ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೋವಿಡ್-19 ನಿಯಂತ್ರಣದ ಸಲುವಾಗಿ ಅಸ್ಟ್ರಾಜೆನೆಕಾ-ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಅಸ್ಟ್ರಾಜೆನೆಕಾ ಲಸಿಕೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದೆ.
ಈ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ವರದಿ ಮಾಡಿದ್ದು, ಅಂತಾರಾಷ್ಟ್ರೀಯ ಔಷಧ ತಯಾರಿಕ ಕಂಪನಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಜಂಟಿಯಾಗಿ ಈ ಲಸಿಕೆಯನ್ನು ತಯಾರಿಸಿದ್ದು, ಭಾರತದಲ್ಲಿ ಸೆರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ, ಕೊರಿಯಾದಲ್ಲಿ ಎಸ್ಕೆಬಯೊ ಸಂಸ್ಥೆಗಳು ಈ ಲಸಿಕೆಯನ್ನು ಉತ್ಪಾದನೆ ಮಾಡುತ್ತಿವೆ ಎಂದು ತಿಳಿಸಿದೆ.
ನಾವು ಕೋವಿಡ್ ಲಸಿಕೆ ತಯಾರಿಕೆಯನ್ನು ಹೆಚ್ಚಿಸಬೇಕಿದ್ದು, ಲಸಿಕೆಯನ್ನು ವೇಗವಾಗಿ ವಿತರಣೆ ಮಾಡಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮೊ ಗೆಬ್ರೆಯೆಸುಸ್ ಹೇಳಿದ್ದಾರೆ.
ಇತರೆ ಕೋವಿಡ್ ಲಸಿಕೆಗಳಿಗೆ ಹೋಲಿಸಿದರೆ ಅಸ್ಟ್ರಾಜೆನೆಕಾ ಲಸಿಕೆ ಕಡಿಮೆ ಬೆಲೆಯಲ್ಲಿ ಲಭ್ಯವಿದೆ ಮತ್ತು ನಿರ್ವಹಣೆಯು ಸರಳವಾಗಿದೆ. 8 ರಿಂದ 12 ವಾರಗಳಲ್ಲಿ 2 ಡೋಸ್ ಲಸಿಕೆ ನೀಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.