Thursday, July 7, 2022

Latest Posts

ಅಲೆಮಾರಿ ಜನಾಂಗದವರ ಸರ್ವೆಗೆ ಸರ್ಕಾರ ಚಿಂತನೆ : ವಸತಿ ಸಚಿವ ವಿ.ಸೋಮಣ್ಣ

ಚಿತ್ರದುರ್ಗ: ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ಅಲೆಮಾರಿ ಜನಾಂಗಗಳ ಸರ್ವೆ ಕಾರ್ಯವನ್ನು ಬಿಜೆಪಿ ಸರ್ಕಾರ ಪ್ರಾರಂಭ ಮಾಡಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಲೆಮಮಾರಿ ಜನಾಂಗದವರು ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ಸರ್ವೆ ಕಾರ್ಯ ಪೂರ್ಣವಾದ ನಂತರ ಅವರಿಗೂ ಸಹ ಮನೆಗಳನ್ನು ನೀಡುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು.
ಸರ್ಕಾರ ಬಡವರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಕಾಲಕಾಲಕ್ಕೆ ಅನುಗುಣವಾಗಿ ಜಾರಿ ಮಾಡುತ್ತಿದೆ. ಅದನ್ನು ಫಲಾನುಭವಿಗಳಿಗೆ ತಿಳಿಸಿ ಅರ್ಹರಿಗೆ ತಲುಪಿಸುವ ಕಾರ್ಯವಾಗಬೇಕಿದೆ. ಇದನ್ನು ಪಕ್ಷದ ಕಾರ್ಯಕತರ್ಯರು, ಮುಖಂಡರು ಜವಾಬ್ಧಾರಿಯಿಂದ ಮಾಡಬೇಕು ಎಂದ ಅವರು, ಈಗಾಗಲೇ ಸುಳ್ಳು ಹೇಳಿ ಮನೆಗಳನ್ನು ಪಡೆದಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಚುನಾವಣೆಯ ಸಮಯದಲ್ಲಿ ಮಾತ್ರ ಮತದಾರರ ಮನೆ ಬಾಗಿಲಿಗೆ ಹೋಗಿ ಮತ ಕೇಳುವುದಲ್ಲ. ನಮ್ಮ ಸರ್ಕಾರ ಬಂದಾಗ ಜನತೆಯ ಋಣ ತೀರಿಸುವ ಕೆಲಸ ಮಾಡಬೇಕು. ನಮ್ಮನ್ನು ಆಯ್ಕೆ ಮಾಡಿದ ಮತದಾರರಿಗೆ ಸೌಲಭ್ಯ ದೂರಕಿಸುವ ಕಾರ್ಯ ಮಾಡಬೇಕಿದೆ. ಯಾವುದೇ ಯೋಜನೆಯ ಫಲಾನಿಭವಿಗಳ ಪಟ್ಟಿಯನ್ನು ಕಳುಹಿಸುವಾಗ ನಿಜವಾದ ಫಲಾನುಭವಿಗಳನ್ನು ಗುರುತಿಸಬೇಕು. ಸ್ನೇಹಿತರು, ಸಂಬಂಧಿಕರು ಎಂದು ಪಟ್ಟಿಗೆ ಸೇರಿಸಬಾರದು. ನಮಗೆ ಮತ ಹಾಕಿಲ್ಲ ಎಂದು ಕಡೆಗಣಿಸಬಾರದು ಎಂದು ಕಿವಿಮಾತು ಹೇಳಿದರು.
ಕಳೆದ ಅನೇಕ ವರ್ಷಗಳಿಂದ ವಸತಿ ಇಲಾಖೆಯಲ್ಲಿ ಹಲವಾರು ಫೈಲ್‌ಗಳು ಧೂಳು ಹಿಡಿದಿದ್ದವು. ಅದನ್ನು ಸರಿಪಡಿಸಲು ೧೦ ತಿಂಗಳು ಹಿಡಿದಿದೆ. ನಿನ್ನೆ ಸಚಿವ ಸಂಪುಟದಲ್ಲಿ ವಸತಿ ಬಗ್ಗೆ ಹಲವಾರು ತೀರ್ಮಾನಗಳನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಮನೆಗಳ ನಿರ್ಮಾಣ ಕಾರ್ಯ ಚುರುಕಾಗಲಿದೆ. ೨೦೨೨ರ ವೇಳೆಗೆ ಎಲ್ಲರಿಗೂ ಸೂರು ಎಂಬ ಸೂತ್ರದಡಿ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಕೋವಿಡ್-೧೯ ಬಂದ ಮೇಲೆ ಅದರ ನಿವಾರಣೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ ಇಂದು ನಮ್ಮ ರಾಜ್ಯದಲ್ಲಿ ಕೋವಿಡ್-೧೯ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ರಾಜ್ಯದಲ್ಲಿ ಕೊರೋನಾ ಇದ್ದರೂ ಸಹಾ ಹಲವಾರು ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಈ ಸಮಯದಲ್ಲಿ ನಿನಗೂ ಕೊರೋನಾ ಬರುತ್ತದೆ ಎಂದು ಹಲವಾರು ಜನ ನನಗೆ ಹೆದರಿಸಿದ್ದಾರೆ. ಆದರೆ ಇದಕ್ಕೆ ನಾನು ಜಗ್ಗಿಲ್ಲ. ನಾನು ದೇವರ ಆಶೀರ್ವಾದದಿಂದ ಬಡವರ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಚಿತ್ರದುರ್ಗ ತೀರ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿ ಮನೆ ಇಲ್ಲದವರ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದ ಮನೆಗಳನ್ನು ನೀಡುವ ಸಮಯದಲ್ಲಿ ಚಿತ್ರದುರ್ಗ ಜಿಲ್ಲೆಯನ್ನು ಪರಿಗಣಿಸಿ ಹೆಚ್ಚಿನ ಪ್ರಮಾಣದಲ್ಲಿ ಮನೆಗಳನ್ನು ಮಂಜೂರು ಮಾಡುವಂತೆ ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭ  ಸಂಸದ ಎ.ನಾರಾಯಣಸ್ವಾಮಿ, ಬಿಜೆಪಿ ಅಧ್ಯಕ್ಷ ಮುರುಳಿ, ಮಾಜಿ ಅಧ್ಯಕ್ಷ ಕೆ.ಎಸ್.ನವೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಾಪುರ ಸುರೇಶ್, ಜಯಪಾಲಯ್ಯ, ಮಲ್ಲಿಕಾರ್ಜುನ್, ಸೇತುರಾಂ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ಮಹಿಳಾ ಮೋರ್ಚಾ ಅಧ್ಯಕ್ಷೆ ಶೈಲಜಾ ರೆಡ್ಡಿ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಶಂಭು, ಬಸಮ್ಮ, ಶಾಂತಮ್ಮ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss