Wednesday, August 17, 2022

Latest Posts

ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು: ಸರ್ಕಾರಕ್ಕೆ ಶಕ್ತಿ ತುಂಬಿದ ಪದವೀಧರರು: ವೈ.ಎ.ನಾರಾಯಣಸ್ವಾಮಿ

 ಹೊಸದಿಗಂತ ವರದಿ, ಕೋಲಾರ:

ಪದವೀಧರ,ಶಿಕ್ಷಕ ಮತದಾರರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ರಾಜ್ಯದಲ್ಲಿನ ಯಡಿಯೂರಪ್ಪ ಸರ್ಕಾರಕ್ಕೆ ಶಕ್ತಿ ತುಂಬಿದ್ದಾರೆ, ನಮ್ಮ ಅಭ್ಯರ್ಥಿ ೭೦೩೭ ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ವಿಧಾನಪರಿಷತ್ ಚುನಾವಣೆ ಮತ ಎಣಿಕೆ ನಂತರ ಬೆಂಗಳೂರಿನ ಕಲಾ ಕಾಲೇಜು ಮುಂಭಾಗ ವಿಜಯೋತ್ಸವದಲ್ಲಿ ಪಾಲ್ಗೊಂಡ ನಂತರ ಅವರು ಅಭಿಮಾನಿಗಳು ಮತ್ತು ಕಾರ್ಯಕರ್ತರನ್ನುದ್ಧೇಶಿಸಿ ಮಾತನಾಡುತ್ತಿದ್ದರು.
ವಿಧಾನಸಭೆ ಮಾತ್ರವಲ್ಲ ಪರಿಷತ್‌ನಲ್ಲೂ ಶಿಕ್ಷಕರು,ಪದವೀಧರರು ಬಿಜೆಪಿಗೆ ಜಯಕಾರ ಹಾಕಿದ್ದಾರೆ, ವಿರೋಧ ಪಕ್ಷಗಳ ಟೀಕೆ, ಆರೋಪಗಳಿಗೆ ಸೊಪ್ಪು ಹಾಕದ ಮತದಾರರು ಅಭಿವೃದ್ದಿಗೆ ಬೆಂಬಲ ನೀಡಿದ್ದಾರೆ ಎಂದರು.
ಶಿಕ್ಷಕರು, ನೌಕರರು, ಪದವೀಧರರ ಸಮಸ್ಯೆಗಳ ಪರಿಹಾರ ಬಿಜೆಪಿ ಸರ್ಕಾರದಿಂದ ಮಾತ್ರವೇ ಸಾಧ್ಯ ಎಂಬ ಸತ್ಯವೇ ಈ ಜಯಕ್ಕೆ ಕಾರಣವಾಗಿದೆ ಎಂದು ತಿಳಿಸಿದ ಅವರು ಮತದಾರರಿಗೆ ಧನ್ಯವಾದ ಸಲ್ಲಿಸಿದರು.
ಚಿದಾನಂದ ಗೌಡರ ಆಯ್ಕೆಯ ಮೂಲಕ ಪರಿಷತ್‌ನಲ್ಲಿ ಶಿಕ್ಷಕರು,ಪದವೀಧರರ ಧ್ವನಿ ಮತ್ತಷ್ಟು ಬಲಗೊಳ್ಳಲಿದೆ, ಶಿಕ್ಷಕರ, ನೌಕರರ ಬಹುದಿನಗಳ ಸಮಸ್ಯೆಗಳಿಗೆ ಕೊನೆಯಾಡಲು ಶಕ್ತಿ ಬಂದಿದೆ ಎಂದು ತಿಳಿಸಿದರು.
ರಾಜ್ಯದ ಈ ಚುನಾವಣೆಗಳು ಮುಂದಿನ ೧೦ ವರ್ಷ ರಾಜ್ಯದಲ್ಲಿ ಬಿಜೆಪಿಯೇ ಸಾರ್ವಭೌಮ ಎಂಬುದನ್ನು ಸಾಕ್ಷೀಕರಿಸಿವೆ, ಕಾರ್ಯಕರ್ತರು, ಶಿಕ್ಷಕ ಸಂಘಟನೆಗಳು, ಪದವೀಧರರ ಸಂಘಟಿತ ಹೋರಾಟದಿಂದ ಈ ಗೆಲುವು ಲಭ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ರಾಜ್ಯದಲ್ಲಿ ಗುರುಕುಲ ಶಿಕ್ಷಣಕ್ಕೆ ಒತ್ತು ಸಿಗಲಿದೆ, ವಿದ್ಯಾರ್ಥಿಗಳಿಗೆ ವೈಜ್ಞಾನಿಕ ತಾಂತ್ರಿಕ ಅರಿವು ಹೆಚ್ಚಲಿದೆ, ಕಲಿಕೆ ಜತೆಗೆ ಕೌಶಲ್ಯದ ಅಭಿವೃದ್ದಿಗೂ ದಾರಿಯಾಗಿದ್ದು, ಈ ಕಾರ್ಯದಲ್ಲಿ ಯಡಿಯೂರಪ್ಪ ಸರ್ಕಾರ ಮುಂದಡಿ ಇಟ್ಟಿದೆ ಎಂದು ತಿಳಿಸಿದರು.
ಯಡಿಯೂರಪ್ಪ ಅವರ ವಿರುದ್ದ ವ್ಯಂಗ್ಯ ಮಾತುಗಳನ್ನಾಡಿದ್ದ ಸಿದ್ದರಾಮಯ್ಯ ಈಗ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ ಅವರು, ಸೋಲಿನಿಂದ ಕಾಂಗ್ರೆಸ್ ರಾಜ್ಯದಲ್ಲಿ ತನ್ನ ಅಸ್ಥಿತ್ವವೇ ಅಲುಗಾಡುತ್ತಿದೆ ಎಂಬ ಆತಂಕದಲ್ಲಿದೆ ಎಂದು ಟೀಕಿಸಿದರು.
ಅನೇಕ ಕಾಂಗ್ರೆಸ್ ನಾಯಕರಿಗೆ ಈ ಪಕ್ಷದಲ್ಲಿ ನಮಗೆ ಭವಿಷ್ಯವಿಲ್ಲ ಎಂಬ ಕಲ್ಪನೆ ಬಲಗೊಳಿಸುವಲ್ಲಿ ಉಪಚುನಾವಣೆ ಹಾಗೂ ವಿಧಾನಪರಿಷತ್ ಚುನಾವಣೆ ಬಿಜೆಪಿ ಗೆಲುವು ಮುಖ್ಯ ಪಾತ್ರ ವಹಿಸಿದೆ ಎಂದರು.
ಅಭ್ಯರ್ಥಿ ಚಿದಾನಂದ ಎಂ.ಗೌಡ ಮಾತನಾಡಿ, ನನ್ನ ಗೆಲುವು  ಎಲ್ಲಾ ಶಿಕ್ಷಕರು,ಪದವೀಧರರ ಗೆಲುವಾಗಿದೆ, ನನ್ನ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವೆ, ಮುಖ್ಯಮಂತ್ರಿ ಯಡಿಯೂರಪ್ಪ, ವೈ.ಎ.ಎನ್ ಮಾರ್ಗದರ್ಶನದಲ್ಲಿ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಉಪಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ಶಿಕ್ಷಕ ಸಂಘಟನೆಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!