Friday, July 1, 2022

Latest Posts

ಅವನಿಗಾಗಿ ಮಾಡಿದ ತ್ಯಾಗಕ್ಕೆ ಅವಳಿಗೆ ಸಿಕ್ಕಿದ್ದು ಅವನ ಲಗ್ನಪತ್ರಿಕೆ ಮಾತ್ರ! ಈ ಸ್ಟೋರಿ ಓದಿದ್ರೆ ನೀವೂ ಕಣ್ಣೀರಾಗುತ್ತೀರಾ..

ಅದೊಂದು ತಿರುವು ದಾರಿ, ಅಲ್ಲೊಂದು ಪುಟ್ಟ ಆಲದ ಮರ, ಅದರ ಕೆಳ ಬದಿಯಲ್ಲಿ ಕಲ್ಲು ಬೇಂಚ್, ಮತ್ತೊಂದು ಬದಿಯಲ್ಲಿ ಹಳದಿ ಬೆಳಕು ಸೂಸುವ ದಾರಿದೀಪ. ಈ ಜಾಗ ಅವನಿಗೆ ಹೊಸತಲ್ಲ. ದಿನಕ್ಕೊಂದು ಬಾರಿ ಅಲ್ಲಿ ತನ್ನ ಪ್ರೀತಿಗಾಗಿ ಕುಳಿತಿರುತ್ತಿದ್ದ. ಅವನ ಪ್ರೀತಿಯು ಅವನನ್ನು ಹೆಚ್ಚು ಕಾಯಿಸುತ್ತಿರಲಿಲ್ಲ. ಹೇಳಿದ ವೇಳೆಗೆ ಬಂದು ಬಿಡುತ್ತಿದ್ದಳು. ಎಲ್ಲರೂ ದೃಷ್ಟಿ ಹಾಕುವ ಅಪರೂಪದ ಜೋಡಿ ಅವರದು.

ಅದೊಂದು ಮಳೆಗಾಲದ ಸಂಜೆ ಹಳದಿ ದೀಪದಡಿ ಮಾತನಾಡುತ್ತ ನಿಂತಿತ್ತು. ಆಗಲೇ ಮಳೆ ಸಣ್ಣದಾಗಿ ರಾಗವಿಟ್ಟಿತ್ತು. ಇನ್ನೇನು ವಿದಾಯ ಹೇಳಿ ಹೊರಡಬೇಕು, ಅಷ್ಟರಲ್ಲಿ ಅವಳಿಗೆ ಏನನಿಸಿತೋ ತನ್ನ ಪುಸ್ತಕದಲ್ಲಿದ್ದ ಪುಟ್ಟ ನವಿಲುಗರಿಯನ್ನು ಅವನ ಕೈಯಲ್ಲಿಟ್ಟು ತುಸು ನಕ್ಕು ಹೊರಟಳು. ಅದು ಅವನ ಪ್ರೀತಿಗೆ ಅವಳು ಕೊಟ್ಟ ಸಮ್ಮತಿಯ ಕುರುಹು. ಆ ಈಡೀ ದಿನ ಅವನಲ್ಲಿ ಬೆರಳೆಣಿಕೆಗೆ ಸಿಗದ ನಕ್ಷತ್ರದ ಸಂಭ್ರಮ.

ಪ್ರತಿದಿನ ಹುಟ್ಟುವ ಸೂರ‍್ಯ ಅವರಿಗೆ ಹೊಸ ಕನಸ ಹೊತ್ತು ತರುತ್ತಿದ್ದ. ತಮ್ಮ ಕನಸು, ಭಾವನೆ, ಸುಖ-ದುಃಖಗಳನ್ನು ದಿನದ ಒಂದು ಗಂಟೆ ಎದುರು ಬದರು ಕುಳಿತು ಹಂಚಿಕೊಳ್ಳುತ್ತಿದ್ದರು. ಸಾಸಿವೆಯಷ್ಟು ಸಂಶಯ ಬಂದರೂ ಬಗೆ ಹರಿಸಿಕೊಳ್ಳುತ್ತಿದ್ದೆರು. ಅವಳಿಂದ ಅವನಿಗೆ ದಿನವೂ ಹೊಸ ಹೊಸ ಕನಸು ತುಂಬಿದ ಪ್ರೇಮ ಪತ್ರ. ಪ್ರತಿ ಅಕ್ಷರವೂ ಅಲ್ಲಿ ಉಸಿರಾಡುತ್ತಿತ್ತು. ತುಟಿಯೂ ಬಿಚ್ಚದೇ ಮೌನಿಯಾಗಿರುತ್ತಿರುವವನಿಗೆ ಸಾಕೆನ್ನುವಷ್ಟು ಮಾತು ಕಲಿಸಿದ್ದಳು. ಅವನಿಗೆ ಅವಳನ್ನು ಬಿಟ್ಟರೆ ಬೇರಾವ ಜಗತ್ತಿರಲಿಲ್ಲ. ಪ್ರೇಮದಲ್ಲಿ ಸೋಲೇಕೆ ಸರ್ವನಾಶವೂ ಮಧುರವೇ ಎನ್ನುವಂತಾಗಿತ್ತು. ಎಲ್ಲೆಲ್ಲೂ ಅವಳೇ ಕೇವಲ ಅವಳ ಪ್ರೀತಿ ಮಾತ್ರ.

ಅವಳು ಆಗತಾನೆ ಪಿ.ಯು.ಸಿ ಓದುತ್ತಿರುವ ಹುಡುಗಿಯಾದರೂ ಭವಿಷ್ಯದ ಬಗ್ಗೆ ಆಲೋಚಿಸಿದ್ದಳು. ಕನಸು ಕಟ್ಟಿಕೊಂಡಿದ್ದಳು. ಅವಳಿಗೆ ಗೊತ್ತಿತ್ತು, ಪ್ರೀತಿಯ ಮುಂದೊಂದು ಜಗತ್ತಿದೆ ಅಲ್ಲಿ ಬದುಕುವುದು ಅನಿವಾರ್ಯ, ಆ ಬದುಕಿಗೆ ವಿದ್ಯೆ, ಬುದ್ಧಿ, ಸಾಮಾಜಿಕತೆ ಎಲ್ಲವೂ ಬೇಕು. ಇವುಗಳಿಗೆ ಅಡಿಪಾಯ ಬೆನ್ನೆಲುಬು ಪ್ರೀತಿ. ಇದನ್ನ ಅವನಿಗೆ ತಿಳಿಸಬೇಕು. ಪ್ರೀತಿ ಹಸಿವನ್ನ ಇಂಗಿಸಲಾರದು ಎನ್ನುವಷ್ಟರಲ್ಲಿಯೇ ಪರಿಸ್ಥಿತಿ ಕೈ ಮೀರಿತ್ತು. ಅವನು ಡಿಗ್ರಿ ದ್ವಿತೀಯ ವರ್ಷದ ಫಲಿತಾಂಶದಲ್ಲಿ ಎರಡು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದ. ಪುಸ್ತಕ ತೆಗೆದರೆ ನಿನ್ನದೇ ಕನಸು, ಪಾಠ ಕೇಳುತ್ತಿದ್ದರೆ ನಿನ್ನದೇ ನೆನಪು. ಬರಿ ನೀನೇ ಕಣ್ಣು ಕಟ್ಟುತ್ತೀಯಾ ಎಂದು ಅವಳ ಮುಂದೆ ಕಣ್ಣೀರಾಗಿದ್ದ. ಇವಳಿಗೂ ನೋವಾಯಿತು.

ಅವಳಿಗೆ ಗೊತ್ತು ಅವನು ಮನಸ್ಸು ಮಾಡಿದರೇ ಎಂತಹ ಕಾರ್ಯವನ್ನಾದರೂ ಸಾಧಿಸಬಲ್ಲ ಚಾಣಕ್ಯ ಎಂದು. ಆದರೆ ತನ್ನ ಪ್ರೀತಿಯಲ್ಲಿ ಕುರುಡಾಗಿದ್ದಾನೆ. ಭವಿಷ್ಯದ ಮುಂದೆ ಹೆಜ್ಜೆ ಇಡುವ ಮೊದಲೇ ತಪ್ಪುತ್ತಿದ್ದಾನೆ. ಇದನ್ನ ತಾನೇ ಸರಿ ಮಾಡಬೆಕೇಂದು ಕೊಂಡಳು. ಅವನೊಬ್ಬ ಒಳ್ಳೆಯ ವ್ಯಕ್ತಿಯಾಗಬೇಕು, ಉತ್ತಮ ಶಿಕ್ಷಣ ಸಿಗಬೇಕು, ಹಣಗಳಿಸಬೇಕು ಅಂದರೆ……. ಅವನಿಂದ. ಅವನ ಪ್ರೀತಿಯಿಂದ ನಾನು ದೂರ ಆಗಲೇಬೇಕು. ನನ್ನ ಪ್ರೀತಿಯಿಂದ ಅವನನ್ನಾ ಮುಕ್ತಗೊಳಿಸಬೇಕು. ಹೇಗೋ ತನ್ನ ವಿದ್ಯಾಭ್ಯಾಸ ಮುಗಿಸಲು ಐದು ವರ್ಷ ಅವಧಿ ಇದೆ. ಅಲ್ಲಿಯವರೆಗೆ ಅವನು ಗೆದ್ದಿರುತ್ತಾನೆ. ಆಮೇಲೆ ಇಬ್ಬರು ಮತ್ತೆ ಒಂದಾದರಾಯಿತು. ಎನ್ನುವಷ್ಟರಲ್ಲಿ ಹೃದಯ ಭಾರವಾಯಿತು, ಮುಸುಕೆಳೆದು ಬಿಕ್ಕಳಿಸಿದಳು.

ಮುಂಜಾನೆಯಿಂದಲೇ ಅವನಿಂದ ದೂರವಾಗುವ ಪ್ರಯತ್ನ ಪ್ರಾರಂಭವಾಯಿತು. ಪ್ರೀತಿ ಒಣಗಲಾರಂಭಿಸಿತು, ಮಾತುಗಳು,ಕನಸುಗಳು,ಭೇಟಿ ಎಲ್ಲವು ನಿಂತಿತು. ಒಂದು ಪ್ರೀತಿಯ ನೋಟವು ಇರಲಿಲ್ಲ. ಎಷ್ಟೋ ಒಲವಿನ ಪತ್ರಗಳನ್ನು ಬರೆದು ತನ್ನಲ್ಲಿಯೇ ಇಟ್ಟುಕೊಂಡಿದ್ದಳು. ಒಟ್ಟಿನಲ್ಲಿ ಅವನು ಗೆಲ್ಲಬೇಕೆಂಬುದೇ ಅವಳ ಗುರಿ. ಆದರೆ ಅವನು ಕ್ಷಣ ಕ್ಷಣವು ನರಳುತ್ತಿದ್ದ, ಮಂಕಾಗಿ ಹೊಗಿದ್ದ. ಆದರು ಹೇಗೋ ಅವಳನ್ನು ಮರೆತು ವಾಸ್ತವದೆಡೆ ಹೆಜ್ಜೆ ಹಾಕಲಾರಂಭಿಸಿದ. ಉತ್ತಮ ಅಂಕಗಳಿಸಿ ಪದವಿ ಮುಗಿಸಿದ. ಅವಳಿಗೆ ಹೇಳಿಕೊಳ್ಳಲಾಗದ ಖುಷಿ. ಉದ್ಯೋಗಕ್ಕಾಗಿ ಬೇರೆ ಊರಿಗೆ ಹೋದ, ಸ್ವಲ್ಪ ವರ್ಷಗಳ ನಂತರ ಉದ್ಯೋಗವನ್ನು ಗಿಟ್ಟಿಸಿಕೊಂಡ ಅವಳಿಗೆ ಆ ಸುದ್ದಿ ಕೇಳಿ ದೀಪಾವಳಿ ಸಂಭ್ರಮ.

ಅವತ್ತು ಅವಳೇಕೋ ನಿರಾಳತೆಯ ನಿಟ್ಟುಸಿರಾದಳು. ಅಷ್ಟರಲ್ಲಿ ಅವಳ ಪದವಿಯು ಮುಗಿದಿತ್ತು. ಎನ್ನೇನು ತನ್ನಿನಿಯನ ನೆರಳಿನಲ್ಲಿ ಬದುಕುವುದೊಂದೇ ಬಾಕಿ. ತನ್ನ ಪ್ರೀತಿಯನ್ನು ಸೇರಲು ಸಿದ್ದಳಾದಳು. ಅವನಿಗೆ ತನ್ನ ಪ್ರೀತಿಯನ್ನು ತಿಳಿಸಿ ಕ್ಷಮಾಪಣೆ ಕೋರಿ ಪತ್ರ ಬರೆದಳು. ಪೋಸ್ಟಿಗೆ ಹಾಕಬೇಕು ಅನ್ನುವಷ್ಟರಲ್ಲಿಯೇ ಪೊಸ್ಟಮ್ಯಾನ್ ಅವಳ ಕೈಗೊಂದು ಪತ್ರ ನೀಡಿದ. ಅದು ಅವನ ಮದುವೆಯ ಕರೆಯೋಲೆಯಾಗಿತ್ತು. ಕಾರಣವ ಹೇಳದೇ ಕಣ್ಣಿರು ಸುರಿದು ಕೈಯಲ್ಲಿದ್ದ ಪತ್ರ ಒದ್ದೆಯಾಗಿತ್ತು. ಮನಸ್ಸು ಚೀರಿತು, ನಿನ್ನ ಪ್ರೀತಿಯನ್ನು ನೀನೇ ಕೊಂದೆ ಎಂದು ಪದೇ ಪದೇ ಹಂಗಿಸಿತು.

ಪ್ರೀತಿಸಿದವರು ಸಿಗಬೇಕು ಎಂದು ಹೋರಾಡುವುದಕ್ಕಿಂತ, ಪ್ರೀತಿಸಿದವರು ಸಿಗದಿದ್ದರು ಸಂತೋಷವಾಗಿದ್ದರೆ ಸಾಕು ಎನ್ನುವ ನಿಸ್ವಾರ್ಥ ಪೀತಿಯೇ ವಿಶಾಲವಾದದ್ದು, ಅವಳ ಮನಸ್ಸೀಗ ನಿರಾಳವಾಗಿತ್ತು.

  • ಕಾವ್ಯಾ  ಜಕ್ಕೊಳ್ಳಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss