ಮಂಗಳೂರು: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಕಾಲ ಸನ್ನಿಹಿತವಾಗಿದೆ. ಇದಾಗಲೇ ಮಂದಿರ ನಿರ್ಮಾಣದ ಕುರಿತಂತೆ ನೀಲನಕ್ಷೆ ತಯಾರಾಗಿದೆ ಎಂದು ಶ್ರೀರಾಮ ಮಂದಿರ ನಿರ್ಮಾಣ ಟ್ರಸ್ಟ್ ನ ದಕ್ಷಿಣ ಭಾರತದ ಪ್ರತಿನಿಧಿಯಾಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ತಯಾರಿಸಿರುವ ನೀಲನಕ್ಷೆಯಂತೆ ಯೋಜನಾಬದ್ದವಾಗಿ ಮಂದಿರ ನಿರ್ಮಾಣವಾಗಲಿದೆ. ಅವಶ್ಯವಾದರೆ ಮಾತ್ರ ಈ ನೀಲನಕ್ಷೆಯನ್ನು ಬದಲಾಯಿಸಲಾಗುವುದು. ಈ ಮಂದಿರ ಶತಮಾನಗಳವರೆಗೆ ಚಿರಸ್ಥಾಯಿಯಾಗಿ ಉಳಿಯಬೇಕು. ಇದಕ್ಕಾಗಿ ಅಯೋಧ್ಯೆಯನ್ನೇ ಮಂದಿರ ನಿರ್ಮಾಣದ ಸುಸಜ್ಜಿತ ಜಾಗವಾಗಿ ಪರಿವರ್ತಿಸುವ ಇರಾದೆ ಹೊಂದಲಾಗಿದೆ. ನಾಲ್ಕು ಪಥದ ರಸ್ಥೆ, ಯಾತ್ರಿ ನಿವಾಸ, ಪ್ರಾಚೀನ ಸಂಸ್ಕೃತಿಯ ಕಲಾಭವನ ಸೇರಿದಂತೆ ಪ್ರಪಂಚದಾದ್ಯಂತ ಎಲ್ಲಾ ಭಕ್ತರ ಪ್ರಸಿದ್ದಿ ಯಾತ್ರ ಸ್ಥಳವಾಗಿ ಅಯೋಧ್ಯೆ ಮಾರ್ಪಾಡಲಿದೆ.
ಮಂದಿರ ನಿರ್ಮಾಣಕ್ಕೆ ಬೇಕಾದ ಶಿಲಾ ಕಲ್ಲುಗಳ ಕೆತ್ತನೆ ಕೆಲಸ ಹಲವು ವರ್ಷಗಳ ಹಿಂದೆಯೇ ಪೂರ್ಣಗೊಂಡಿದೆ. ಇವು ಶಿಲೆ ಕಲ್ಲುಗಳಾದ್ದರಿಂದ ಶಿಥಿಲಗೊಳ್ಳುವ ಸಂಭವ ಇಲ್ಲ, ಆದರೂ ಈ ಬಗ್ಗೆ ನಿಗಾ ವಹಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಸ್ವಾಮೀಜಿ ಉತ್ತರಿಸಿದರು.