ಚಿತ್ರದುರ್ಗ: ಸವಿತಾ ಸಮಾಜಕ್ಕೆ ಆಸ್ತಿಯಾಗಿದ್ದ ಅಶೋಕ್ ಗಸ್ತಿ ಅವರಿಗೆ ನೀಡಲಾಗಿದ್ದ ರಾಜ್ಯಸಭಾ ಸದಸ್ಯ ಸ್ಥಾನವನ್ನು ಅವರ ಪತ್ನಿ ಶ್ರೀಮತಿ ಸುಮಗಸ್ತಿಗೆ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಸವಿತಾ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಮೂವತ್ತು ವರ್ಷಗಳಿಂದಲೂ ಬಿಜೆಪಿಯಲ್ಲಿ ಪ್ರಾಮಾಣಿಕವಾಗಿ ದುಡಿದಂತ ಅಶೋಕ್ ಗಸ್ತಿ ಅವರ ಸಂಘಟನೆ ಸಾಮರ್ಥ್ಯವನ್ನು ಗುರುತಿಸಿ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯಸಭೆಗೆ ಕಳಿಸಿದ್ದರಿಂದ ಸವಿತಾ ಸಮಾಜಕ್ಕೆ ದೊಡ್ಡ ಧ್ವನಿ ಬಂದಂತಾಗಿತ್ತು. ವಿಧಿಯಾಟ ಅವರನ್ನು ಬಿಡಲಿಲ್ಲ. ಹಾಗಾಗಿ ಅವರಿಗೆ ನೀಡಲಾಗಿದ್ದ ರಾಜ್ಯಸಭಾ ಸದಸ್ಯ ಸ್ಥಾನವನ್ನು ಅವರ ಪತ್ನಿಗೆ ನೀಡಿ ಸವಿತಾ ಸಮಾಜಕ್ಕೆ ರಾಜಕೀಯವಾಗಿ ಶಕ್ತಿ ತುಂಬುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಹಿರಿಯೂರು ತಾಲ್ಲೂಕು ಅಧ್ಯಕ್ಷ ಬಸವರಾಜ್ ಮಾತನಾಡಿ, ಬೂತ್ ಮಟ್ಟದಿಂದ ಬಿಜೆಪಿ ಬಲವರ್ದನೆಗೆ ಶಕ್ತಿ ಮೀರಿ ಶ್ರಮಿಸಿದ್ದ ಅಶೋಕ್ಗಸ್ತಿರವರ ನಿಧನ ಸವಿತಾ ಸಮಾಜಕ್ಕೆ ಅಪಾರವಾದ ನೋವುಂಟು ಮಾಡಿದೆ. ಶೋಷಿತರು, ತಳಸಮುದಾಯದವರ ಪರ ರಾಜ್ಯಸಭೆಯಲ್ಲಿ ಧ್ವನಿ ಎತ್ತಬೇಕಾಗಿದ್ದ ಅಶೋಕ್ಗಸ್ತಿರವರು ನಮ್ಮನ್ನೆಲ್ಲ ಅಗಲಿರುವುದರಿಂದ ಅವರ ರಾಜ್ಯಸಭಾ ಸದಸ್ಯ ಸ್ಥಾನವನ್ನು ಅವರ ಶ್ರೀಮತಿ ಸುಮಗೆ ನೀಡಿ ಸವಿತಾ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸುವಂತೆ ದೇಶದ ಪ್ರಧಾನಿ ನರೇಂದ್ರಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.
ಚಿತ್ರದುರ್ಗ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಆರ್.ಶ್ರೀನಿವಾಸ್ ಮಾತನಾಡಿ, ಅಶೋಕ್ ಗಸ್ತಿ ಅವರನ್ನು ರಾಜ್ಯಸಭೆಗೆ ಕಳಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ನಮ್ಮ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿತ್ತು. ಆದರೆ ಅವರ ಅಕಾಲಿ ನಿಧನ ನಮ್ಮನ್ನು ದುಃಖದಲ್ಲಿ ಮುಳುಗಿಸಿದೆ. ಶತ ಶತಮಾನಗಳಿಂದಲೂ ಕ್ಷೌರಿಕ ಕಸುಬು ಮಾಡಿಕೊಂಡು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವ ಸವಿತಾ ಸಮಾಜ ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ. ಹಾಗಾಗಿ ಅಶೋಕ್ಗಸ್ತಿರವರಿಗೆ ನೀಡಿದ್ದ ರಾಜ್ಯಸಭೆ ಸದಸ್ಯತ್ವವನ್ನು ಅವರ ಪತ್ನಿಗೆ ನೀಡಬೇಕೆಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಸವಿತಾ ಸಮಾಜದ ಜಿಲ್ಲಾ ಉಪಾಧ್ಯಕ್ಷ ಎನ್.ಶ್ರೀನಿವಾಸ್, ಜಿಲ್ಲಾ ಪ್ರತಿನಿಧಿ ಜಿ.ಜಿ.ಸಾಯಿನಾಥ್, ತಾಲ್ಲೂಕು ಕಾರ್ಯದರ್ಶಿ ಆಟೋರಾಜ ಹಾಜರಿದ್ದರು.