ಕೊಪ್ಪಳ: ಈ ಹಿಂದೆ ಯೋಜಿಸಲಾದ ತಾಲ್ಲೂಕಿನ ಅಳವಂಡಿ-ಬೆಟಗೇರಿ ಏತನೀರಾವರಿ ಯೋಜನೆಯು ಈ ಭಾಗದ ಹೆಚ್ಚಿನ ರೈತರಿಗೆ ಅನುಕೂಲವಾಗದೇ ಇರುವ ಕಾರಣಕ್ಕೆ ಈ ಯೋಜನೆಯನ್ನು ಪರಿಷ್ಕೃತಗೊಳಿಸಿ ಹೆಚ್ಚು ಹೆಚ್ಚು ರೈತರಿಗೆ ಯೋಜನೆಯ ನೀರು ಒದಗಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಭಾಜಪಾ ಧುರೀಣ ಅಮರೇಶ ಕರಡಿಯವರು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರಲ್ಲಿ ಆಗ್ರಹ ಮಾಡಿದ್ದಾರೆ.
ತಾಲ್ಲೂಕಿನ ಅಳವಂಡಿ-ಬೆಟಗೇರಿ ಏತನೀರಾವರಿ ಯೋಜನೆಯ ಪ್ರದೇಶಕ್ಕೆ ಶನಿವಾರದಂದು ಭೇಟಿ ನೀಡಿ ಜಾಕ್ವೆಲ್ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಮಾತನಾಡಿರುವ ಅವರು, ಈ ಹಿಂದೆ ತಯಾರಿಸಲಾದ ಯೋಜನೆಯಂತೆ ಬೆಟಗೇರಿ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗುವಂತೆ ಇರಲಿಲ್ಲ. ಕೆಲವು ಗ್ರಾಮಗಳಿಗೆ ಮಾತ್ರ ಅನುಕೂಲವಾಗುವಂತೆ ಯೋಜನೆ ಸಿದ್ಧಪಡಿಸಲಾಗಿತ್ತು. ಇದರಿಂದಾಗಿ ಈ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಹಾಗೂ ಅಂತಹ ಹಳ್ಳಗಳಿಗೆ ನೀರು ದೊರಕದಂತಾಗಿದೆ. ಈ ಹಿನ್ನೆಲಯಲ್ಲಿ ರೈತಪರವಾದ ಬಿಜೆಪಿ ಸರ್ಕಾರ ಕೂಡಲೇ ಈ ಯೋಜನೆಯನ್ನು ಪರಿಷ್ಕೃತಗೊಳಿಸಿ ಬೆಟಗೇರಿ ಭಾಗದ ರೈತರಿಗೂ ಅನುಕೂಲವಾಗುವಂತೆ ಯೋಜನೆ ರೂಪಿಸಿ ಎಲ್ಲಾ ರೈತರಿಗೂ ಸೌಲಭ್ಯ ಸಿಗುವಂತಾಗಬೇಕು ಎಂದು ಮನವಿ ಮಾಡಿದ್ದಾರೆ.
ಪರಿಷ್ಕೃತ ಯೋಜನೆಯಿಂದಾಗಿ ಬೆಟಗೇರಿ ಭಾಗದ ೩ ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ಈ ಏತನೀರಾವರಿ ಯೋಜನೆಯ ನೀರು ದೊರಕುತ್ತದೆ. ಈ ಹಿಂದೆ ಇದೇ ಗ್ರಾಮಕ್ಕೆ ನೀರು ದೊರಕುವಂತೆ ಯೋಜನೆ ಮಾಡಲಾಗಿತ್ತು. ಹೆಸರಿಗೆ ಮಾತ್ರ ಬೆಟಗೇರಿ ಯೋಜನೆ ಇತ್ತು. ಆದರೆ ನೀರು ದೊರಕದೇ ಮುಂದಿನ ಗ್ರಾಮಕ್ಕೆ ನೀರು ಸಿಗುವಂತೆ ಈ ಹಿಂದಿನವರು ಮಾಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ, ಸಂಬಂಧಿಸಿದ ಇಲಾಖೆ ಸಚಿವರು ಹಾಗೂ ಕ್ರಿಯಾಶೀಲ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ಪಾಟೀಲ್ ಅವರು ಇತ್ತ ಗಮನಹರಿಸಿ ರೈತರ ಹಿತ ಕಾಪಾಡಬೇಕು ಎಂದು ವಿನಂತಿಸಿದರು.
ಕಾಮಗಾರಿ ನಡೆಯುತ್ತಿರುವ ಪ್ರದೇಶ್ಕೆ ಭೇಟಿ ನೀಡಿ ಪರಿಶೀಲಿಸಿ ರೈತರಿಂದ ಕೆಲ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಾಂತೇಶ ಪಾಟೀಲ್ ಮೈನಳ್ಳಿ, ಎಪಿಎಂಸಿ ಸದಸ್ಯರಾದ ಬಸವರಾಜ ಈಶ್ವರಗೌಡ್ರ, ಬಿಜೆಪಿ ಯುವಮುಖಂಡರಾದ ವೀರೇಶ್ ಸಜ್ಜನ್, ಶರಣಪ್ಪ ಮತ್ತೂರು ಮತ್ತು ಭೀಮಣ್ಣ ಬೆಟಗೇರಿ ಉಪಸ್ಥಿತರಿದ್ದರು.