Monday, August 8, 2022

Latest Posts

ಅರಣ್ಯದಲ್ಲಿರುವ ಕೆರೆಗಳ ಅಭಿವೃದ್ಧಿಯಿಂದ ಕಾಡಾನೆ ಹಾವಳಿ ನಿಯಂತ್ರಣ ಸಾಧ್ಯ

ಹೊಸದಿಗಂತ ವರದಿ, ಸೋಮವಾರಪೇಟೆ:

ಅರಣ್ಯ ಇಲಾಖೆಯವರು ಅರಣ್ಯಗಳ ಒಳಗೆ ಕೆರೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಮುಂದಾದರೆ ಕಾಡಾನೆ ಹಾವಳಿಯನ್ನು ನಿಯಂತ್ರಿಸಬಹುದು ಎಂದು ತಾ.ಪಂ.ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಸಲಹೆ ಮಾಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಭೆಯಲ್ಲಿ ಮಾತನಾಡಿದ ಅವರು, ಮೀನುಕೊಲ್ಲಿ ಅರಣ್ಯದಲ್ಲಿ ಬ್ರಿಟಿಷರ ಕಾಲದ ಕೆರೆ ಇದ್ದು, ಇದುವರೆಗೂ ಕನಿಷ್ಟ ಹೂಳೆತ್ತುವ ಕಾರ್ಯಕ್ಕೂ ಇಲಾಖೆ ಮುಂದಾಗಿಲ್ಲ ಎಂದು ಆರೋಪಿಸಿದರು. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಅರಣ್ಯದಲ್ಲಿರುವ ಕೆರೆಗಳನ್ನು ದುರಸ್ತಿ ಪಡಿಸಲಾಗುವುದು ಎಂದು ಸೋಮವಾರಪೇಟೆ ಮತ್ತು ಶನಿವಾರಸಂತೆ ಆರ್.ಎಫ್.ಒ ಹೇಳಿದರು.

ಸರ್ವೆ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ದೂರಿದರು. ಮಧ್ಯವರ್ತಿಗಳ ಮೂಲಕ ಹೋದರೆ ಮಾತ್ರ ಕೆಲಸವಾಗುತ್ತವ.ತಹಶೀಲ್ದಾರ್‌ರವರು ಇಂತಹವರನ್ನು ಕಛೇರಿಯಿಂದ ದೂರ ಇಡಬೇಕೆಂದು ಹೇಳಿದರು.

ಇಂತಹ ಆರೋಪಗಳಿದ್ದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ ಎಂದು ತಹಶೀಲ್ದಾರ್ ಗೋವಿಂದರಾಜ್ ಸಮಜಾಯಿಷಿಕೆ ನೀಡಿದರು.
ಕೆಲವು ಇಲಾಖೆಯ ಅಧಿಕಾರಿಗಳು ಅನುಪಾಲನಾ ವರದಿಯನ್ನು ನೀಡುತ್ತಿಲ್ಲ.ಮುಂದಿನ ಸಭೆ ನಡೆಯುವ ಸಂದರ್ಭ ಕಡ್ಡಾಯವಾಗಿ ಒಂದು ವಾರ ಮುಂಚಿತವಾಗಿ ಅನುಪಾಲನಾ ವರದಿಯನ್ನು ತಾಲೂಕು ಪಂಚಾಯಿತಿ ಕಛೇರಿಗೆ ಸಲ್ಲಿಸಬೇಕೆಂದು ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಸಭೆಗೆ ತಿಳಿಸಿದರು.

ಚೆಟ್ಟಳ್ಳಿಯಲ್ಲಿ ಬ್ಯಾಂಕ್,ಶುದ್ಧ ಕುಡಿಯುವ ನೀರಿನ ಘಟಕ ಮತ್ತು ನ್ಯಾಯಬೆಲೆ ಅಂಗಡಿ ಸಮೀಪ ಹಂದಿಗೂಡು ಇದ್ದು ಸುತ್ತಮುತ್ತಲಿನ ವಾತಾವರಣ ಕಲುಷಿತಗೊಂಡಿದೆ.ಇದನ್ನು ತೆರವುಗೊಳಿಸಲು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಗ್ರಾಮ ಪಂಚಾಯಿತಿ, ಪಶುವೈದ್ಯಕೀಯ ಇಲಾಖೆ,ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗದೇ ಇದ್ದಲ್ಲಿ ಇಲಾಖಾ ಕಛೇರಿ ಎದುರು ಧರಣಿ ಸತ್ಯಾಗ್ರಹ ಮಾಡುವುದಾಗಿ ಎಂದು ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಎಚ್ಚರಿಕೆ ನೀಡಿದರು.

ಮೀನುಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು ಫಲಾನುಭವಿಗಳನ್ನು ಅವರೇ ಆಯ್ಕೆ ಮಾಡಿ ಅವರೇ ಮೀನು ಮರಿಗಳನ್ನು ವಿತರಿಸುತ್ತಾರೆ.ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.ಸಾಮಾನ್ಯ ಸಭೆ ಮತ್ತು ಪ್ರಗತಿಪರಿಶೀಲನಾ ಸಭೆಗಳಿಗೆ ನಿರಂತರ ಗೈರು ಹಾಜರಾಗುತ್ತಾರೆ ಎಂದು ಉಪಾಧ್ಯಕ್ಷರು ಸಭೆಗೆ ತಿಳಿಸಿದರು.

ಪಟ್ಟಣದಲ್ಲಿ ಬೀಡಾಡಿ ದನಗಳು ಹಾಗೂ ನಾಯಿಗಳ ಹಾವಳಿ ಹೆಚ್ಚಾಗಿದ್ದರೂ ಪಟ್ಟಣ ಪಂಚಾಯಿತಿ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.ಸೋಮವಾರಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಸಭೆಗಳಿಗೆ ಗೈರು ಹಾಜರಾಗುತ್ತಿರುವ ಕುರಿತು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss