ವಾಷಿಂಗ್ಟನ್: ಅಮೆರಿಕದಲ್ಲಿ ಸ್ಥಾಪಿಸಲಾಗಿರುವ ಭಾರತದ ಅಗ್ರ ನಾಲ್ಕು ಕಂಪನಿಗಳು ಒಂದು ಲಕ್ಷ ಜನರಿಗೆ ಉದ್ಯೋಗ ನೀಡಿವೆ ಎಂದು ತಿಳಿದುಬಂದಿದೆ.
ಇವುಗಳಲ್ಲಿ ಅಮೆರಿಕದಲ್ಲೇ ಕೇಂದ್ರ ಕಚೇರಿ ಹೊಂದಿದ್ದರೂ, ಭಾರತೀಯ ಮೂಲದ ಕಂಪನಿಯಾದ ಕಾಗ್ನಿಜಂಟ್, ಅಮೆರಿಕದ 46 ಸಾವಿರ ಜನರಿಗೆ ಉದ್ಯೋಗ ನೀಡಿದೆ ಎಂದು ನಾಸ್ಕಾಮ್ ಸಂಸ್ಥೆ ವರದಿ ತಿಳಿಸಿದೆ.
ಅದೇ ರೀತಿ, ಭಾರತದ್ದೇ ಕಂಪನಿಗಳಾದ ಟಿಸಿಎಸ್ 20 ಸಾವಿರ, ಇನ್ಫೋಸಿಸ್ 14 ಸಾವಿರ ಹಾಗೂ ಎಚ್ ಸಿ ಎಲ್ 13,400 ಅಮೆರಿಕನ್ನರಿಗೆ ಕೆಲಸ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟು ನಾಲ್ಕು ಕಂಪನಿಗಳಲ್ಲಿ ಕೆಲಸ ಮಾಡುವ ಅಮೆರಿಕ ನಾಗರಿಕರ ಸಂಖ್ಯೆಯೇ ಶೇ.70ರಷ್ಟಿದೆ. ದಿನೇದಿನೆ ಹೀಗೆ ಅಮೆರಿಕನ್ನರಿಗೆ ಉದ್ಯೋಗ ನೀಡುವ ಪ್ರವೃತ್ತಿ ಜಾಸ್ತಿಯಾಗುತ್ತಿದೆ ಎಂದು ತಿಳಿಸಿದೆ.
ಕರ್ನಾಟಕದ ಇನ್ಫೋಸಿಸ್ ಕಂಪನಿಯು 2017ರಲ್ಲಿ 10 ಸಾವಿರ ಅಮೆರಿಕ ನಾಗರಿಕರಿಗೆ ನೌಕರಿ ನೀಡುವ ಗುರಿ ಹೊಂದಿತ್ತು. ಆದರೆ ಮೂರೇ ವರ್ಷದಲ್ಲಿ ಉದ್ಯೋಗ ಪ್ರಮಾಣ 14 ಸಾವಿರ ದಾಟಿದೆ.
ಟಿಸಿಎಸ್ ಒಂದೇ ಇದೇ ವರ್ಷದಲ್ಲಿ 1,500 ಜನರನ್ನು ಕ್ಯಾಂಪಸ್ ಆಯ್ಕೆ ಮೂಲಕ ಅಮೆರಿಕ ನಾಗರಿಕರನ್ನು ನೇಮಿಸಲು ಯೋಜನೆ ರೂಪಿಸಿದೆ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮಿಲಿಂದ್ ಲಕ್ಕಡ್ ಮಾಹಿತಿ ನೀಡಿದ್ದಾರೆ.