ಚಿಕ್ಕಮಗಳೂರು: ರಾಜ್ಯಸಭೆ ಸದಸ್ಯರು, ಬಿಜೆಪಿ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷರೂ ಆದ ಅಶೋಕ್ ಗಸ್ತಿ ಅವರ ಅಗಲಿಕೆ ಪಕ್ಷ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ. ಅವರು ಮತ್ತೆ ಹುಟ್ಟಿ ಬಂದು ಸಮಾಜಕ್ಕೆ ಕೊಡುಗೆಗಳನ್ನು ನೀಡುವಂತಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಹೇಳಿದರು.
ಅವರು ಶುಕ್ರವಾರ ಜಿಲ್ಲಾ ಬಿಜೆಪಿ ಪಾಂಚಜನ್ಯದಲ್ಲಿ ಏರ್ಪಡಿಸಲಾಗಿದ್ದ ಅಶೋಕ್ ಗಸ್ತಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಗಸ್ತಿ ಅವರು ಪ್ರಾಮಾಣಿಕತೆ, ಸರಳತೆ ಜೊತೆಗೆ ಸಮಾಜದ ಬಗ್ಗೆ ಕಳಕಳಿ ಹೊಂದಿದ್ದವರು ಈ ಕಾರಣಕ್ಕೆ ಪಕ್ಷ ಅವರಿಗೆ ಯಾವುದಾದರೂ ಸಾಂವಿಧಾನಿಕ ಹುದ್ದೆಯನ್ನು ನೀಡಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸಭೆಗೆ ಕಳುಹಿಸಿ ಕೊಟ್ಟಿತ್ತು. ಅವರಿಂದ ಪಕ್ಷ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತಾದರೂ, ಅಶೋಕ್ ಗಸ್ತಿ ಮಾತ್ರ ಯಾವುದೇ ನಿರೀಕ್ಷೆ ಇಟ್ಟುಕೊಂಡು ರಾಜಕಾರಣಕ್ಕೆ ಬಂದವರಲ್ಲ ಎಂದರು.
ಪಕ್ಷ ಸಂಘಟನೆ, ಹಿಂದುತ್ವ, ರಾಮಮಂದಿರ ವಿಚಾರದಲ್ಲಿ ಅವರು ಹೋರಾಟ ಮಾಡಿಕೊಂಡು ಬಂದವರು. ರಾಮ ರಾಜ್ಯವಾಗಬೇಕು ಎನ್ನುವುದು ಅವರ ಅಪೇಕ್ಷೆ ಇತ್ತು. ರಾಜ್ಯ ಸಭೆಯಲ್ಲಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆವಾದರೂ ದೇವರು ಅವರ ಬದುಕಿನ ಬಗ್ಗೆ ಕೃಪೆ ತೋರಲಿಲ್ಲ ಎಂದರು.
ಅವರು ಕೊಟ್ಟ ಕೊಡುಗೆಗಳು, ಬಿಟ್ಟುಹೋದ ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಅವರ ಹೋರಾಟಗಳನ್ನು ಮುಂದುವರಿಸಿದರೆ ಅವರ ಆತ್ಮಕ್ಕೆ ನಿಜವಾದ ಶಾಂತಿ ಸಿಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರುಗಳಾದ ಬಿ.ರಾಜಪ್ಪ, ವರಸಿದ್ಧಿ ವೇಣುಗೋಪಾಲ್, ಮಧುಕುಮಾರ್ ರಾಜೇ ಅರಸ್, ನಾರಾಯಣಸ್ವಾಮಿ, ಪುಷ್ಪರಾಜ್, ಎಸ್ಡಿಎಂ ಮಂಜುನಾಥ್, ಜಿ.ಪಂ.ಸದಸ್ಯ ರವೀಂದ್ರ ಬೆಳವಾಡಿ ಇತರರು ಇದ್ದರು.