Saturday, August 13, 2022

Latest Posts

ಅವಿಭಜಿತ ಜಿಲ್ಲೆ ಎಲ್ಲಾ ಪ್ಯಾಕ್ಸ್‌ಗಳಲ್ಲಿ ಡಿಸಿಸಿ ಬ್ಯಾಂಕ್ ಮೈಕ್ರೋ ಎಟಿಎಂ ಬಳಕೆ: ಬ್ಯಾಲಹಳ್ಳಿಗೋವಿಂದ ಗೌಡ

ಕೋಲಾರ:  ದೇಶದಲ್ಲೇ ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್ ಪಾರದರ್ಶಕ ವಹಿವಾಟಿಗಾಗಿ ಮೈಕ್ರೊ ಎಟಿಎಂಗಳನ್ನು ಆರಂಭಿಸಿದ್ದು, ಮೂರು ತಿಂಗಳೊಳಗೆ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ಪ್ಯಾಕ್ಸ್‌ಗಳಲ್ಲಿ ಇದು ಕಾರ್ಯಾರಂಭ ಮಾಡಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ತಾಲ್ಲೂಕಿನ ದೊಡ್ಡಹಸಾಳದಲ್ಲಿ ಡಿಸಿಸಿ ಬ್ಯಾಂಕಿನಿಂದ ಕೋಲಾರ ದಕ್ಷಿಣ ಕಸಬಾ ಎಸ್‌ಎಫ್‌ಸಿಎಸ್  ಆಶ್ರಯದಲ್ಲಿ ೩೮ ಮಹಿಳಾ ಸಂಘಗಳಿಗೆ ೧.೫ ಕೋಟಿ ರೂ ಸಾಲ ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮೈಕ್ರೋ ಎಟಿಎಂ ಅಳವಡಿಕೆಯಿಂದ ಮಹಿಳೆಯರು,ರೈತರು ಸ್ಥಳೀಯ ಎಸ್‌ಎಫ್‌ಸಿಎಸ್‌ಗಳಲ್ಲೇ ಉಳಿತಾಯ ಖಾತೆ ತೆರೆದು ತಮ್ಮ ದೈನಂದಿನ ವಹಿವಾಟು ನಡೆಸಬಹುದಾಗಿದೆ, ಹಣ ಸಂದಾಯ ಹಾಗೂ ಡ್ರಾಗೆ ಸ್ಥಳದಲ್ಲೇ ಸ್ವೀಕೃತಿಯೂ ಸಿಗುವುದರಿಂದ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ, ನೀವಿರುವಲ್ಲೇ ವಹಿವಾಟು ನಡೆಸಬಹುದಾಗಿದೆ ಎಂದರು.
ಕಾಸಿಗಿಲ್ಲ ಓಟು ಆಂದೋಲನ ನಡೆಸಿ
ದಿವಂಗತ ಸಿ.ಬೈರೇಗೌಡ,ಪಿ.ವೆಂಕಟಗಿರಿಯಪ್ಪ ಹಾಗೂ ಅಂತರರಾಷ್ಟ್ರೀಯ ಸಹಕಾರಿ ಧುರೀಣರಾದ ಕೆ.ಶ್ರೀನಿವಾಸಗೌಡರಂತಹ ನಾಯಕರನ್ನು ಹೊಂದಿದ್ದ ಕೋಲಾರ ತಾಲ್ಲೂಕಿನಲ್ಲಿ ಸೇವೆಗಿಂತ ಹಣ ಮುಖ್ಯ ಎಂಬ ಭಾವನೆ ಹೋಗಲಾಡಿಸಬೇಕಾಗಿದೆ.
ಇಂತಹ ಸಂದರ್ಭದಲ್ಲಿ ತಾಯಂದಿರೇ ‘ಕಾಸಿಗಿಲ್ಲ ಓಟು’ ಎಂಬ ಆಂದೋಲನ ನಡೆಸುವ ಮೂಲಕ ಹಣಕ್ಕಿಂತ ಸೇವೆಯೇ ಮುಖ್ಯ ಎಂಬ ಭಾವನೆಯನ್ನು ಬಲಗೊಳಿಸಬೇಕು ಎಂದು ಮನವಿ ಮಾಡಿದರು.
ನಿಮಗೆ ಬಡ್ಡಿರಹಿತ ಸಾಲ ನೀಡುವ ಬ್ಯಾಂಕಿನಲ್ಲೇ ಠೇವಣಿ ಇಡಿ, ೨ಸಾವಿರ,೫,೧೦,೨೫ಸಾವಿರ ಹಾಗೂ ೧ಲಕ್ಷದ ಶ್ರೀಲಕ್ಷ್ಮಿ ಬಾಂಡ್‌ಗಳನ್ನು ಡಿಸಿಸಿ ಬ್ಯಾಂಕ್ ಹೊರ ತಂದಿದ್ದು, ಇತರೆ ಬ್ಯಾಂಕುಗಳಿಂದ ಹೆಚ್ಚಿನ ಬಡ್ಡಿ ನೀಡುತ್ತೇವೆ ಮಹಿಳೆಯರು ಇದರ ಸದುಪಯೋಗ ಪಡೆಯಿರಿ ಎಂದರು.
ಸಾಲ ಸದ್ಬಳಕೆಗೆ ಶ್ರೀನಿವಾಸಗೌಡರ ಕರೆ
ಶಾಸಕ ಕೆ.ಶ್ರೀನಿವಾಸಗೌಡ ಕಾರ್ಯಕ್ರಮ ಉದ್ಘಾಟಿಸಿ, ಸಾಲ ವಿತರಿಸಿ ಮಾತನಾಡಿ, ನಾನೂ ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿದ್ದೆ, ಡಿಸಿಸಿ ಬ್ಯಾಂಕ್ ಉಳಿಯುವುದಿಲ್ಲ ಎಂದೇ ಭಾವಿಸಿದ್ದೆ, ಆದರೆ ಗೋವಿಂದಗೌಡರು ಅಧಿಕಾರ ವಹಿಸಿಕೊಂಡು ಊಹಿಸಲಾಗದ ಕೆಲಸ ಮಾಡಿದ್ದಾರೆ ಎಂದರು.
೧೫೦೦ ಕೋಟಿ ಸಾಲ ವಿತರಣೆ ಸುಲಭದ ಮಾತಲ್ಲ, ಮಹಿಳೆಯರು,ರೈತರಿಗೆ ಅನುಕೂಲವಾಗಿದೆ, ಇದರ ಸದುಪಯೋಗ ಪಡೆದುಕೊಳ್ಳಿ, ಸಾಲವನ್ನು ಸಮರ್ಪಕವಾಗಿ ಮರುಪಾವತಿಸುವ ಮೂಲಕ ನಂಬಿಕೆ ಉಳಿಸಿಕೊಳ್ಳಿ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಮೂರು ಕೋಟಿ ಸಾಲ ಪಡೆಯುವ ನಂಬಿಕೆ ಇಲ್ಲವಾಗಿದ್ದ ಕಸಬಾ ಸೊಸೈಟಿ ಇಂದು ೨೫ ಕೋಟಿ ಸಾಲ ವಿತರಿಸುವಷ್ಟು ನಂಬಿಕೆ ಪಡೆದುಕೊಂಡಿದ್ದು, ಇದಕ್ಕೆ ಹಿಂದಿನ ಅಧ್ಯಕ್ಷ ಮುನೇಗೌಡರು, ಈಗಿನ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸ್ ಅವರ ಇಚ್ಚಾಶಕ್ತಿ,ಬದ್ದತೆಯೇ ಕಾರಣ ಎಂದರು.
ಬ್ಯಾಂಕಿನಲ್ಲಿ ತಪ್ಪಾಗಿದ್ದರೆ ತಿಳಿಸಿ ತಿದ್ದಿಕೊಳ್ಳುತ್ತೇವೆ ಆದರೆ ಸಹಿಸಿಕೊಳ್ಳಲಾಗದೇ ತೆವಲಿಗಾಗಿ ಮಾತನಾಡುವವರಿಗೆ ಉತ್ತರವೂ ನೀಡುವುದಿಲ್ಲ, ಕೂಲಿ ಮಾಡುವ ಬಡ ಮಹಿಳೆಗೂ ಸಾಲ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದೇವೆ ಎಂದರು.
ನಿರ್ದೇಶಕ ಕೆ.ವಿ.ದಯಾನಂದ್, ಗೋವಿಂದಗೌಡರ ಇಚ್ಚಾಶಕ್ತಿ, ಬದ್ದತೆಯಿದ ದಿವಾಳಿಯಾಗಿದ್ದ ಬ್ಯಾಂಕ್ ಈ ಮಟ್ಟಕ್ಕೆ ಬೆಳೆದಿದೆ, ಇದಕ್ಕೆ ಶಾಸಕ ಶ್ರೀನಿವಸಗೌಡರ ಆಶೀರ್ವಾದವೂ ಇದೆ, ಗೊಬ್ಬರ,ಪಡಿತರಕ್ಕೆ ಸೀಮಿತವಾಗಿದ್ದ ಸೊಸೈಟಿಗಳು ಕೋಟಿಗಟ್ಟಲೆ ವ್ಯವಹಾರ ನಡೆಸುವಂತಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚೆಂಜಿಮಲೆ ರಮೇಶ್,ದಕ್ಷಿಣ ಕಸಬಾ ಸೊಸೈಟಿ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸ್, ಸಿಇಒ ವೆಂಕಟೇಶ್,ಉಪಾಧ್ಯಕ್ಷ ಅಮ್ಮೇರಹಳ್ಳಿ ಶ್ರೀನಿವಾಸಪ್ಪ, ಟಿಎಪಿಸಿಎಂಎಸ್ ನಿರ್ದೇಶಕ ಶ್ರೀರಾಮರೆಡ್ಡಿ, ಸೊಸೈಟಿ ನಿರ್ದೇಶಕರಾದ ಟಿ.ಶ್ರೀನಿವಾಸ್,ಮುನಿವೆಂಕಟಪ್ಪ,ಎನ್.ಪ್ರಕಾಶ್, ಕೆ.ವೆಂಕಟೇಶಪ್ಪ, ನಾರಾಯಣಸ್ವಾಮಿ, ವೆಂಕಟೇಶಪ್ಪ,ಸರೋಜಮ್ಮ, ಮುನಿಯಪ್ಪ, ಕೃಷ್ಣಪ್ಪ, ಚಿಕ್ಕಹಸಾಳ ಶ್ರೀನಿವಾಸ್,ಮಾಜಿ ಅಧ್ಯಕ್ಷ ಕೃಷ್ಣಪ್ಪ, ಗ್ರಾ.ಪಂ ಅಧ್ಯಕ್ಷನಾರಾಯಣಸ್ವಾಮಿ, ಪಿಡಿಒ ಚಂಗಲರಾಯಪ್ಪ, ಸಿಬ್ಬಂದಿ ಚರಣ್,ಅರುಣ ಮತ್ತಿತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss