ಆಕಾಶವಾಣಿ ನಿಲಯ ಕಲಾವಿದ ತಿರುಚಿ ಕೆ.ಆರ್.ಕುಮಾರ್ ಜೂ.30ರಂದು ಸೇವಾ ನಿವೃತ್ತಿ

0
57

ಮಂಗಳೂರು: ಮಂಗಳೂರು ಆಕಾಶವಾಣಿಯ ಘಟಂ ವಾದ್ಯದ ನಿಲಯ ಕಲಾವಿದ, ಘಟಂ ಹಾಗೂ ಮೃದಂಗ ವಿದ್ವಾನ್ ತಿರುಚಿ ಕೆ.ಆರ್.ಕುಮಾರ್ ಅವರು ಮೂರು ದಶಕಗಳ ಬಾನುಲಿ ಸೇವೆಯಿಂದ ಜೂ.30, ಮಂಗಳವಾರ ನಿವೃತ್ತರಾಗಲಿದ್ದಾರೆ.

1986ರ ಡಿಸಂಬರಿನಲ್ಲಿ ಘಟಂ ನಿಲಯ ಕಲಾವಿದರಾಗಿ ಆಕಾಶವಾಣಿ ಸೇವೆಗೆ ಸೇರಿದ ಅವರು ನಿರಂತರವಾಗಿ 33 ವರ್ಷ 7 ತಿಂಗಳ ಕಾಲ ಮಂಗಳೂರು ನಿಲಯದಲ್ಲೇ ವೃತ್ತಿ ಉನ್ನತ ಶ್ರೇಣಿಯ ಕಲಾವಿದರಾಗಿ ಕಾರ್ಯ ನಿರ್ವಹಿಸಿದ್ದಾರೆ. 1960ರಲ್ಲಿ ತಮಿಳುನಾಡಿನ ತಂಜಾವೂರು ಜಿಲ್ಲೆಯ ಅಯ್ಯಂಪೇಟೆಯಲ್ಲಿ ಜನಿಸಿದ ಕುಮಾರ್ 7ನೇ ವರ್ಷದಲ್ಲೇ ಮೃದಂಗ ಶಿಕ್ಷಣ ಮೂಲಕ‌ ಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.

ಆಕಾಶವಾಣಿ ಸೇವೆ ಜೊತೆಗೆ ಸುಮಾರು 10 ಸಾವಿರಕ್ಕೂ ಅಧಿಕ ಸಂಗೀತ ಕಛೇರಿಗಳಲ್ಲಿ ಪಕ್ಕವಾದ್ಯ ಕಲಾವಿದರಾಗಿ ಪಾಲ್ಗೊಂಡಿದ್ದಾರೆ. ವಯಲಿನ್ ಮಾಂತ್ರಿಕ ಕುನ್ನುಕುಡಿ ಆರ್. ವೈದ್ಯನಾಥನ್ ಹಾಗೂ ತವಿಲ್ ಚಕ್ರವರ್ತಿ ವಲಯಪಟ್ಟಿ ಎ.ಆರ್.ಸುಬ್ರಹ್ಮಣ್ಯನ್ ಜೊತೆ ದೇಶಾದ್ಯಂತ 2000ಕ್ಕೂ ಅಧಿಕ ಕಛೇರಿಗಳನ್ನು ನೀಡಿದ್ದಾರೆ. ಖ್ಯಾತ ಕಲಾವಿದರಾದ ಲಾಲ್ ಗುಡಿ ಜಯರಾಮನ್, ಮಧುರೈ ಸೋಮು, ಎಂ.ಎಸ್.ಶೀಲಾ, ಆರ್.ಕೆ.ಶ್ರೀಕಂಠನ್, ಎನ್.ರಮಣಿ ಸಹಿತ ಹಲವಾರು ದಿಗ್ಗಜರಿಗೆ ಪಕ್ಕವಾದ್ಯ ಸಹಯೋಗ ನೀಡಿದ ಹಿರಿಮೆ ಕುಮಾರ್ ಅವರದು.

ಅವರ ಪ್ರಸ್ತುತಿಯ ಹಲವಾರು ಕ್ಯಾಸೆಟ್, ಸಿಡಿ, ಡಿಸ್ಕ್ ಗಳು ಬಿಡುಗಡೆಗೊಂಡಿವೆ. ಆಕಾಶವಾಣಿಗಾಗಿ ಹಲವಾರು ವಾದ್ಯವೃಂದ ಸಂಯೋಜಿಸಿದ್ದಾರೆ. ಆಕಾಶವಾಣಿಯ ಹಲವಾರು ರಾಷ್ಟ್ರೀ ಸಂಗೀತ ಸಮ್ಮೇಳನಗಳು ಹಾಗೂ ದೂರದರ್ಶನದ ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅವರು ನಿವೃತ್ತಿ ಹಂತದಲ್ಲಿ ಕರ್ನಾಟಕದಲ್ಲಿ ಆಕಾಶವಾಣಿಯ ಏಕೈಕ ಸೆಲೆಕ್ಷನ್ ಗ್ರೇಡ್ ವನ್ ಘಟಂ ಕಲಾವಿದರೆಂಬ ಹೆಗ್ಗಳಿಕೆ ಹೊಂದಿದ್ದಾರೆ.

ಇತ್ತೀಚೆಗಷ್ಟೇ ಕೊರೋನಾ ಬಗ್ಗೆ ಅವರು ಸ್ವತಃ ಬರೆದು ಸಂಗೀತ ಸಂಯೋಜಿಸಿದ ಕನ್ನಡ ಹಾಗೂ ತಮಿಳು ಹಾಡುಗಳು ಆಕಾಶವಾಣಿಯಲ್ಲಿ ಜನಪ್ರಿಯವಾಗಿವೆ. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಹೊಂದಿದ್ದು, ಮಂಗಳೂರಿನ ಲ್ಯಾಂಡ್ ಲಿಂಕ್ಸ್ ನಲ್ಲಿ ವಾಸಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here