ಹೊಸದಿಗಂತ ವರದಿ,ಮಂಗಳೂರು:
ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಯೋಜನೆಯನ್ವಯ ಅಯೋಧ್ಯೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನವು ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಜ.15 ಮಕರ ಸಂಕ್ರಮಣದಿಂದ ಪ್ರಾರಂಭವಾಗಿ ಫೆ.5ರವರೆಗೆ 20 ದಿನಗಳ ಕಾಲ ಕರ್ನಾಟಕದಾದ್ಯಂತ ನಡೆಯಲಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಈ ಅಭಿಯಾನ ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಸಹಕರಿಸಬೇಕು. ವಿಹಿಂಪ ಕಾರ್ಯಕರ್ತರು ಶ್ರೀ ರಾಮಮಂದಿರ ನಿಧಿ ಸಮರ್ಪಣೆ ಅಭಿಯಾನಕ್ಕೆ ಮನೆ ಮನೆಗೆ ಬಂದಾಗ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಉದಾರವಾಗಿ ಸಾತ್ವಿಕ ದೇಣಿಗೆಯನ್ನು ನೀಡುವ ಮೂಲಕ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಬೇಕು ಎಂದರು.
ಮಂಗಳೂರು ವಿಭಾಗದಲ್ಲಿ ಈ ಅಭಿಯಾನವನ್ನು ಯಶಸ್ವಿಗೊಳಿಸುವ ದೃಷ್ಟಿಯಿಂದ ಕಾಸರಗೋಡು, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಅಭಿಯಾನಕ್ಕೆ ಪೂರ್ವ ತಯಾರಿ ನಡೆದಿದೆ. ಈಗಾಗಲೇ ಸಾವಿರಾರು ಕಾರ್ಯಕರ್ತರು ಅಭಿಯಾನದ ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದವರು ಹೇಳಿದರು.
ವಿಹಿಂಪ ವಿಭಾಗ ಕಾರ್ಯದಶಿ ಶರಣ್ ಪಂಪ್ವೆಲ್ ಮಾತನಾಡಿ, ರಾಮಮಂದಿರ ನಿರ್ಮಾಣದ ಪುಣ್ಯ ಕಾರ್ಯದಲ್ಲಿ ಪ್ರತಿಯೊಬ್ಬರ ಸಹಬಾಗಿತ್ವ ಅತ್ಯಗತ್ಯ. ಮಂಗಳೂರು ವಿಭಾಗದಲ್ಲಿ ಪ್ರತಿ ಮನೆ ಮನೆ ಭೇಟಿಯ ಮೂಲಕ ಸುಮಾರು ೨೫ ಕೋಟಿ ದೇಣಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಅಲ್ಲದೆ 1 ಲಕ್ಷಕ್ಕಿಂತ ಅಧಿಕ ಮೊತ್ತ ನೀಡುವವರ ಪಟ್ಟಿಯನ್ನು ಪ್ರತ್ಯೇಕವಾಗಿ ಮಾಡಲಾಗುತ್ತಿದ್ದು, ಈಗಾಗಲೇ 200 ಮಂದಿಯ ಪಟ್ಟಿಯನ್ನು ತಯಾರಿಸಲಾಗಿದೆ ಇದರಿಂದಲೂ ಹೆಚ್ಚಿನ ದೇಣಿಗೆಯನ್ನು ನಿರೀಕ್ಷಿಸಲಾಗಿದೆ ಎಂದರು.
ದೇಣಿಗೆ ಸಂಗ್ರಹದ ನೆಲೆಯಲ್ಲಿ ಮಂಗಳೂರು ವಿಭಾಗದ ಪ್ರತಿ ಜಿಲ್ಲೆಯ ನಗರ, ವಾರ್ಡ್ ಮಟ್ಟದಲ್ಲಿ ಸುಮಾರು 4 ಸಾವಿರ ಬೂತ್ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ಬೂತ್ನಲ್ಲಿ 5 ಕಾರ್ಯಕರ್ತರ ತಂಡಗಳು ರಚನೆಯಾಗಿದ್ದು, ಕಾರ್ಯಕರ್ತರು ಎಲ್ಲಾ ಧರ್ಮದವರ ಮನೆಗಳಿಗೆ ಭೇಟಿ ನೀಡಲಿದ್ದಾರೆ ಎಂದರು.
ರೂ.10, ರೂ.100, ರೂ. 1000 ಮುದ್ರಿತ ಕೂಪನ್ಗಳ ಸಹಾಯದಿಂದ ಧನ ಸಂಗ್ರಹ ನಡೆಯಲಿದೆ. 2 ಸಾವಿರಕ್ಕಿಂತ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತ ಅರ್ಪಿಸಿದ ಭಕ್ತರಿಗೆ ರಸೀದಿ ನೀಡಲಾಗುವುದು. ಅಲ್ಲದೆ ಈ ಭಕ್ತರು ಭಾರತೀಯ ಆದಾಯ ತೆರಿಗೆ ಕಾಯಿದೆಯ 80 ಜಿ ಸೆಕ್ಷನ್ ಅಡಿಯಲ್ಲಿ ತೆರಿಗೆ ವಿನಾಯಿತಿಯ ಸೌಲಭ್ಯ ಪಡೆಯಬಹುದಾಗಿದೆ .ಈ ಹಣ ಸಂಗ್ರಹಣೆಯ ವ್ಯವಸ್ಥೆ ಸಂಪೂರ್ಣ ಪಾರದರ್ಶಕವಾಗಿದೆ. ಸಂಗ್ರಹವಾದ ಹಣವನ್ನು 48 ಗಂಟೆಯ ಒಳಗಡೆ ತೀರ್ಥಕ್ಷೇತ್ರ ಟ್ರಸ್ಟಿನ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಶರಣ್ ಪಂಪ್ವೆಲ್ ವಿವರಿಸಿದರು.