Monday, July 4, 2022

Latest Posts

ಆಗಸ್ಟ್ ತಿಂಗಳಲ್ಲಿ ಕೇರಳದಲ್ಲಿ ಕೊರೋನಾ ಇನ್ನಷ್ಟು ಹೆಚ್ಚುವ ಸಾಧ್ಯತೆ : ಮುಖ್ಯಮಂತ್ರಿ ಪಿಣರಾಯಿ ವಿಜಯನ್

ತಿರುವನಂತಪುರ: ಕೇರಳದಲ್ಲಿ ಆಗಸ್ಟ್ ತಿಂಗಳಲ್ಲಿ ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಇಂತಹ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಎಲ್ಲರೂ ಗರಿಷ್ಠ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ನುಡಿದರು. ಆಗಸ್ಟ್ ನಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತಿದೆ. ರಾಜ್ಯದ ಪ್ರತಿ 10 ಲಕ್ಷ ಜನರಲ್ಲಿ 109 ಮಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದರು.
ಕೇರಳದಲ್ಲಿ ಸಾವಿನ ಪ್ರಮಾಣ ಶೇಕಡಾ 0.6 ಆಗಿದೆ. ದೇಶದಲ್ಲಿ ಶೇಕಡಾ 3 ಕ್ಕಿಂತಲೂ ಹೆಚ್ಚಿದೆ. ರಾಜ್ಯದಲ್ಲಿ ಕೊರೋನಾದಿಂದ ಸಂಭವಿಸಿದ 22 ಸಾವುಗಳಲ್ಲಿ 20 ವಿವಿಧ ಗಂಭೀರ ಕಾಯಿಲೆಗಳಿಂದ ನಡೆದಿವೆ ಎಂದು ಅವರು ಹೇಳಿದರು.
ಜನರು ಬೃಹತ್ ಸಂಖ್ಯೆಯಲ್ಲಿ ಜೊತೆಯಾಗುವುದನ್ನು ಸರಕಾರ ನಿರ್ಬಂಧಿಸಿದೆ. ಸಾರ್ವಜನಿಕ ಸಂಸ್ಥೆಗಳನ್ನು ಸೋಂಕು ರಹಿತಗೊಳಿಸಬೇಕು. ಸೂಚನೆಗಳನ್ನು ಪಾಲಿಸದವರ ಫೋಟೋಗಳನ್ನು ಮತ್ತು ಮಾಹಿತಿಗಳನ್ನು ಪೊಲೀಸ್ ನಿಯಂತ್ರಣ ಕೊಠಡಿಗೆ ಕಳುಹಿಸಲು ಸಾರ್ವಜನಿಕರು ಹೆಚ್ಚು ಆಸಕ್ತಿ ವಹಿಸಬೇಕು. ನಿಬಂಧನೆಗಳನ್ನು ಉಲ್ಲಂಘಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದರು. ತಪಾಸಣೆ ಬಿಗಿಯಾದಂತೆ ವಲಸಿಗರು ಹಾಗೂ ಅವರ ಸಂಬಂಧಿಗಳೂ ವಿಮಾನ ನಿಲ್ದಾಣದಲ್ಲಿ ಹೆಚ್ಚು ಸಮಯ ಕಾಯಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಮತ್ತಷ್ಟು ಜಾಗರೂಕತೆ ಅಗತ್ಯವಾಗಿ ಪಾಲಿಸಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.
ರಾತ್ರಿ 9 ಗಂಟೆಯ ಬಳಿಕ ಸಾರ್ವಜನಿಕ ಪ್ರಯಾಣದ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ತುರ್ತು ಪ್ರಯಾಣದ ಅಗತ್ಯವಿದ್ದವರಿಗೆ ಅನುಮತಿ ನೀಡಲಾಗುವುದು. ಕೇರಳದಲ್ಲಿ ದ್ವಿಚಕ್ರ ವಾಹನಗಳ ಸಂಚಾರ ವೇಳೆ ಮಾಸ್ಕ್ ಧರಿಸದಿರುವುದು ಗಮನಕ್ಕೆ ಬಂದಿದೆ. ಹೆಲ್ಮೆಟ್ ಮತ್ತು ಮಾಸ್ಕ್ ಧರಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಚ್ಚರಿಕೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss