Wednesday, August 17, 2022

Latest Posts

ಅಯೋಧ್ಯೆ ರಾಮ ಮಂದಿರ ಭೂಮಿಪೂಜೆ ಪ್ರಯುಕ್ತ ಶ್ರೀರಾಮ ಚಿತ್ರದುರ್ಗ ಸಿದ್ದರಾಮೇಶ್ವರ ದೇವಾಲಯದಲ್ಲಿ ತಾರಕ ಹೋಮ

ಚಿತ್ರದುರ್ಗ: ಮರ್ಯಾದ ಪುರುಷೋತ್ತಮ ಶ್ರೀರಾಮನ ಜನ್ಮಸ್ಥಳವಾದ ಪವಿತ್ರ ಸರಯೂ ನದಿಯ ತೀರದಲ್ಲಿನ ಅಯೋಧ್ಯೆ ಪುಣ್ಯಭೂಮಿಯಲ್ಲಿ ಭಗವಾನ್ ಶ್ರೀರಾಮನ ಭವ್ಯ ದೇವಾಲಯ ನಿರ್ಮಿಸಲು ಬುಧವಾರ ಮಧ್ಯಾಹ್ನ ಭೂಮಿಪೂಜೆ ನೆರವೇರಿಸಲಾಯಿತು.
ಇದರ ಅಂಗವಾಗಿ ನಗರದ ಜಿಲ್ಲಾ ಸಹಕಾರಿ ಬ್ಯಾಂಕ್ ಬಳಿಯ ಸಿದ್ದರಾಮೇಶ್ವರ ದೇವಾಲಯದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ವೀರ ಮದಕರಿ ಸೇವಾ ಟ್ರಸ್ಟ್ ವತಿಯಿಂದ ಗಣಹೋಮ ಹಾಗೂ ಶ್ರೀರಾಮ ತಾರಕ ಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬುಧವಾರ ಬೆಳಿಗ್ಗೆ ೭.೩೦ ರಿಂದ ೧೨ ಗಂಟೆವರೆಗೆ ಗಣಹೋಮ ಹಾಗೂ ಶ್ರೀರಾಮ ತಾರಕ ಹೋಮ ನಡೆಸಲಾಯಿತು. ಮಧ್ಯಾಹ್ನ ೧೨ ಗಂಟೆಗೆ ಸರಿಯಾಗಿ ಪೂರ್ಣಾಹುತಿ ಪೂಜೆ ನೆರವೇರಿಸಲಾಯಿತು. ಪೂಜೆಯ ನಂತರ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಅಯೋಧ್ಯೆಯಲ್ಲಿ ನಡೆಯುವ ಪೂಜಾ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು ಎರಡು ಎಲ್‌ಇಡಿ ಟಿವಿಗಳ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಬೆಳಗಿನಿಂದ ಮಧ್ಯಾಹ್ನ ಪೂಜಾ ಕಾರ್ಯ ಮುಗಿಯುವವರೆಗೂ ರಾಮನಾಮ ನಡೆಸಲಾಯಿತು. ಬುರುಜನಹಟ್ಟಿಯ ಭಜನಾ ತಂಡದವರು ಶ್ರೀ ರಾಮಚಂದ್ರ ಹಾಗೂ ಶ್ರೀ ಆಂಜನೇಯನ ಹಲವು ಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು ಭಜನಾ ತಂಡದ ಗೀತೆಗಳನ್ನು ಕೇಳುತ್ತಾ ಕುಳಿತಲ್ಲೇ ಕಣ್ಣುಮುಚ್ಚಿ, ಹಾಡಿಗೆ ಧ್ವನಿಗೂಡಿದರು. ಚಪ್ಪಳಾ ಹಾಕುತ್ತಾ ಧ್ಯಾನಾಸಕ್ತರಾಗಿದ್ದರು.
ಕೆಲವು ಕಾರ್ಯಕರ್ತರು ಹಾಡಿಗೆ ಚಪ್ಪಾಳೆ ಹಾಕುತ್ತಾ ಮೈಮರೆತು ಕುಣಿಯುತ್ತಿದ್ದರು. ಹೋಮ ಕುಂಡದಿಂದ ಹೊರವಿದ್ದ ಹೊಗೆ ಇಡೀ ದೇವಸ್ಥಾನದಲ್ಲಿ ಸಂಚರಿಸಿ ವಾತಾವರಣವನ್ನು ಶುದ್ಧೀಕರಿಸಿತು. ಇದರಿಂದ ದೇವಸ್ಥಾನದಲ್ಲಿನ ಪರಿಸರ ಪವಿತ್ರವಾದಂತಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು ರಾಮನಾಮ ಸ್ಥುತಿಸುತ್ತಾ ಭಕ್ತಿಪರವಶರಾದರು. ಅಂತಿಮವಾಗಿ ದೇವರಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.
ಅಯೋಧ್ಯೆ ರಾಮ ಜನ್ಮಭೂಮಿ ಮುಕ್ತಿಗಾಗಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದ ಕರಸೇವಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಟೈಗರ್ ತಿಪ್ಪೇಸ್ವಾಮಿ, ಜಿ.ಎಂ.ಸುರೇಶ್, ಕೆ.ಶಿವಣ್ಣಾಚಾರ್, ಚಿದಾನಂದ ಗುಜ್ಜಾರ್, ಆಟೋ ತಿಪ್ಪೇಸ್ವಾಮಿ, ಮಂಜುನಾಥ್ ಸೇರಿದಂತೆ ಆರುಜನ ಕರಸೇವಕರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಕರಸೇವಕರು ಅಯೋಧ್ಯೆಯ ಹೋರಾಟ, ಅಂದು ಅನುಭವಿಸಿದ ಕಷ್ಟನಷ್ಟಗಳು ಸೇರಿದಂತೆ ತಮ್ಮ ಅನುಭವ ಹಂಚಿಕೊಂಡರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಇದೊಂದು ಐತಿಹಾಸಿಕ ಕ್ಷಣ. ಅಯೋಧ್ಯೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವಷ್ಟು ಜನ ಈ ಹಿಂದೆ ನಡೆದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎಂದರೆ ತಪ್ಪಾಗಲಾರದು. ಕೇವಲ ಭಾರತ ಮಾತ್ರವಲ್ಲದೇ ದೇಶ ವಿದೇಶಗಳಿಂದ ಜನರು ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾರೆ. ಇದು ರಾಮ ಮಂದಿರ ನಿರ್ಮಾಣದ ಕನಸು ನನಸಾಗುತ್ತಿರುವ ಐತಿಹಾಸಿಕ ದಿನ ಎಂದು ಬಣ್ಣಿಸಿದರು.
ದೇಶದಲ್ಲಿ ಕೊರೋನಾ ಮಹಾಮಾರಿಯ ಪ್ರಭಾವ ಹೆಚ್ಚಾಗಿದೆ. ಹಾಗಾಗಿ ಜನರು ಹೆಚ್ಚಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಇಲ್ಲದಿದ್ದರೆ ಕೋಟಿ, ಕೋಟಿ ಜನರು ಕಾರ್ಯಕ್ರಮಕ್ಕೆ ಬಂದು ಜಮಾಯಿಸುತ್ತಿದ್ದರು. ಅಂದು ನಡೆದ ಹೋರಾಟದಲ್ಲಿ ಅನೇಕರು ಪ್ರಾಣತ್ಯಾಗ ಮಾಡಿದ್ದಾರೆ. ಅವರ ತ್ಯಾಗ ಬಲಿದಾನದ ಫಲವೇ ಇಂದು ರಾಮ ಮಂದಿರ ನಿರ್ಮಾಣವಾಗುತ್ತಿದೆ. ಅಂದು ಸಾಮಾನ್ಯ ಕಾರ್ಯಕರ್ತರಾಗಿ ಹೋರಾಟ ಮಾಡಿದ ನರೇಂದ್ರ ಮೋದಿ ಅವರಿಗೆ ಇಂದು ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಮಾಡುವ ಸೌಭಾಗ್ಯ ಒದಗಿದೆ ಎಂದರು.
ವಿಶ್ವ ಹಿಂದೂ ಪರಿಷತ್ ಶಿವಮೊಗ್ಗ ವಿಭಾಗೀಯ ಸಂಚಾಲಕ ಪ್ರಭಂಜನ್ ಮಾತನಾಡಿ, ರಾಮ ಜನ್ಮಭೂಮಿ ಮುಕ್ತಿಗಾಗಿ ನಡೆದ ಹೋರಾಟಡ ದಿನ ೧೯೯೨ ಡಿಸೆಂಬರ್ ೬ ರಂದು ವಿಜಯ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಅದರಂತೆ ಇಂದಿನ ದಿನವೂ ಒಂದು ಐತಿಹಾಸಿಕ ದಿನವಾಗಿದೆ. ಅಯೋಧ್ಯೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ೫೮ ದೇಶಗಳಲ್ಲಿ ನೇರ ಪ್ರದೇಶದ ವ್ಯವಸ್ಥೆ ಮಾಡಲಾಗಿದೆ. ಕೊರೋನಾ ವೈರಸ್ ಹಾವಳಿ ಇಲ್ಲದಿದ್ದಲ್ಲಿ ಇದು ಮತ್ತೊಂದು ಕುಂಭಮೇಳದ ರೀತಿ ನಡೆಯುತ್ತಿತ್ತು ಎಂದು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ಲಂಬಾಣಿ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಆಶೀರ್ವಚನ ನೀಡಿದರು. ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ, ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್, ಮಾಜಿ ಅಧ್ಯಕ್ಷ ಟಿ.ಜಿ.ನರೇಂದ್ರನಾಥ್, ಡಾ. ಸಿದ್ದಾರ್ಥ ಗುಂಡಾರ್ಪಿ, ರಘುಚಂದನ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಹಾಜರಿದ್ದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ್‌ಬಾಬು, ನಗರಾಧ್ಯಕ್ಷ ಶ್ರೀನಿವಾಸ್, ಬದ್ರಿನಾಥ್, ತಿಪ್ಪೇಸ್ವಾಮಿ, ವಿಠಲ್, ಓಂಕಾರ್, ಭಾನುಮೂರ್ತಿ, ರುದ್ರೇಶ್, ಅಶೋಕ್, ಆರ್‌ಎಸ್‌ಎಸ್ ಜಿಲ್ಲಾ ಪ್ರಮುಖ್ ಮಂಜುನಾಥ್, ರಾಜ್‌ಕುಮಾರ್, ಕೋಟ್ಲ ದೇವರಾಜ್, ಶ್ಯಾಮಲಾ ಶಿವಪ್ರಕಾಶ್, ಸೇರಿದಂತೆ ಅನೇಕ ಜನ ರಾಮ ಭಕ್ತರು, ಧರ್ಮಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!