Tuesday, August 16, 2022

Latest Posts

ಅವಿವಾಹಿತರಿಗೆ ಸಂತೋಷದ ಸುದ್ದಿ: ಕಾಸರಗೋಡು ಕುಟುಂಬಶ್ರೀಯಿಂದ ವಿವಾಹ ಬ್ಯೂರೋ ಆರಂಭ

ಹೊಸ ದಿಗಂತ ವರದಿ, ಕಾಸರಗೋಡು:

ಮದುವೆ ಪ್ರಾಯ ಕಳೆದರೂ ವಧೂ ಅಥವಾ ವರ ಸಿಗದೆ ಚಿಂತೆಗೊಳಗಾಗಿರುವ ಯುವತಿ ಅಥವಾ ಯುವಕರಿಗೆ ಸಂತೋಷದ ಸುದ್ದಿಯೊಂದು ಹೊರಬಿದ್ದಿದೆ. ಅದರಂತೆ ಕುಟುಂಬಶ್ರೀ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ವಿವಾಹ ಬ್ಯೂರೋವನ್ನು ಆರಂಭಿಸಲಾಗಿದೆ. ಇದರ ಜಿಲ್ಲಾ ಮಟ್ಟದ ಉದ್ಘಾಟನೆಯು ಕಾಞಂಗಾಡಿನಲ್ಲಿ ನಡೆಯಿತು.
ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತ ಅವರು ವಿವಾಹ ಬ್ಯೂರೋದ ಉದ್ಘಾಟನೆ ನೆರವೇರಿಸಿದರು. ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ನಗರಸಭಾ ಮಾಜಿ ಅಧ್ಯಕ್ಷ ವಿ.ವಿ.ರಮೇಶನ್ ಅಧ್ಯಕ್ಷತೆ ವಹಿಸಿದ್ದರು.
ಸೂಕ್ತ ವಧೂ ವರರು ಸಿಗದ ಕಾರಣ ಜಿಲ್ಲೆಯಲ್ಲಿ ಸಾವಿರಾರು ಮಂದಿ ಯುವತಿ ಯುವಕರು ವಿವಾಹವಾಗದೆ ಚಿಂತೆಗೊಳಗಾಗಿದ್ದಾರೆ. ಇಂತಹವರಲ್ಲಿ ಬಹುಪಾಲು ಮಂದಿ ಪುರುಷರೇ ಆಗಿದ್ದಾರೆ. ವಧೂ ಸಿಗದುದರಿಂದ 50 ವರ್ಷ ಪ್ರಾಯವಾದರೂ ಮದುವೆಯಾಗದ ಅನೇಕ ಮಂದಿ ಯುವಕರು ಜಿಲ್ಲೆಯಲ್ಲಿದ್ದಾರೆ.
ಇದೇ ವೇಳೆ ಜಿಲ್ಲೆಯ ಹಲವು ಮಂದಿ ಯುವಕರು ಕರ್ನಾಟಕ ಹಾಗೂ ತಮಿಳುನಾಡಿನಿಂದ ಯುವತಿಯರನ್ನು ಕರೆ ತಂದು ವಿವಾಹವಾಗುತ್ತಿದ್ದಾರೆ. ಆದರೆ ಈಗ ಅಲ್ಲಿಯೂ ಯುವತಿಯರಿಗೆ ಕೊರತೆ ಎದುರಾದ ಹಿನ್ನೆಲೆಯಲ್ಲಿ ಪ್ರಸ್ತುತ ಅನೇಕ ಮಂದಿ ಯುವಕರ ದಾಂಪತ್ಯ ಜೀವನವೆಂಬ ಕನಸು ಕನಸಾಗಿಯೇ ಉಳಿದುಕೊಂಡಿದೆ.
ಇಂತಹವರಿಗೆ ಸಹಾಯ ಒದಗಿಸುವ ಉದ್ದೇಶದಿಂದ ಈಗ ಕುಟುಂಬಶ್ರೀ ನೇತೃತ್ವದಲ್ಲಿ ವಿವಾಹ ಬ್ಯೂರೋವನ್ನು ಆರಂಭಿಸಲಾಗಿದೆ. 1000 ರೂಪಾಯಿ ಪಾವತಿಸಿ ಸಿಡಿಎಸ್ ಮೂಲಕ ಹೆಸರು ನೋಂದಾಯಿಸಬೇಕು. ಈ ನೋಂದಾವಣೆಯ ಕಾಲಾವಧಿ ಒಂದು ವರ್ಷವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss