Sunday, February 28, 2021

Latest Posts

ಅರಣ್ಯ ಇಲಾಖೆ ಕಾರ್ಕಳ ವನ್ಯಜೀವಿ ವಿಭಾಗದ ಕಾರ್ಯಾಚರಣೆ: ಕಸ ಎಸೆಯುವವರಿಗೆ ದಂಡ ಪ್ರಯೋಗ!!

ಹೊಸ ದಿಗಂತ ವರದಿ, ಉಡುಪಿ

ಅರಣ್ಯ ಇಲಾಖೆ ಕಾರ್ಕಳ ವನ್ಯಜೀವಿ ವಿಭಾಗವು ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆ ಘಾಟಿಯಲ್ಲಿ ಕಾಡು ಪ್ರಾಣಿಗಳಿಗೆ ಆಹಾರ ತಿನ್ನಿಸುವವರು ಹಾಗೂ ರಸ್ತೆ ಬದಿ ಆಹಾರ ಪೊಟ್ಟಣಗಳನ್ನು ಎಸೆಯುವವರ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ವಾರಾಂತ್ಯದಲ್ಲಿ ಕಾರ್ಯಾಚರಣೆಗೆ ಇಳಿದಿದೆ.
ಈ ಹಿನ್ನೆಲೆಯಲ್ಲಿ ಶನಿವಾರ ಸೋಮೇಶ್ವರದಿಂದ ಆಗುಂಬೆವರೆಗಿನ10 ಕಿ.ಮೀ. ರಸ್ತೆಯುದ್ದಕ್ಕೂ ಹೆಬ್ರಿ, ಕಾರ್ಕಳ, ಅಮಾಸೆಬೈಲು ಮತ್ತು ಸಿದ್ದಾಪುರ ವನ್ಯ ಜೀವಿ ವಿಭಾಗದ ಸುಮಾರು 40 ಮಂದಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು.  ಪ್ರಾಣಿಗಳಿಗೆ ಆಹಾರ ತಿನ್ನಿಸುವ ಮತ್ತು ರಸ್ತೆ ಬದಿ ಆಹಾರ ಪೊಟ್ಟಣ, ಪ್ಲಾಸ್ಟಿಕ್ ಎಸೆಯುವ ವಾಹನ ಚಾಲಕರಿಂದ ದಂಡ ವಸೂಲಿ ಮಾಡಲಾಯಿತು.

ಅಪರಾಧಕ್ಕೆ ನಿಗದಿ ಪಡಿಸಿದ ದಂಡ
ರಸ್ತೆಬದಿ ತ್ಯಾಜ್ಯ, ಪ್ಲಾಸ್ಟಿಕ್ ಕಸ ಇತ್ಯಾದಿ ಎಸೆಯುವುದಕ್ಕೆ 100 ರೂ., ರಸ್ತೆ ಬದಿ ಪೂರ್ವಾನುಮತಿ ಇಲ್ಲದೇ ಅರಣ್ಯಕ್ಕೆ ಪ್ರವೇಶ ಮಾಡುವುದು, ರಸ್ತೆಯ ಬದಿಯ ಜಲಪಾತಗಳಲ್ಲಿ ಸ್ನಾನ ಮಾಡುವುದು, ರಸ್ತೆ ವಾಹನ ತೊಳೆಯುವುದು, ಅಡುಗೆ ತಯಾರಿಸುವುದು, ರಾಷ್ಟ್ರೀಯ ಉದ್ಯಾನವನದ ಒಳಗೆ ಸಕಾರಣವಿಲ್ಲದೆ ನಿಗದಿಪಡಿಸಿದ ಅವಧಿಗಿಂತ ಹೆಚ್ಚು ಸಮಯ ಉಳಿಯುವುದಕ್ಕೆ ತಲಾ 200ರೂ. ಮತ್ತು ವನ್ಯಪ್ರಾಣಿಗಳಿಗೆ ತಿಂಡಿ ತಿನಿಸು ನೀಡುವುದಕ್ಕೆ ೫೦ರೂ. ದಂಡವನ್ನು ನಿಗದಿಪಡಿಸಲಾಗಿದೆ.

ಆಹಾರ ಎಸೆದವರಿಂದ ದಂಡ ವಸೂಲಿ
ರಸ್ತೆ ಬದಿ ಆಹಾರ ಎಸೆದ ಮೂವರಿಂದ ಅರಣ್ಯ ಇಲಾಖೆ ಸಿಬ್ಬಂದಿ ದಂಡ ವಸೂಲಿ ಮಾಡಿದರು. ಅಲ್ಲದೇ ಘಾಟಿ ಆರಂಭದ ಸೋಮೇಶ್ವರದಲ್ಲಿ ಮತ್ತು ಆಗುಂಬೆ ಕೊನೆಯಲ್ಲಿ ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯ ನಡೆಸಿದರು. ಇಲ್ಲಿ ಜಾಗೃತಿ ಫಲಕಗಳನ್ನು ನೆಟ್ಟು, ಜನಜಾಗೃತಿ ಮೂಡಿಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಸಿದ್ದಾಪುರ ಸಹಾಯಕ ಅರಣ್ಯಾಧಿಕಾರಿ ಭಗವನ್‌ದಾಸ್ ಕುಡ್ತಲ್‌ಕರ್, ಹೆಬ್ರಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್, ಅಮಾಸೆಬೈಲು ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್ ಹಾಗೂ ನಾಲ್ಕು ವಲಯಗಳ ಸಿಬ್ಬಂದಿ ಪಾಲ್ಗೊಂಡಿದ್ದರು.

ಮನುಷ್ಯರ ಮೇಲೆ ದಾಳಿ ನಡೆಸುವ ಅಪಾಯವೇ ಅಧಿಕ:
ಈ ಕಾರ್ಯಾಚರಣೆಯನ್ನು ಆಗುಂಬೆ ಘಾಟಿಯ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಾದು ಹೋಗುವ ಶನಿವಾರ ಮತ್ತು ಭಾನುವಾರ ನಡೆಸಲಾಗುತ್ತಿದೆ. ಮನುಷ್ಯ ಸೇವಿಸುವ ಆಹಾರ, ಜಂಕ್ ಫುಡ್‌ಗಳನ್ನು ಪ್ರಾಣಿಗಳಿಗೆ ನೀಡುವುದರಿಂದ ಅದರ ಆಹಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೆ ಅದರ ಆಹಾರ ಕ್ರಮಗಳನ್ನು ಬದಲಾಗಿ, ಇದೇ ಆಹಾರಕ್ಕೆ ಹೊಂದಿಕೊಳ್ಳುವ ಸಾಧ್ಯತೆ ಇರುತ್ತದೆ. ಆಹಾರ ಸಿಗದೆ ಇದ್ದಾಗ ಮಕ್ಕಳು, ಮನುಷ್ಯರ ಮೇಲೆ ದಾಳಿ ನಡೆಸುವ ಅಪಾಯವಿರುತ್ತದೆ. ಅಲ್ಲದೆ ರೋಗ ಹರಡುವಿಕೆಗೂ ಕಾರಣವಾಗುತ್ತದೆ ಎನ್ನುತ್ತಾರೆ ಹೆಬ್ರಿ ವನ್ಯಜೀವಿ ಅರಣ್ಯ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!