ಹೊಸ ದಿಗಂತ ವರದಿ ಉಡುಪಿ:
ಸಿದ್ದರಾಮಯ್ಯ ತಮ್ಮ ಆಡಳಿತ ಅವಧಿಯಲ್ಲಿ ಅಭಿವೃದ್ಧಿಗಿಂತ ಜಾತಿ ಜಾತಿಯನ್ನು ಒಡೆದು ಆಳುವುದರಲ್ಲೇ ಮಗ್ನರಾಗಿದ್ದರು. ಅವರಿಗೆ ಕಾಂಗ್ರೆಸ್ ಅಥವಾ ಬೇರೆಲ್ಲೂ ಭವಿಷ್ಯವಿಲ್ಲ, ಅವರ ಮಾತಿಗೆ ಯಾರೂ ಬೆಲೆ ಕೊಡುವುದಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸುಳ್ಳು ಹೇಳುವುದರಲ್ಲಿ ಯಡಿಯೂರಪ್ಪ ಮಿನಿ ಮೋದಿ ಎಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಶೋಭಾ ಕರಂದ್ಲಾಜೆ ಸೋಮವಾರ ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ರಾಜ್ಯದ ಆಡಳಿತ ನಡೆಸಿದವರು, ಕರ್ನಾಟಕ ಸರಕಾರದಲ್ಲಿ ಅತೀ ಹೆಚ್ಚು ಬಜೆಟ್ ಕೊಟ್ಟವರು. ಅವರ ಆಡಳಿತದ ಸಂದರ್ಭದಲ್ಲಿ ಯಾವ ರೀತಿ ಒಂದೊಂದು ಕೋಮಿನ ಜನರನ್ನು ಒಡೆದು ಆಳುವ ನೀತಿಯನ್ನು ಅನುಸರಿಸಿದ್ದರು ಎಂಬುದನ್ನು ನೋಡಿದ್ದೇವೆ. ಸಿದ್ದರಾಮಯ್ಯ ಅವರ ಸರಕಾರ ಯಾವುದೇ ಅಭಿವೃದ್ಧಿ ಮಾಡಿಲ್ಲ. ಸುಳ್ಳು ಹೇಳುವುದಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಿಪುಣರು. ಮೋದಿ ಸರಕಾರ ನೀಡಿದ ಅಕ್ಕಿಯನ್ನು ನಾವೇ ಕೊಟ್ಟದ್ದು ಎಂದು ಹೇಳಿದರು. ಯಾವುದೇ ಅಭಿವೃದ್ಧಿ ಮಾಡದೇ ಕೇವಲ ಗಾಂಧಿ ಹೆಸರಿನಲ್ಲಿ ರಾಜ್ಯ ಮತ್ತು ದೇಶ ಹಾಳು ಮಾಡಿದ್ದಾರೆ. ರಾಜ್ಯದ ಜನರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಗೆ ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ ಹಿನ್ನೆಲೆಯಲ್ಲಿ ಡಿ.ಕೆ.ಶಿ. ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶೋಭಾ, ಬುಟ್ಟಿಯಲ್ಲಿ ಹಾವಿದೆ, ಹಾವಿದೆ ಎಂದು ಹೆದರಿಸುವುದಲ್ಲ. ಆ ಹಾವನ್ನು ಬಿಡಿ ಡಿ.ಕೆ. ಶಿವಕುಮಾರ್ ಅವರೇ… ಯಾವುದೇ ವಿಚಾರವನ್ನು ಬಹಿರಂಗ ಪಡಿಸಬೇಕು. ನಿಮಗೇನು ಗೊತ್ತಿದೆ? ಇದರ ಹಿಂದೆ ನಿಮ್ಮ ಷಡ್ಯಂತ್ರವಿದೆಯೇ? ನೀವೇನಾದರೂ ನಮ್ಮ ನಾಯಕರ ವಿರುದ್ಧ ಷಡ್ಯಂತರ ಮಾಡಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಿ. ಯಾವ ಹಾವನ್ನು ಬಿಡುತ್ತೀರಿ ಎಂಬುದನ್ನು ನಾವು ಕಾದು ನೋಡುತ್ತೇವೆ ಎಂದು ಲೇವಡಿ ಮಾಡಿದರು.