Thursday, February 25, 2021

Latest Posts

‘ಅಯ್ಯೋ, ಎಲ್ಲಾ ಕಳೆದುಕೊಂಡೆ’ ಎಂದು ಕೊರಗುವರೇ, ಈ ಸುದ್ದಿ ಓದಿ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ತಮಿಳುನಾಡು ಮೂಲದ ಇಳವರಸಿ ಜಯಕಾಂತ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಸಾಮಾಜಿಕ ಜಾಲತಾಣಗಲ್ಲಿ ಸಖತ್ ಚರ್ಚೆಗೆ ವೇದಿಕೆಯಾಗಿರುವ ಈಕೆ ಬದುಕಿನ ಕಥೆ ‘ಅಯ್ಯೋ, ಎಲ್ಲಾ ಕಳೆದುಕೊಂಡೆ’ ಎಂದು ಕೊರಗುವ ಎಲ್ಲರಿಗೂ ಸ್ಪೂರ್ತಿ. ಕೇರಳದ ತ್ರಿಶ್ಶೂರು ಜಿಲ್ಲೆಯ ನಿವಾಸಿಯಾಗಿರುವ ಇಳವರಸಿ, ಸಿಹಿ, ಕುರುಕಲು, ಕೇಕ್ ಹಾಗೂ ಉಪ್ಪಿನಕಾಯಿ ಸೇರಿದಂತೆ ೬೦ ಕ್ಕೂ ಹೆಚ್ಚು ಉತ್ಪನ್ನಗಳ ಮಾರಾಟ ಮಾಡುತ್ತಿದ್ದಾರೆ. ಈಕೆಯ ಸಾಧನೆಗೆ ಯುಎಇಯ ಅಂತಾರಾಷ್ಟ್ರೀಯ ಪೀಸ್ ಕೌನ್ಸಿಲ್‌ನ ’ಶ್ರೇಷ್ಠ ಉದ್ಯಮಿ’ ಪುರಸ್ಕಾರ ಕೂಡಾ ಸಂದಿದೆ.
ತನ್ನ ಹೆತ್ತವರು ನಂಬಿದ್ದ ಕುರುಕಲು ಹಾಗೂ ಸಿಹಿ ತಿಂಡಿ ಕಸುಬನ್ನೇ ಮುಂದುವರಿಸಿಕೊಂಡ ಇಳವರಸಿಗೆ ಮದುವೆಯಾದ ಬಳಿಕ ತಾನೊಂದು ಉದ್ಯಮಿಯಾಗಬೇಕು ಎಂಬ ಬಯಕೆಯಾಗಿತ್ತು. ಇದರ ಮುಂದುವರಿದ ಭಾಗವಾಗಿ ಪತಿ, ಮಕ್ಕಳೊಂದಿಗೆ ಸೇರಿಕೊಂಡು ಬ್ಯಾಂಕ್ ಸಾಲದ ನೆರವಿನಲ್ಲಿ ಆಕೆ ತ್ರಿಶ್ಶುರಿನಲ್ಲಿ ಸೂಪರ್ ಮಾರ್ಕೆಟ್ ಆರಂಭಿಸಿದ್ದರು. ನೋಡನೋಡುತ್ತಲೇ ಉದ್ಯಮ ಬೆಳೆಯಿತಲ್ಲದೆ, ಸುಮಾರು ೫೦ ಮಂದಿಗೆ ಉದ್ಯೋಗ ನೀಡಲೂ ಅವರು ಶಕ್ತರಾಗಿದ್ದರು. ಆದರೆ ವಿಧಿ ಆಟ ಬೇರೆಯೇ ಇತ್ತು. ತಮ್ಮ ಅಂಗಡಿಯಲ್ಲಿ ನಡೆದ ಕಳ್ಳತನದಲ್ಲಿ ಆಕೆ ಎಲ್ಲವನ್ನೂ ಕಳೆದುಕೊಂಡುಬಿಟ್ಟಿದ್ದರು. ಈ ಘಟನೆ ಆಕೆಗೆ ಎಷ್ಟು ಶಾಕ್ ನೀಡಿತ್ತು ಎಂದರೆ, ಇಳವರಸಿ ತಿಂಗಳುಗಳ ಮಟ್ಟಿಗೆ ಆಸ್ಪತ್ರೆ ಸೇರಿಕೊಂಡಿದ್ದರು. ಆದರೆ ಸುಮ್ಮನೆ ಕೊರಗಉತ್ತಾ ಕುಳಿತುಕೊಳ್ಳದ ಇಳವರಸಿ, ವಿಧಿಯ ಆಟವನ್ನು ಸವಾಲಾಗಿ ಸ್ವೀಕರಿಸಿದ ಆಕೆ, ಕಳೆದುಕೊಂಡಿದ್ದನ್ನು ಮತ್ತೆ ಗಳಿಸಲು ದೃಢ ನಿರ್ಧಾರ ಕೈಗೊಂಡರು.
ತ್ರಿಶ್ಶೂರಿನ ರೈಲ್ವೇ ನಿಲ್ದಾಣದಲ್ಲಿ ಪುಟ್ಟದೊಂದು ಚಿಪ್ಸ್ ಸ್ಟಾಲ್ ಹಾಕಿಕೊಂಡ ಇಳವರಸಿ, ಕಠಿಣ ಪರಿಶ್ರಮದಿಂದ ಕುಟುಂಬದಿಂದ ಬಳಿವಳಿಯಾಗಿ ಬಂದ ಕೌಶಲ್ಯವನ್ನು ಬಳಸಿಕೊಂಡು ಮತ್ತೆ ತಮ್ಮದೇ ಆದ ಉದ್ಯಮ ಸಾಮ್ರಾಜ್ಯ ಸ್ಥಾಪಿಸಿದ್ದಾರೆ. ಅದಾಗಿ ಕೆಲವೇ ಸಮಯದಲ್ಲಿ ತ್ರಿಶ್ಶೂರಿನಲ್ಲಿ ಇನ್ನೂ ನಾಲ್ಕು ಸ್ಟಾಲ್‌ಗಳನ್ನು ತೆರೆದ ಇಳವರಸಿಯ ತಿಂಡಿಗಳು ಈಗ ದೇಶ, ವಿದೇಶದಲ್ಲಿಯೂ ಗಮನಸೆಳೆಯುತ್ತಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!