Friday, July 1, 2022

Latest Posts

ಆಗ್ರಾದಲ್ಲಿ 6 ಜನರಿಗೆ ಸೋಂಕು ದೃಢ: ರಾಜ್ಯಕ್ಕೂ ಭೀತಿ ಕೊರೋನಾ ತೀವ್ರ

ಹೊಸದಿಲ್ಲಿ: ಚೀನಾ ಸೇರಿ ಹಲವು ರಾಷ್ಟ್ರಗಳನ್ನು ಬೆಚ್ಚಿಬೀಳಿಸಿದ್ದ ಕೊರೋನಾ ಈಗ ಕರ್ನಾಟಕ ಒಳ ಗೊಂಡು ಇಡೀ ದೇಶವನ್ನು ಆತಂಕಕ್ಕೀಡು ಮಾಡಿದೆ. ಮಂಗಳವಾರ ಒಂದೇ ದಿನ ಉತ್ತರ ಪ್ರದೇಶದ ಆಗ್ರಾದಲ್ಲಿ ಆರು ಜನರಿಗೆ ಸೋಂಕು ದೃಢವಾಗಿದ್ದು, ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ವೈರಾಣು ಪತ್ತೆಯಾದ ಆರೂ ಜನ ಇಟಲಿಯ ವರಾಗಿದ್ದು, ಪರೀಕ್ಷೆ ಮಾದರಿಯನ್ನು ದಿಲ್ಲಿಗೆ ಕಳುಹಿಸಲಾಗಿದೆ. ಆರೂ ಜನರಿಗೆ ದಿಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಉತ್ತರ ಪ್ರದೇಶ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಮಾಹಿತಿ ನೀಡಿದ್ದಾರೆ.

ಮೊದಲು ಕೇರಳದಲ್ಲಿ ಮೂವರಿಗೆ ಕೊರೋನಾ ವೈರಾಣು ಆವರಿಸಿರುವುದು ದೃಢವಾಗಿತ್ತಾದರೂ, ಮೂವರೂ ಗುಣಮುಖರಾದ ಹಿನ್ನೆಲೆಯಲ್ಲಿ ದೇಶ ನಿಟ್ಟುಸಿರು ಬಿಟ್ಟಿತ್ತು. ಆದರೆ, ಸೋಮವಾರ ದಿಲ್ಲಿ ಹಾಗೂ ತೆಲಂಗಾಣದಲ್ಲಿ ಒಬ್ಬರಿಗೆ ಕೊರೋನಾ ದೃಢವಾಗಿದ್ದು ದೇಶಾದ್ಯಂತ ಆತಂಕ ಮೂಡಿಸಿತ್ತು. ಇದರ ಬೆನ್ನಲ್ಲೇ ಮಂಗಳವಾರ 6 ಜನರಿಗೆ ಸೋಂಕು ತಗುಲಿರುವುದು ದೃಢವಾಗಿದ್ದು ಭೀತಿಯನ್ನು ಹೆಚ್ಚಿ ಸಿದೆ. ಆದಾಗ್ಯೂ, ಆಗ್ರಾದಲ್ಲಿ ಆರು ಜನರಿಗೆ ಸೋಂಕು ಇರುವುದು ದೃಢವಾದ ಬೆನ್ನಲ್ಲೇ ಉತ್ತರ ಪ್ರದೇಶದ ನೋಯ್ಡಾದ ಎರಡು ಶಾಲೆಗಳನ್ನು ಮುಚ್ಚಲಾಗಿದ್ದು, ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ.

4 ದೇಶಗಳಿಗೆ ವೀಸಾ ರದ್ದು: ಭಾರತದಲ್ಲೂ ಕೊರೋನಾ ಹೆಚ್ಚಿನ ಆತಂಕ ಸೃಷ್ಟಿಸಿದ ಬೆನ್ನಲ್ಲೇ ಭಾರತ ಸರ್ಕಾರವು ನಾಲ್ಕು ದೇಶಗಳಿಗೆ ತಾತ್ಕಾಲಿಕ ವೀಸಾಗಳನ್ನು ರದ್ದುಗೊಳಿಸಿದೆ. ಕೊರೋನಾದಿಂದ ನರಳುತ್ತಿರುವ ಚೀನಾ, ಇಟಲಿ, ದಕ್ಷಿಣ ಕೊರಿಯಾ ಹಾಗೂ ಜಪಾನ್ ರಾಷ್ಟ್ರಗಳ ಜನರಿಗೆ ಭಾರತಕ್ಕೆ ಬರಲು ನೀಡುತ್ತಿದ್ದ ವೀಸಾ ರದ್ದುಗೊಳಿಸಿದೆ.

ಹಾಗೊಂದು ವೇಳೆ ತುರ್ತು ಕಾರಣಗಳಿಗೆ ಬರುವುದಾದರೆ ರಾಯಭಾರಿ ಕಚೇರಿಗಳನ್ನು ಸಂಪರ್ಕಿಸಬೇಕು ಎಂದು ಸೂಚಿಸಿದೆ. ಅಷ್ಟೇ ಅಲ್ಲ, ಫೆ.1 ಅಥವಾ ಅದಕ್ಕಿಂತ ಮೊದಲು ನಾಲ್ಕೂ ದೇಶಗಳಿಗೆ ಭೇಟಿ ನೀಡಿದ, ಈ ದೇಶಗಳಿಂದ ಭಾರತಕ್ಕೆ ಬಂದವರ ವೀಸಾಗಳನ್ನು ಸಹ ರದ್ದುಗೊಳಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ: ರಾಜ್ಯದಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಈಗಾಗಲೇ ಇಲಾಖೆಯಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ತೆಲಂಗಾಣಕ್ಕೆ ತೆರಳಿರುವ ನಗರದ ಟೆಕ್ಕಿಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಆತನ ಜತೆ  ಸಮೀಪದ ಸಂಪರ್ಕ ಹೊಂದಿದ್ದ  65 ಮಂದಿ ಮುಂಜಾಗ್ರತಾ ಕ್ರಮವಾಗಿ ನಿಗಾವಹಿಸಿದ್ದಾರೆ. ಆತ ವಾಸವಿದ್ದ ನಗರದ ಅಪಾರ್ಟ್ಮೆಂಟ್‌ನ ಎಲ್ಲಾ ನಿವಾಸಿಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ ಎಂದರು.
ಮುಂಜಾಗ್ರತಾ ಕ್ರಮವಾಗಿ ಸೋಂಕಿತ ಟೆಕ್ಕಿ ಸುತ್ತಮುತ್ತ ಇದ್ದ ವ್ಯಕ್ತಿಗಳ ಆರೋಗ್ಯ ಪರೀಕ್ಷೆ ಮಾಡಲಾಗುತ್ತಿದೆ.

ಈಗಾಗಲೇ ಆತನೊಂದಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ 15ಮಂದಿ, ವಿಮಾನ ನಿಲ್ದಾಣದಿಂದ ಬಂದ ಕ್ಯಾಬ್‌ನ ಚಾಲಕ, ರೂಮ್‌ಮೇಟ್, ಖಾಸಗಿ ಸಂಸ್ಥೆಯಲ್ಲಿ ಆತನೊಂದಿಗೆ ಕೆಲಸ ಮಾಡುತ್ತಿದ್ದ 25 ಸಿಬ್ಬಂದಿ, ಹೈದರಾಬಾದ್‌ಗೆ ಪ್ರಯಾಣ ಮಾಡಿದ ಕರ್ನಾಟಕ ಮೂಲದ 23 ಪ್ರಯಾಣಿಕರನ್ನು ಸೇರಿದಂತೆ 65 ಮಂದಿಯನ್ನು ಅವರ ಮನೆಗಳಲ್ಲಿಯೇ ನಿಗಾದಲ್ಲಿರಿಸಲಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss