ಮಂಡ್ಯ : ಕೋಟ್ಯಂತರ ರಾಮ ಭಕ್ತರ ಕನಸಿನಂತೆ ಆದರ್ಶ ಪುರುಷೋತ್ತಮ ಶ್ರೀ ರಾಮಚಂದ್ರನ ಮಂದಿರ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸ ಮಾಡುತ್ತಿದ್ದಂತೆ ಜಿಲ್ಲಾದ್ಯಂತ ರಾಮ ಭಕ್ತರು ತಮ್ಮ ಮನೆಗಳಲ್ಲೇ ದೀಪ ಬೆಳಗಿಸಿ ಸತೃಪ್ತ ಭಾವ ವ್ಯಕ್ತಪಡಿಸಿದರು.
ಕೊನೆಗೂ ಶ್ರೀರಾಮನ ಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾರ್ಯಾರಂಭವಾಗಿದೆ ಎಂಬ ಸಂತಸ ಅವರಲ್ಲಿ ಮನೆ ಮಾಡಿತ್ತು. ಬೆಳಗಿನಿಂದಲೇ ಮನೆಗಳು, ದೇವಾಲಯಗಳಲ್ಲಿ ವಿವಿಧ ಪೂಜೆ, ಭಜನೆ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದ್ದ ಭಕ್ತರು, ಶಿಲಾನ್ಯಾಸ ಗಳಿಗೆ ಹತ್ತಿರವಾಗುತ್ತಿದ್ದಂತೆ ಎಲ್ಲರೂ ತನ್ಮಯತೆಯಿಂದ ದೂರದರ್ಶನಗಳಲ್ಲಿ ಪ್ರಸಾರವಾಗುತ್ತಿದ್ದ ಸಮಾರಂಭವನ್ನು ಕಣ್ತುಂಬಿಕೊಂಡರು.
ಪ್ರಧಾನಿ ನರೇಂದ್ರಮೋದಿಯವರು ಅಯೋದ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲನ್ಯಾಸ ನೆರವೇರಿಸುತ್ತಿದ್ದಂತೆ ಕರತಾಡನದೊಂದಿಗೆ ಕುಣಿದು ಕುಪ್ಪಳಿಸಿದರು. ಶ್ರೀರಾಮನೇ ತಮ್ಮೆದುರು ಬಂದು ನಿಂತಂತೆ ಆನಂದ ತುಂದಿಲರಾಗಿ ಶ್ರೀರಾಮ ಜಯರಾಮ ಜಯ ಜಯ ರಾಮ ತಾರಕ ಮಂತ್ರವನ್ನು ಪಠಿಸುತ್ತಿದುದ್ದು ಕಂಡುಬಂತು.
ಕೆಲ ಮನೆಗಳಲ್ಲಿ ಕುಟುಂಬದವರೊಂದಿಗೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕುಳಿತು ದೂರದರ್ಶನದಲ್ಲಿ ಶಿಲಾನ್ಯಾಸ ಸಮಾರಂಭದ ಎಲ್ಲ ದೃಶ್ಯಾವಳಿಗಳನ್ನು ವೀಕ್ಷಿಸಿ ಖುಷಿಪಟ್ಟರು, ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿದುಬಂದ ಚಿತ್ರಗಳನ್ನು ನೋಡಿ ಸಂಭ್ರಮಿಸಿದ್ದಲ್ಲದೆ, ಸ್ನೇಹಿತರು, ಬಂಧುಗಳಿಗೂ ಕಳುಹಿಸುತ್ತಿದ್ದುದು ಕಂಡುಬಂತು.
ಶ್ರೀರಾಮ ಮಂದಿರ, ದೇವಾಲಯಗಳಲ್ಲಿ ಕೋವಿಡ್-19ರ ಅಂತರ ಕಾಯ್ದುಕೊಂಡು ವಿಶೇಷ ಪೂಜೆ ಸಲ್ಲಿಸಿದರು.