ಮಂಡ್ಯ: ನಗರದ ಹೊರ ವಲಯದಲ್ಲಿರುವ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯದ ಶುದ್ದೀಕರಣ, ಹೋಮ-ಹವನಾದಿಗಳನ್ನು ಪೂರ್ಣಗೊಳಿಸಲಾಗಿದ್ದು, ನಾಳೆಯಿಂದ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಶಾಸಕ ಎಂ. ಶ್ರೀನಿವಾಸ್ ತಿಳಿಸಿದರು.
ಕಳೆದ ಕೆಲ ದಿನಗಳ ಹಿಂದೆ ದೇವಸ್ಥಾನದ ಆವರಣದಲ್ಲಿ ನಡೆದ ಮೂವರು ಅರ್ಚಕರ ಹತ್ಯೆ ನಂತರ ದೇವಾಲಯದ ಬಾಗಿಲನ್ನು ಮುಚ್ಚಲಾಗಿತ್ತು. ಪುರೋಹಿತರ ಸಾನಿಧ್ಯದಲ್ಲಿ ಮೂರು ದಿನಗಳ ಕಾಲ ಶುದ್ಧೀಕರಣ ಕೈಂಕರ್ಯ ನಡೆಸಿ ದೇವಾಲಯದ ಶುದ್ಧೀಕರಣವನ್ನು ನಡೆಸಲಾಗಿದೆ. ಇದೀಗ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ದೇವಾಲಯದಲ್ಲಿ ಕಳ್ಳತನ ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸುವ ಸಲುವಾಗಿ ಬೆಳಗ್ಗೆ ಮತ್ತು ರಾತ್ರಿ ವೇಳೆಯಲ್ಲಿ ಗನ್ಮ್ಯಾನ್ಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ದೇವಸ್ಥಾನದ ಕಾಂಪೌಂಡ್ ಎತ್ತರಿಸಿ ರಕ್ಷಣೆ ಒದಗಿಸಲು ತೀರ್ಮಾನಿಸಲಾಗಿದೆ ಎಂದರು.
ಏಳೆಂಟು ಗ್ರಾಮಗಳ ಗ್ರಾಮಸ್ಥರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಎಂದಿನಂತೆ ದೇವಸ್ಥಾನದ ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಹೋಗಲು ಸಮಿತಿಯವರು ಶ್ರಮಿಸಬೇಕು. ಅಗತ್ಯ ಅಭಿವೃದ್ಧಿಗೆ ಮುಂದಾಗಬೇಕು. ಈಗಾಗಲೇ ನಾನು ದೇವಸ್ಥಾನದ ಯಾತ್ರೀ ನಿವಾಸಕ್ಕೆ 1 ಕೋಟಿ ಹಾಗೂ ಅಭಿವೃದ್ಧಿಗೆ 50 ಲಕ್ಷ ಅನುದಾನ ನೀಡಿದ್ದೇನೆ. ಇನ್ನೂ ಹೆಚ್ಚಿನ ಅನುದಾನಕ್ಕೆ ಸಚಿವರ ಮೇಲೆ ಒತ್ತಡ ಹಾಕುವುದಾಗಿ ಭರವಸೆ ನೀಡಿದರು.
ತಹಸೀಲ್ದಾರ್ ಚಂದ್ರಶೇಖರ ಶಂ.ಗಾಳಿ ಮಾತನಾಡಿ, ಕಳೆದ ಮೂರು ದಿನಗಳಿಂದ ದೇವಾಲಯದ ಆವರಣದಲ್ಲಿ ಶುದ್ಧೀಕರಣ ಕಾರ್ಯ ಕೈಗೊಳ್ಳಲಾಗಿದೆ. ಮುಜರಾಯಿ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರೆ ಎಲ್ಲ ಪ್ರಮುಖರೊಟ್ಟಿಗೆ ಸಭೆ ನಡೆಸಿ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎಂದರು.
ದೇವಾಲಯದ ರಕ್ಷಣೆ ದೃಷ್ಠಿಯಿಂದ ಈಗಾಗಲೇ 6 ಅತ್ಯಾಧುನಿಕ ಸಿಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅದರಲ್ಲಿ 360 ಡಿಗ್ರಿ ಕವರ್ ಮಾಡುವ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಗನ್ಮ್ಯಾನ್ ನಿಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಜಿಲ್ಲಾ ಪೆÇಲೀಸ್ ಇಲಾಖೆಗೆ ಬಿಟ್ಟ ವಿಚಾರವಾಗಿದೆ ಎಂದರು.
ಇದೀಗ ಎಲ್ಲ ಪೂಜಾ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ. ಮುಂದೆ 48 ದಿನದ ಮಂಡಲ ಪೂಜೆಯನ್ನು ಇನ್ನಷ್ಟು ಅದ್ದೂರಿಯಾಗಿ ನಡೆಸಲು ನಿಶ್ಚಯಿಸಲಾಗಿದೆ. ರಾಜ್ಯದ ಪ್ರಮುಖರು, ಸಚಿವರನ್ನು ಅಂದಿನ ಪೂಜೆಗೆ ಆಹ್ವಾನಿಸಲು ನಿರ್ಧರಿಸಲಾಗಿದೆ. ದೇವಸ್ಥಾನ ಸಮಿತಿಯವರು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ದೇವಸ್ಥಾನದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಕೋರಿದರು.