ಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಆ.5ರಂದು ಭೂಮಿ ಪೂಜೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಆ.4ರಂದು ರಾತ್ರಿ 8ರಿಂದ ಆ.6ರಂದು ಬೆಳಗ್ಗೆ 6ರವರೆಗೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆ ಜಾರಿಯಲ್ಲಿರುವಾಗ 5ಕ್ಕಿಂತ ಹೆಚ್ಚು ಮಂದಿ ಜನರು ಗುಂಪು ಸೇರಬಾರದು, ಶಸ್ತ್ರ, ದೊಣ್ಣೆ, ಕತ್ತಿ, ಬಂದೂಕು ಸಹಿತ ದೈಹಿಕ ಹಿಂಸೆ ಉಂಟು ಮಾಡುವ ಯಾವುದೇ ವಸ್ತು ಒಯ್ಯಬಾರದು. ಪಟಾಕಿ ಸಿಡಿಸಬಾರದು, ಸಾರ್ವಜನಿಕ ಮೆರವಣಿಗೆ, ಪ್ರತಿಭಟನೆ, ಧರಣಿ, ಮುಷ್ಕರ, ರಸ್ತೆ ತಡೆ, ಮುತ್ತಿಗೆ, ಬೈಕ್ ರ್ಯಾಲಿ, ಪ್ರತಿಕೃತಿ ದಹನ, ಆಕ್ರಮಣಕಾರಿ ಭಾಷಣ, ಸಮಾರಂಭ ನಡೆಸುವಂತಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.