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕಾಗಿ ಇಡೀ ರಾಷ್ಟ್ರವು ಹಣವನ್ನು ದಾನ ಮಾಡುತ್ತಿದ್ದು, ಅದಕ್ಕಾಗಿ ನಿರ್ವಹಣೆಯನ್ನು ನೋಡಿಕೊಳ್ಳಲು ರಚಿಸಲಾಗಿರುವ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಶದಾದ್ಯಂತ ನಿಧಿ ಸಂಗ್ರಹ ನಡೆಸಲಾಗುತ್ತಿದೆ.
ನಿಧಿ ಸಂಗ್ರಹ ಕಾರ್ಯದ ಮೂಲಕ ದೇಶದಾದ್ಯಂತ 4 ಲಕ್ಷ ಗ್ರಾಮಗಳು ಮತ್ತು 11 ಕೋಟಿ ಕುಟುಂಬಗಳನ್ನು ತಲುಪುವ ಗುರಿ ಇಟ್ಟುಕೊಂಡಿದ್ದೇವೆ. ಅಭಿಯಾನದ ಅಂಗವಾಗಿ ನಾನು ಸೂರತ್ನಲ್ಲಿದ್ದೇನೆ. ಜನರು ಟ್ರಸ್ಟ್ಗೆ ಕೊಡುಗೆ ನೀಡುತ್ತಿದ್ದಾರೆ. 492 ವರ್ಷಗಳ ನಂತರ ಧರ್ಮಕ್ಕಾಗಿ ಏನಾದರೂ ಮಾಡಲು ಜನರಿಗೆ ಇಂಥ ಅಪರೂಪದ ಅವಕಾಶ ಸಿಕ್ಕಿದೆ ಎಂದು ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ ದೇವ ಗಿರಿ ತಿಳಿಸಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನಿಂದ ಜನವರಿ 15ರಂದು ನಿಧಿ ಸಂಗ್ರಹ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಫೆಬ್ರವರಿ 27ರ ವರೆಗೂ ಇದು ಮುಂದುವರಿಯಲಿದೆ. ಫೆಬ್ರುವರಿ 11ರ ಗುರುವಾರ ಸಂಜೆಯವರೆಗೂ 1,511 ಕೋಟಿ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದ್ದಾರೆ.