Wednesday, July 6, 2022

Latest Posts

ಅಯೋಧ್ಯೆ ರಾಮ ಮಂದಿರ: ಪೇಜಾವರ ಶ್ರೀ ಗಳಿಗೆ ಟ್ರಸ್ಟ್ ನಿಂದ ಭಾನುವಾರದ ಅನೌಪಚಾರಿಕ ಸಭೆಯ ಆಹ್ವಾನ

ಉಡುಪಿ: ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ಸಿಕ್ಕಿದ್ದು, ಕಾಮಗಾರಿಯನ್ನು ಗುತ್ತಿಗೆ ಸಂಸ್ಥೆ ಎಲ್ ಆ್ಯಂಡ್ ಟಿ ನಡೆಸಲಿದೆ. ಈ ಕಾಮಗಾರಿಯ ಪ್ರತೀ ಹಂತವನ್ನು ಟಾಟಾ ಸಂಸ್ಥೆ ಪರಿಶೀಲನೆ ಮಾಡಲಿದೆ.
ಶನಿವಾರ ಅಯೋಧ್ಯೆಯ ಸಕ್ಯೂರ್ಟ್ ಹೌಸ್‌ನಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ನೃತ್ಯಗೋಪಾಲ್ ದಾಸ್ ಮಹಾರಾಜ್ ಅವರ ನೇತೃತ್ವದಲ್ಲಿ ನಡೆದ ಅನೌಪಚಾರಿಕ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥರಾಗಿರುವ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಶನಿವಾರ ಸಂಜೆ ಧರ್ಮನಗರಿ ಅಯೋಧ್ಯೆ ತಲುಪಿದ್ದಾರೆ. ಅದಕ್ಕೂ ಮೊದಲು ಈ ಅನೌಪಚಾರಿಕ ಸಭೆ ನಡೆದಿದೆ.
ಬಳಿಕ ಪೇಜಾವರ ಮಠದ ಶಾಖಾ ಮಠವಾದ ಮಧ್ವಾಶ್ರಮ ಪ್ರಮೋದ ವನದಲ್ಲಿ ಪೇಜಾವರ ಶ್ರೀಗಳನ್ನು ಭೇಟಿಯಾದ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್, ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ಡಾ. ಅನಿಲ್ ಮಿಶ್ರಾ, ವಿಶ್ವಸ್ಥರಾದ ದಿನೇಶ್‌ಚಂದ್ರ, ನಿವೃತ್ತ ಮುಖ್ಯ ಇಂಜಿನಿಯರ್ ಜಗದೀಶ್ ಅವರು ಟ್ರಸ್ಟ್‌ನ ಅನೌಪಚಾರಿಕ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ತಿಳಿಸಿ, ನ. 1ರಂದು ನಡೆಯುವ ಔಪಚಾರಿಕ ಸಭೆಗೆ ಆಹ್ವಾನ ನೀಡಿದರು.
ಈ ಬಗ್ಗೆ ’ಹೊಸ ದಿಗಂತ’ಕ್ಕೆ ತಿಳಿಸಿದ ಪೇಜಾವರ ಶ್ರೀಗಳು, ಅಯೋಧ್ಯೆಯ ಸರ್ಕ್ಯೂಟ್ ಹೌಸ್‌ನಲ್ಲಿ ನಾಳೆ ಬೆಳಗ್ಗೆ 10ಗಂಟೆಗೆ ಟ್ರಸ್ಟ್‌ನ ಸಭೆಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಟ್ರಸ್ಟ್‌ನ ವಿಶ್ವಸ್ಥರೆಲ್ಲರೂ ಇಂದು ಸಭೆ ಸೇರಿ ಕೆಲವು ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಅದರ ಬಗ್ಗೆ ಪ್ರಮುಖರು ಬಂದು ತಿಳಿಸಿದ್ದಾರೆ. ಅದರಂತೆ ಎಲ್ ಆ್ಯಂಡ್ ಟಿ ಸಂಸ್ಥೆಗೆ ಮಂದಿರ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಡಲಾಗುತ್ತದೆ. ಮಂದಿರ ನಿರ್ಮಾಣದ ಹಂತ ಹಂತದ ಕಾಮಗಾರಿಯನ್ನು ಪರಿಶೀಲಿಸಲು ಅಂತಹದ್ದೇ ಸಮರ್ಥವಾದ ಇನ್ನೊಂದು ಸಂಸ್ಥೆ ಟಾಟಾ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಟಾಟಾ ಸಂಸ್ಥೆಯವರು ಅದಕ್ಕೆ ಒಪ್ಪಿಕೊಂಡಿದ್ದಾರೆ ಎಂಬ ತೀರ್ಮಾನವಾಗಿದೆ ಎಂದರು.
ಎಲ್ ಆ್ಯಂಡ್ ಟಿ ಸಂಸ್ಥೆ ಮತ್ತು ಟಾಟಾ ಸಂಸ್ಥೆಗಳು ಮಂದಿರ ನಿರ್ಮಾಣದ ಪ್ರತಿಯೊಂದು ವಿವರವನ್ನು ಟ್ರಸ್ಟ್‌ಗೆ ನೀಡುತ್ತಿರಬೇಕು. ಅದಕ್ಕಾಗಿ ಟ್ರಸ್ಟ್‌ನ ಸದಸ್ಯರಾಗಿರುವ ಪ್ರಾಜೆಕ್ಟ್ ಮ್ಯಾನೇಜರ್ ಮಾಹಿತಿ ಸಿಗುತ್ತದೆ. ಅದನ್ನು ಅವರು ಟ್ರಸ್ಟ್ ಕಾರ್ಯದರ್ಶಿ ಚಂಪತ್‌ರಾಯ್ ಅವರಿಗೆ ತಿಳಿಸಿ, ಕಾರ್ಯದರ್ಶಿಯವರು ಅಂತಿಮಗೊಳಿಸುತ್ತಾರೆ. ಹೀಗೆ ಮಂದಿರ ನಿರ್ಮಾಣ ಕಾರ್ಯಗಳು ನಡೆಯಲಿವೆ ಎಂದು ಪೇಜಾವರ ಶ್ರೀಗಳು ವಿವರಿಸಿದರು.
ಇಂದು ರಾಮ ಲಲ್ಲಾನ ದರ್ಶನ
ಪೇಜಾವರ ಶ್ರೀಗಳು ಶನಿವಾರ ಸಂಜೆ 7ಗಂಟೆಗೆ ಅಯೋಧ್ಯೆ ತಲುಪಿದ್ದು, ಬಳಿಕ ಟ್ರಸ್ಟ್‌ನ ಸದಸ್ಯರೊಂದಿಗೆ ಅನೌಪಚಾರಿಕ ಮಾತುಕತೆಯಲ್ಲಿ ಭಾಗಿಯಾಗಿದ್ದಾರೆ. ನಾಳೆ 10ಗಂಟೆಯಿಂದ ಅಯೋಧ್ಯೆ  ಸರ್ಕ್ಯೂಟ್ ಹೌಸ್‌ನಲ್ಲಿ ಟ್ರಸ್ಟ್‌ನ ಅಧಿಕೃತ ಸಭೆ ನಡೆಯಲಿದ್ದು, ಅದರಲ್ಲಿ ಭಾಗವಹಿಸುತ್ತಾರೆ. ಸಂಜೆ 4ಗಂಟೆಯ ಬಳಿಕ ಜನ್ಮಭೂಮಿಗೆ ತೆರಳಿ, ರಾಮದೇವರ ದರ್ಶನ ಪಡೆಯುತ್ತಾರೆ. ಸ್ಥಳದಲ್ಲಿ ನಡೆದಿರುವ ಕಾಮಗಾರಿಯ ವೀಕ್ಷಣೆ ನಡೆಸಿ, ಸಂಜೆ 6ಗಂಟೆಗೆ ಶ್ರೀರಾಮನಿಗೆ ನಡೆಯುವ ಮಹಾ ಆರತಿಯಲ್ಲಿ ಪಾಲ್ಗೊಳ್ಳುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss