Tuesday, August 16, 2022

Latest Posts

ಅವನ ಮೊದಲ ಪ್ರೀತಿ ಅವನೆದುರೇ ಇನ್ನೊಬ್ಬನ ಕೈ ಹಿಡಿದು ಏಳು ಹೆಜ್ಜೆ ದಾಟಿತು!

ಅದು ಅವನ ಡಿಗ್ರಿ ಕೊನೆಯ ವರ್ಷ. ನೆನಪ ಬುತ್ತಿಯಲ್ಲಿ ಒಂದಿಷ್ಟು ಮುನಿಸುಗಳು, ಮರೆಯಲಾರದ ನೆನಪುಗಳು, ಕಣ್ಣಿರ ಸಾಲುಗಳು, ಇನ್ನೂ ನಗಿಸುತ್ತಿರುವ ಸಂತಸದ ಕ್ಷಣಗಳು ತುಂಬುತ್ತಿತ್ತು. ಸುತ್ತಾಟ, ಕಿತ್ತಾಟ, ಗಲಾಟೆ, ಮೋಜು,ಮಸ್ತಿ, ಕಾರಿಡಾರ್, ಕ್ಯಾಂಟೀನ್ ಎಲ್ಲದಕ್ಕೂ ವಿದಾಯ ಹೇಳಲು ಇನ್ನೇನು ಕೆಲವೇ ತಿಂಗಳುಗಳ ಪಯಣ ಬಾಕಿ ಇತ್ತು.

ಗಗನ್ ಅವನ ಜೀವನದಲ್ಲಿ ಹುಡುಗಿಯರ ಕಡೆಗೆ ನೋಡಿದವನಲ್ಲ, ಪ್ರೀತಿ ಎಂಬ ಎರಡಕ್ಷರವನ್ನು ಕನಸಿನಲ್ಲೂ ನೆನಪು ಮಾಡಿ ಕೊಂಡವನಲ್ಲ. ಹಳೆ ಲೆಕ್ಕವನ್ನೆಲ್ಲ ತೆಗೆದರೆ 20 ಕ್ಕೂ ಹೆಚ್ಚು ಜನ ಹುಡುಗಿಯರು ಅವನಿಗೆ ಪ್ರಪೋಸ್ ಮಾಡಿದ್ದಾರೆ. ಅವನು ಮಾತ್ರ ಅದ್ಯಾವದಕ್ಕೂ ಕೇರ್ ಅಂದವನಲ್ಲ. ಆದರೆ ಕಾಲೇಜ್ ಕೊನೆಯ ವರ್ಷ ಪ್ರೀತಿ ಎಂಬ ಕಳ್ಳ ಬೆಳದಿಂಗಳು ಅವನ ಹೃದಯದ ಕೋಣೆಯನ್ನು ಹೊಕ್ಕಿತ್ತು‌. ಹೃದಯ ತನ್ನ ಪ್ರೀತಿಯನ್ನು ಆರಿಸಿಕೊಂಡಿದ್ದು ಎಲ್ಲರಿಂದಲು ಗೌರಮ್ಮ ಎನ್ನಿಸಿಕೊಳ್ಳುತ್ತಿದ್ದ ಮೊದಲ ಬೆಂಚಿನ ಸುಂದರಿ ಧರಣಿಯನ್ನು. ಇವನಿಗೆ ಅವಳಲ್ಲಿ ಪ್ರೀತಿ ಹುಟ್ಟಲು ಕಾರಣ ಅವಳ‌ ಮೃದು‌ ಸ್ವಭಾವ. ಎಷ್ಟೇ‌ ರೇಗಿಸಿದರೂ ತಿರುಗಿ ನೋಡದ ಅವಳ ವರ್ತನೆ. ಒಟ್ಟಿನಲ್ಲಿ ಸೌಮ್ಯ ಮುಖದ ಗಂಭೀರ ಚೆಲುವೆ ಅವಳು. ಗೆಳೆಯರಲ್ಲಿ ಅವನ ಒನ್ವೇ ಲವ್ ಹೇಳಿಕೊಳ್ಳಲು ಹಿಂಜರಿಕೆ. “ಈ ಹಳ್ಳಿ ಗೌರಮ್ಮನ್ನ ಪ್ರೀತಿ ಮಾಡ್ತಿಯಾ” ಎಂದು ಆಡಿಕೊಂಡು ನಗ್ತಾರೆನೋ ಅನ್ನೊ ಭಯ. ಆದರೂ ಆಪ್ತ ಸ್ನೇಹಿತನಲ್ಲಿ ಹೇಳಿ ಕೊಂಡ. ಸ್ವಲ್ಪ ರೇಗಿಸಿದರು ಅವನ ಕನಸಿಗೆ ಹೆಗಲಾಗುವ ಭರವಸೆ ಕೊಟ್ಟ.

ಅವಳೊದಿಂಗೆ ಮಾತ್ರ ಪ್ರೀತಿ ನಿವೇದಿಸಿ ಕೊಳ್ಳಲು ಆಗಲೇ ಇಲ್ಲ. ಗಗನ್ ಹುಡುಗಿಯರೊಂದಿಗೆ ಮಾತನಾಡುವವನೇ ಅಲ್ಲ. ಆದರೂ ಧರಣಿಗಾಗಿ ಅವಳ ಸ್ನೇಹಿತೆಯರನ್ನು ಪರಿಚಯಿಸಿಕೊಂಡ. ಅವರೆಲ್ಲ ಸಹಾಯದಿಂದ ಅವಳಿಗೆ ಎಲ್ಲವನ್ನು ಹೇಳಬೇಕೆಂದು‌ ಎಷ್ಟೊ ದಿನ ಅವಳ ಹಿಂದೆಯೇ ಹೋಗಿದ್ದ. ಆದರೆ ಧೈರ್ಯ‌ ನೆಲಕಚ್ಚಿದಾಗ ಎಣ್ಣೆಯಲ್ಲಿ ಮಿಂದೆದ್ದ ಅವಳ ಜಡೆ ನೋಡಿಕೊಂಡು ವಾಪಸ್ ಆಗುತ್ತಿದ್ದ. ದಿನಗಳು ಏಣಿಕೆಗೆ ಸಿಗದೆ ಕಳೆಯಲಾರಂಭಿಸಿತು. ಇನ್ನು ತಡಮಾಡಿದರೆ ಪ್ರೀತಿ ಕೈ ಜಾರುವುದೆಂದು ಪ್ರೇಮಿಗಳ ದಿನ ಅವಳಿಗೆ ಪ್ರಪೋಸ್ ಮಾಡುವ ನಿರ್ಧಾರಕ್ಕೆ ಬಂದ.

ಅವತ್ತು ಫೆಬ್ರವರಿ 14 ಕಾಮನಬಿಲ್ಲು ಸಹ ಕಣ್ಣರಳಿಸಿ ನೋಡುತ್ತಿತ್ತು. ಅದೆಷ್ಟೋ ಜೋಡಿ ಹಕ್ಕಿಗಳು ರೆಕ್ಕೆ ಬಲಿತು ಹಾರುತ್ತಿದ್ದವು. ಗಗನ್ ಬೆನ್ನ ಹಿಂದೆ ಬೆಟ್ಟದಷ್ಟು ಭಯ ತುಂಬಿದ್ದರು ಎಂಜಲು ನುಂಗುತ್ತ ಕಾಲೇಜ್ ಹಿಂಬದಿಯ ಕಲ್ಲು ಬೆಂಚಿನ ಬಳಿ ಬರುವಂತೆ ಧರಣಿಗೆ ಹೇಳಿದ. ಮಾತಿಗೆ ತಪ್ಪದೆ ಕೆಲ ನಿಮಿಷದಲ್ಲಿ ಅವಳು ಬಂದಳು. ಗಗನ್ ತಡಮಾಡದೇ ಅವಳೆದುರು ಮೊಳಕಾಲೂರಿದ. ಪ್ರೀತಿಯನ್ನು ಹೇಲಿಕೊಂಡ. ಅವಳು ಬೆಚ್ಚಿ ಬಿದ್ದಳು. ತತ್ ಕ್ಷಣ ಉತ್ತರಿಸದವಳಂತೆ ಹಿಂದಕ್ಕೆ ಸರಿದಳು.‌ ಸ್ವಲ್ಪ ಸಮಯದ ನಂತರ ಅವನ ಕಣ್ಣುಗಳಲ್ಲಿ ತನ್ನ ಭವಿಷ್ಯದ ಕಿರಣಗಳನ್ನು ನೋಡುತ್ತಾ ಪುಟ್ಟ ನಗುವಿನೊಂದಿಗೆ ಧರಣಿ ಒಪ್ಪಿಗೆ ಸೂಚಿಸಿದಳು.

ನಾಲ್ಕು ಜನ‌ ಹುಬ್ಬೆರಿಸಿ ಮಾತನಾಡುವ ಗಗನ್ ಅದ್ಭುತವಾದ ವ್ಯಕ್ತಿತ್ವವೇ ಅವಳಿಗೆ ಅವನ ಪ್ರೀತಿಯನ್ನು ಒಪ್ಪಿ ಕೊಳ್ಳುವಂತೆ ಮಾಡಿತ್ತು. ತಮ್ಮ ಪ್ರೀತಿಯ ಕುರುಹುವಾಗಿ ಅದೇ ಬೆಂಚಿನ ಮೇಲೆ ಹೆಸರಿಗೆ ಹೆಸರು ಸೇರಿಸಿ ಬರೆದು ಸಂಭ್ರಮಿಸಿದರು.

ಪೋನ್, ಮೇಸೆಜ್, ಸಿನಿಮಾ ಸ್ವಲ್ಪ ಓದು ಇವುಗಳೊಂದಿಗೆ ಡಿಗ್ರಿ ಮುಗಿಸಿದರು. ಕಣ್ತುಂಬ ಅವಳ ಕನಸು ತುಂಬಿಕೊಂಡು ಅವಳಿಗಾಗಿಯೇ ಓದು ಮುಂದುವರೆಸಲು ಬೇರೆ ಊರಿಗೆ ಹೋದ. ಆದರೂ ಗಂಟೆಗಟ್ಟಲೆ ಮಾತು, ಆಗಾಗ ಬೇಟಿ ನಿಲ್ಲಲಿಲ್ಲ. ಸ್ವಲ್ಪ‌ದಿನಗಳಲ್ಲೆ ಹೇಗೋ ಪ್ರೀತಿ ವಿಚಾರ ಮನೆ ಮೊಳಗಿತು. ಸಂಪ್ರದಾಯಸ್ಥ ಕುಂಟುಂಬದ ಅವಳ ತಂದೆ ಅವರ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ. ಅವನಿಗಿಂತ ಇವಳು ಆರು ತಿಂಗಳು ದೊಡ್ಡವಳಾಗಿರುವುದೇ ತಂದೆಯ ನಿರಾಕರಣೆಗೆ ಕಾರಣವಾಯಿತು. ಇಬ್ಬರು ಬೇಡಿಕೊಂಡರು, ಗೋಳಿಟ್ಟರು ಆದರೆ ಪ್ರಯೋಜನವಾಗಲಿಲ್ಲ. 15 ದಿನಗಳಲ್ಲಿಯೇ ಮತ್ತೊಬ್ಬನೊಂದಿಗೆ ಧರಣಿಯ ಮದುವೆ ನಿಶ್ಚಯವಾಯಿತು. ಅವನೆದುರೇ ಅವನ ಮೊದಲ ಪ್ರೀತಿ ಇನ್ನೊಬ್ಬನ‌ ಕೈ ಹಿಡಿದು ಏಳು ಹೆಜ್ಜೆ ದಾಟಿದಳು.

ಆದರೆ ಇವನು‌ ಒಂದೇ ದೀಪದ ಧಗ ಧಗಕ್ಕೆ ರೆಕ್ಕೆ ತಗುಲಿಕೊಂಡು ಸುಟ್ಟ ಪತಂಗದಂತಾದ. ತಂತಿ ಇಲ್ಲದ ತಂಬೂರಿಯಾದ. ಅವಳಿಗಾಗಿ ಹಂಬಲಿಸುತ್ತಾ ಕಣ್ಣೀರಿಟ್ಟ. ಇವತ್ತಿಗೂ ಅವನು ಪ್ರೇಮಿಗಳ ದಿನ ಆ ಕಲ್ಲು ಬೆಂಚಿನಲ್ಲಿ ಕುಳಿತು ಅಳಿಸಿ ಹೋದ ತಮ್ಮ ಹೆಸರನ್ಮು ಹುಡುಕುತ್ತಾ ಕಣ್ಣೀರ ಮುತ್ತುಗಳನ್ನು ಸುರಿಸುತ್ತಾ, ಅಕ್ಷರಸಹ ಕಣ್ಣೀರಾಗಿ ಬರುತ್ತಾನೆ. ಅವನ ಮೊದಲ ಪ್ರೀತಿ ಮರೆಯಲಾಗದೇ ಇಂದಿಗೂ ಕಾಡುತಿದೆ.

  • ಕಾವ್ಯಾ ಜಕ್ಕೊಳ್ಳಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss