Saturday, August 13, 2022

Latest Posts

ಆಗಸ್ಟ್ 9 ಜನ್ಮದಿನ ಸಂಸ್ಮರಣೆ: ನವೋದಯ ಸಾಹಿತ್ಯದ ‘ನಲ್ಮೆ’ಯ ಕವಿ ಕಡೆಂಗೋಡ್ಲು ಶಂಕರಭಟ್ಟರು

ನೂರಾಹದಿನಾರು ವರ್ಷಗಳ ಹಿಂದಿನ ಘಟನೆ. ವಿಟ್ಲದ ಸಮೀಪ ಪೆರುವಾಯಿ ಎಂಬ ಶಾಲೆಗೆ ಅಂದು ಪರಿವೀಕ್ಷಕರು ಭೇಟಿ ನೀಡಲಿದ್ದರು. ಶಿಕ್ಷಕರಾದಿಯಾಗಿ ಎಲ್ಲರಲ್ಲೂ ಭಯಮಿಶ್ರಿತ ಕುತೂಹಲ. ಆದರೆ ಬಂದ ಇನ್‌ಸ್ಪೆಕ್ಟರ್ ಕನ್ನಡದ ಮೊದಲ ಮಕ್ಕಳ ಕವಿ ಕವಿಶಿಷ್ಯ ಪಂಜೆಯವರು. ಅವರ ಲಕ್ಷ್ಯವನ್ನು ತನ್ನತ್ತ ಸೆಳೆದು ಮೆಚ್ಚುಗೆಯ ಸರಮಾಲೆ ತೊಡಿಸಿದ್ದು ‘ಬಾಲಕವಿ’ಯೊಬ್ಬನಿಗೆ. ಕವಿಶಿಷ್ಯರ ಮೆಚ್ಚುಗೆ ಪಡೆದ ಬಾಲಕನೇ ಮುಂದೆ ಮೇರುಕವಿಯಾಗಿ ಕನ್ನಡದ ಮನೆಮಾತಾಗಬಹುದೆಂಬ ಕಲ್ಪನೆ ಅದೆಷ್ಟು ಮಂದಿಗೆ ಇತ್ತೋ ಗೊತ್ತಿಲ್ಲ. ಆ ಅದೃಷ್ಟಶಾಲಿ ಸರಸ್ವತಿಯ ವರಪುತ್ರನೇ ಖ್ಯಾತನಾಮರಾದ ಕಡೆಂಗೋಡ್ಲು ಶಂಕರ ಭಟ್ಟರು.
ನವೋದಯ ಸಾಹಿತ್ಯ ಕೃತಿಗಳಲ್ಲಿ ಅಭಿಮಾನವಿರುವ ಯಾರೂ ‘ಮಾದ್ರಿಯ ಚಿತೆ’, ‘ಮುರಲೀನಾದ’ ಮತ್ತು ‘ಹೊನ್ನಿಯ ಮದುವೆ’ ಎಂಬ ಮೂರು ಕಥನ ಕವನಗಳಲ್ಲಿರುವ ಸಾಹಿತ್ಯದ ಬನಿಯನ್ನು ಮರೆಯಲು ಸಾಧ್ಯವೇ ಇಲ್ಲ. ಕನ್ನಡ ಕಾವ್ಯಲೋಕಕ್ಕೆ ಈ ಅಪ್ರತಿಮ ಕೃತಿರತ್ನಗಳನ್ನು ನೀಡಿದ ಕವಿ ಕಡೆಂಗೋಡ್ಲು ಶಂಕರ ಭಟ್ಟರು. ಕವಿ ವಿಸೀಯವರಂತೂ ಮಾದ್ರಿಯ ಚಿತೆ ಉತ್ಕೃಷ್ಟ ಕಥನ ಕಾವ್ಯವೆಂದೇ ಮನಸಾರೆ ಹೊಗಳಿಬಿಟ್ಟರು. “ಆವ ಕಾಣ್ಕೆಯ ಕೊಡುವೆ ಕನ್ನಡದ ಮಾತೆ | ನಿನಗಾವ ಕಾಣ್ಕೆಯ ಕೊಡುವೆ ಮಮ ಜನ್ಮದಾತೆ’ ಎಂದು ಭಾಷಾಭಿಮಾನದಿಂದ ಹಾಡಿ ಹೊಗಳಿದ ಈ ಕವಿಶ್ರೇಷ್ಠರು ಉಳಿಸಿಹೋದ ಸಾಹಿತ್ಯದ ಹೆಜ್ಜೆಗಳು ಅನೇಕ. ಆದರೂ ಎಲ್ಲೋ ಒಂದೆಡೆ ಈ ದೈತ್ಯ ಪ್ರತಿಭೆಯನ್ನು ಸರಿಯಾಗಿ ಗೌರವಿಸುವ ಕಾರ್ಯ ನಡೆಯದೆ ಹೋಯಿತೇ ಎಂಬ ದುಃಖದ ಛಾಯೆಯೊಂದು ಮನದ ಮೂಲೆಯಲ್ಲಿ ಚುಚ್ಚಿದರೆ ಅಚ್ಚರಿಯೇನೂ ಅಲ್ಲ.
ಪೆರುವಾಯಿ ಗ್ರಾಮದ ಕಡೆಂಗೋಡ್ಲು ಮನೆತನದ ಹೆಸರನ್ನು ಉಜ್ವಲಗೊಳಿಸಿದ ಕವಿ ಶಂಕರ ಭಟ್ಟರು ಜನಿಸಿದ್ದು 1904ರ ಆಗಸ್ಟ್ 9ರಂದು. ತಂದೆ ಈಶ್ವರ ಭಟ್ಟರು, ತಾಯಿ ಗೌರಮ್ಮ. ಅಭಿನವ ಪಂಪನೆಂದು ಕರೆಸಿಕೊಂಡ ಕನ್ನಡದೋಜ ಮುಳಿಯ ತಿಮ್ಮಪ್ಪಯ್ಯನವರು ಈಶ್ವರ ಭಟ್ಟರ ಅಕ್ಕನ ಮಗ. ಶಂಕರ ಭಟ್ಟರು ವಿದ್ಯೆ ಕಲಿಯುವ ಕಾಲದಲ್ಲೇ ಅಪ್ಪಟ ದೇಶಾಭಿಮಾನದ ಕಿಡಿ. 1920ರಲ್ಲಿ ಗಾಂಧೀಜಿ ಮಂಗಳೂರಿಗೆ ಬಂದು ನೀಡಿದ ಸ್ವಾತಂತ್ರ್ಯ ಹೋರಾಟದ ಕರೆಗೆ ಓಗೊಟ್ಟ ಹೃದಯ. ಖಾದಿಯನ್ನೇ ಧರಿಸುವ ಸ್ವದೇಶೀ ವ್ರತದ ಪಣ. ಅಸಹಕಾರ ಚಳವಳಿಯ ಕಣದಲ್ಲಿ ಧುಮುಕಲು ಬಳಸಿದ್ದು ಸಾಹಿತ್ಯದ ಮಾರ್ಗ.
ಮುಳಿಯ ತಿಮ್ಮಪ್ಪಯ್ಯನರ ಕಾರಣದಿಂದ ಶಂಕರಭಟ್ಟರಿಗೆ ಸಾಹಿತ್ಯದ ಆಸಕ್ತಿ ರಕ್ತಗತವಾಗಿ ಬಂದಿರಲೂಬಹುದು. ಪುಸ್ತಕಗಳ ಓದು, ನಿರಂತರ ಅಧ್ಯಯನ, ಬರವಣಿಗೆಗೆ ಪ್ರೇರಣೆಯಾಯಿತು. ‘ಬಾಲಕವಿ’ ಎಂಬ ಕಾವ್ಯನಾಮದಲ್ಲಿ ಬರೆದ ಘೋಷಯಾತ್ರೆ, ವಸ್ತ್ರಾಪಹರಣ, ಗಾಂಧಿ ಸಂದೇಶ, ಮಹಾತ್ಮ ಗಾಂಧಿ ವಿಜಯ ಎಂಬ ಕವನಗಳ ತೀಕ್ಷ್ಣ ಅಸ್ತ್ರಪ್ರಯೋಗ ಬ್ರಿಟಿಷ್ ಆಡಳಿತವನ್ನು ಕೆರಳಿಸಿತು. ದೇಶದ್ರೋಹದ ಆಪಾದನೆ ಹೊರಿಸಿ ವಸ್ತ್ರಾಪಹರಣ ಕವನಕ್ಕೆ ಬಹಿಷ್ಕಾರ ವಿಧಿಸಿತು.
ಮುಳಿಯ ತಿಮ್ಮಪ್ಪಯ್ಯನವರು ಬಾಲಕವಿಯ ಹಾದಿಯನ್ನು ಬದಲಾಯಿಸಿದರು. ವಿದ್ಯೆಯಿಂದ ವಿಮುಖನಾಗುತ್ತಿದ್ದ ಹುಡುಗನಿಗೆ ತಮ್ಮ ಮನೆಯಲ್ಲಿ ಅನ್ನ, ವಸತಿ ನೀಡಿ ವಿದ್ಯೆ ಕಲಿಯಲು ಪ್ರೋತ್ಸಾಹಿಸಿದರು. ಮಂಗಳೂರಿನಲ್ಲಿ ತಾನು ಅಧ್ಯಾಪಕನಾಗಿದ್ದ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಕಲಿಯಲು ಅವಕಾಶ ನೀಡಿದರು. ಮುಂದೆ ಉನ್ನತ ಶ್ರೇಣಿಯಲ್ಲಿ ಶಂಕರ ಭಟ್ಟರು ಸ್ನಾತಕ ಪರೀಕ್ಷೆಯಲ್ಲಿ ಗೆದ್ದು, ಖಾಸಗಿಯಾಗಿ ಕನ್ನಡ ವಿದ್ವಾನ್ ಪರೀಕ್ಷೆಯಲ್ಲಿ ಸರ್ವ ಪ್ರಥಮರಾದರು. ಮಕ್ಕಳ ಕವಿ ಪಂಜೆ ಮಂಗೇಶರಾಯರ ಬೆಂಬಲ ಅವರಿಗೆ ಸೈಂಟ್ ಆಗ್ನೆಸ್ ವಿದ್ಯಾಲಯದಲ್ಲಿ ಪ್ರಾಧ್ಯಾಪಕ ಕೈಂಕರ್ಯದ ಹೊಣೆ ತಂದುಕೊಟ್ಟಿತು. 35 ವರ್ಷಗಳ ಸುದೀರ್ಘ ಕಾಲ ಅವರು ವಿದ್ಯಾ ಬೋಧನೆ ಮಾಡಿದರು. ವಿದ್ಯಾರ್ಥಿಯಾಗಿರುವಾಗಲೇ ಅವರ ಕವಿತೆಗಳು ಧಾರವಾಡದ ಪ್ರಭಾತ, ಭಕ್ತಿ ಸಂದೇಶ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಹದಿನಾಲ್ಕರ ಕಿಶೋರಾವಸ್ಥೆಯಲ್ಲಿ ಬರೆದ, ‘ಸುರಪನುದ್ಯಾನದವೊಲೆಸೆಯುವ ಸರಸಿಗಳ ಸೊಬಗಿನಿಂದ ಹಿಗ್ಗುವ ಮರಗಳಾಸರೆಯದ ವನದಲಿ…’ಇಂತಹ ಸಿರಿವಂತ ಸಾಹಿತ್ಯದ ಸಾಲುಗಳನ್ನು ಬರೆದು ಬಹುಮಾನಗಳನ್ನು ಗಿಟ್ಟಿಸಿಕೊಂಡ ಪ್ರತಿಭೆ ಅವರದು.
ಅಧ್ಯಾಪನದ ಜೊತೆಗೆ ಪತ್ರಿಕೋದ್ಯಮ ಕೈಬೀಸಿ ಕರೆಯಿತು. ಎರಡರಲ್ಲೂ ಸಮತೋಲನ ಸಾಧನೆ ಅವರ ಹೆಗ್ಗಳಿಕೆ. ನವಯುಗ ಪತ್ರಿಕೆಯ ಉಪಸಂಪಾದಕರಾಗಿ ಮೊದಲ ಹೆಜ್ಜೆ. 25 ವರ್ಷಗಳ ಕಾಲ ‘ರಾಷ್ಟ್ರಬಂಧು’ ಪತ್ರಿಕೆಯ ಸಂಪಾದಕರಾಗಿ ಪರಿಶುದ್ಧ ಪತ್ರಿಕಾ ವ್ಯವಸಾಯದ ಮಾದರಿಯಾದ ಶಂಕರ ಭಟ್ಟರು 1953ರಲ್ಲಿ ತನ್ನದೇ ಆದ, ‘ರಾಷ್ಟ್ರಮತ’ ವಾರಪತ್ರಿಕೆಯನ್ನು ಆರಂಭಿಸಿ ಬದುಕಿನ ಕಡೆಯ ಘಳಿಗೆಯ ವರೆಗೂ ಮುನ್ನಡೆಸಿಕೊಂಡು ಬಂದರು. ಅಪಾರ ವಾಚಕ ಬಳಗ ಹೊಂದಿದ್ದ ಪತ್ರಿಕೆಯಲ್ಲಿ ಅವರು ಬರೆಯುತ್ತಿದ್ದ ವ್ಯಂಗ್ಯಲೇಪನ ಪಡೆದ ಸಾಮಾಜಿಕ ಘಟನೆಗಳ ‘ಅಲ್ಲಿಷ್ಟು ಇಲ್ಲಿಷ್ಟು’ ಅಂಕಣವನ್ನು ಓದಲು ಜನ ಕಾದು ಕುಳಿತುಕೊಳ್ಳುತ್ತಿದ್ದರು. ಹಾಗೆಯೇ ದೇಶವಿದೇಶಗಳ ವಿಶೇಷ ಸುದ್ದಿಗಳ ಅಂಕಣ ‘ಕಾಲಚಕ್ರ’ವನ್ನೂ ಜನ ಮೆಚ್ಚಿಕೊಂಡಿದ್ದರು.
ಸಾಹಿತ್ಯ ಪ್ರಪಂಚಕ್ಕೆ ಶಂಕರಭಟ್ಟರು ನೀಡಿದ ಕೊಡುಗೆ ಮರೆಯಲಾಗದಷ್ಟು ಅಮೂಲ್ಯವಾದುದು. ಕಾಣಿಕೆ, ಹಣ್ಣುಕಾಯಿ, ಪತ್ರಪುಷ್ಪ ಎಂಬ ಮೂರು ಕವನ ಸಂಕಲನಗಳು, ಮಹಾಯೋಗಿ, ಗುರುದಕ್ಷಿಣೆ, ಅಜಾತಶತ್ರು, ಉಷೆ, ಹಿಡಿಂಬೆ ಮುಂತಾದ ಒಂಭತ್ತು ನಾಟಕಗಳು, ಹಿಂದಿನ ಕತೆಗಳು, ಗಾಜಿನ ಬಳೆ, ದುಡಿಯುವ ಮಕ್ಕಳು ಕತಾಸಂಕಲನಗಳು. ಧೂಮಕೇತು, ದೇವತಾ ಮನುಷ್ಯ, ಲೋಕದ ಕಣ್ಣು ಕಾದಂಬರಿಗಳು, ಲಲಿತ ಪ್ರಬಂಧಗಳು ನಾಡು, ನುಡಿಯ ಸಾಹಿತ್ಯ ಸಂಪತ್ತಿನ ಕಣಜಕ್ಕೆ ಅವರು ಸೇರಿಸಿದ ಮೌಕ್ತಿಕಗಳು. ಭೂತಾಳ ಪಾಂಡ್ಯ ಎಂಬುದು ಅವರ ಮಹಾಕಾವ್ಯ. ವಿಮರ್ಶನ ಸಾಹಿತ್ಯದಲ್ಲೂ ದಾಖಲುಗೊಂಡ ಅವರು ವಾಙ್ಮಯ ತಪಸ್ಸು ಎಂಬ ವಿಮರ್ಶಾ ಲೇಖನಗಳ ಗ್ರಂಥವನ್ನೂ ಕಾಣಿಕೆಯಾಗಿ ನೀಡಿದ್ದಾರೆ.
ಹಳತು, ಹೊಸತುಗಳ ಸುಂದರ ಬೆಸುಗೆಯ ಸಂಕೇತವೆಂದೇ ಗುರುತಿಸಲ್ಪಟ್ಟ ಕವಿಯ “ಕನ್ನಡದ ಕುಲವಿಲ್ಲಿ, ಕುಲದ ದೇಗುಲವಿಲ್ಲಿ, ಪ್ರಾಣದೇವನ ಭವ್ಯ ಮೂರ್ತಿ ಪ್ರತಿಷ್ಠೆ| ಭಾರತವೆ ಸಾವಿತ್ರಿ ಕನ್ನಡವೆ ಗಾಯತ್ರಿ ಇಲ್ಲಿಯೇ ಪೂಜಾ ಪುನಶ್ಚರಣ ನಿಷ್ಠೆ’ ಎಂಬ ಸಾಲುಗಳು ಅವರ ಅಪಾರ ಭಾಷಾಭಿಮಾನದ ದ್ಯೋತಕವೂ ಹೌದು. 1932ರಲ್ಲಿ ಮಡಿಕೇರಿ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾದಾಗ ಅವರಿಗಿನ್ನೂ ಇಪ್ಪತ್ತೆಂಟರ ಅರಳುವ ಹರಯ. 1965ರಲ್ಲಿ ಕಾರವಾರದಲ್ಲಿ ಜರಗಿದ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಶಂಕರ ಭಟ್ಟರು ಮಾಡಿದ ಭಾಷಣ ನುಡಿಯ ಮೇಲಣ ಅಭಿಮಾನದ ದೃಷ್ಟಿಯಿಂದ ಇಂದಿಗೂ ಗಮನಾರ್ಹವಾಗಿದೆ.
1968ರ ಮೇ 17ರಂದು ರಾಷ್ಟ್ರಮತದ ಕೆಲಸಕ್ಕಾಗಿ ಮಂಗಳೂರಿಗೆ ಹೊರಟ ಕವಿ ಶಂಕರಭಟ್ಟರು ಬಸ್ಸಿನಲ್ಲಿ ಹೃದಯಾಘಾತಕ್ಕೊಳಗಾದರು. ಕನ್ನಡವು ಎಂದೂ ಮರೆಯಲಾಗದ ಕೃತಿಗಳಿಂದ ಸಾಹಿತ್ಯ ಹೃದಯಗಳಲ್ಲಿ ಇಂದಿಗೂ ಜೀವಂತರಾಗಿಯೇ ಉಳಿದುಕೊಂಡಿರುವ ಕವಿಯನ್ನು ಉಡುಪಿಯ ಎಂಜಿಎಂ ಕಾಲೇಜಿನ ಗೋವಿಂದ ಪೈ ಸ್ಮಾರಕ ಸಂಶೋಧನಾ ಕೇಂದ್ರ ಹಸ್ತಪ್ರತಿ ರೂಪದ ಕವನ ಸಂಕನಕ್ಕೆ ‘ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ’ ನೀಡುವ ಮೂಲಕ ವಿಶಿಷ್ಟವಾಗಿ ಸ್ಮರಿಸಿಕೊಳ್ಳುತ್ತಿರುವುದು ಶ್ಲಾಘನೀಯ.
ಶಂಕರಭಟ್ಟರ ದಾಂಪತ್ಯ ಜೀವನ ಕೂಡ ಪ್ರೇಮಕಾವ್ಯದಂತೆ ಸುರಸವಾಗಿತ್ತು. ಹದಿಮೂರರ ಹರಯದಲ್ಲಿ ಮದುವಣಗಿತ್ತಿಯಾಗಿ ಮನೆಗೆ ಕಾಲಿಟ್ಟ ಮನದರಸಿ ಕಮಲಮ್ಮ, ಮೂವರು ಗಂಡು, ಹೆಣ್ಣುಮಕ್ಕಳ ಸುಖೀ ಸಂಸಾರವೂ ಅವರದಾಗಿತ್ತು. ಪ್ರೇಮಕವಿಯಾಗಿಯೂ ಮನ ಸೆಳೆಯುವ ಭಟ್ಟರು, ‘ಎನ್ನ ಹೃದಯ ಕಮಲವಾಗಿ, ಕುಣಿಯುತಿರುವ ವೇಳೆಯಲ್ಲಿ, ಹಾಡುತಿರುವ ತುಂಬಿಯಾಗಿ ಬರುವೆಯೇನೇ ವಲ್ಲಭೆ?’ ಎಂದು ತುಂಟತನದಿಂದ ಕೇಳಿರುವ ಸಾಲುಗಳು ಗಾಯಕರ ಕಂಠದ ಮೂಲಕ ಕನ್ನಡಿಗರ ಮನೆಮನೆಗೂ ತಲುಪಬೇಕಿತ್ತು. ಸ್ನೇಹಶೀಲ ಕವಿಯ ಸಾಹಿತ್ಯದ ಅಧ್ಯಯನ ಇನ್ನಷ್ಟು ನಡೆಯುವುದೇ ಅವರನ್ನು ಸಾಹಿತ್ಯಾಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಉಳಿಸಬಲ್ಲುದು.

ಲೇಖಕರು
ಕಡೆಂಗೋಡ್ಲು ಗೋಪಾಲಕೃಷ್ಣ ಭಟ್ಟ
ಗೋಪಾಲಕೃಷ್ಣ ಕೆ.
ಕಾರ್ಕಳ, ಉಡುಪಿ ಜಿಲ್ಲೆ
ದೂರವಾಣಿ: 90085 15470

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss