Sunday, June 26, 2022

Latest Posts

ಆತ್ಮಹತ್ಯೆಗೆ ಪ್ರಚೋದನೆ ಸಾಬೀತುಪಡಿಸುವುದು ಪೊಲೀಸರ ಹೊಣೆ: ಸುಪ್ರೀಂ ಕೋರ್ಟ್ ತೀರ್ಪು

ಹೊಸದಿಲ್ಲಿ: ಆರೋಪಿಗೆ ಮೃತ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರಚೋದಿಸುವ ಉದ್ದೇಶವಿತ್ತೆಂದು ಗ್ರಹಿಸಿದರೆ ಅಥವಾ ಮಾತಲ್ಲಿ ಹೇಳಿದರೆ ಸಾಲದು, ಇದನ್ನು ಬಲವಾದ ಸಾಕ್ಷ್ಯ ಸಮೇತ ಸಾಬೀತು ಪಡಿಸುವುದು ಪೊಲೀಸರ ಹೊಣೆ ಎಂದು ಸರ್ವೋಚ್ಛ ನ್ಯಾಯಾಲಯವು ಪ್ರಕರಣವೊಂದರಲ್ಲಿ ತೀರ್ಪಿತ್ತಿದೆ.
ಭಾರತೀಯ ದಂಡ ಸಂಹಿತೆಯ ಕಲಂ ೧೦೭ರ ಪ್ರಕಾರ ‘ಅಬೆಟ್‌ಮೆಂಟ್’ ಅಂದರೆ, ಆರೋಪಿಯು ಮೃತ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರಚೋದಿಸಿರಬೇಕು ಅಥವಾ ಪ್ರೇರೇಪಿಸಿರಬೇಕು ಅಥವಾ ನಿರ್ದಿಷ್ಟ ಕೃತ್ಯವೆಸಗಲು ಅಥವಾ ಎಸಗದಿರಲು ಉದ್ದೇಶಪೂರ್ವಕ ಸಹಾಯ ಮಾಡಿರಬೇಕು. ಐಪಿಸಿ ಕಲಂ ೩೦೬ರ ಪ್ರಕಾರ ವ್ಯಕ್ತಿ ತನ್ನ ಪ್ರಾಣವನ್ನು ಸ್ವಯಂ ನಾಶಮಾಡಲು ಆರೋಪಿ ಸಂಪೂರ್ಣ ಸಹಕಾರವಿತ್ತಿರಬೇಕು ಅಥವಾ ತುಂಬು ಪ್ರಚೋದನೆ ನೀಡಿರಬೇಕು ಎಂಬ ವ್ಯಾಖ್ಯಾನವಿದೆ. ಇದನ್ನು ಪೊಲೀಸರು ಸಾಕ್ಷ್ಯ ಸಮೇತ ಸಾಬೀತುಪಡಿಸುವುದು ಮುಖ್ಯ ಎಂದು ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಸೂರ್ಯಕಾಂತ್ ಮತ್ತು ಹೃಷಿಕೇಶ್‌ರಾಯ್ ಇವರನ್ನು ಒಳಗೊಂಡ ತ್ರಿಸದಸ್ಯ ನ್ಯಾಯಪೀಠ ಪ್ರತಿಪಾದಿಸಿದೆ.
ಆರೋಪಿಗೆ ಅಪರಾಧಿ ಮನೋಭಾವವಿತ್ತು. ಇದರ ಪಕ್ವ ಹಂತದಲ್ಲಿ ಈತ ಮೃತ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಾನೆಂಬುದನ್ನು ದೃಢಪಡಿಸುವಂತಹ ದಾಖಲೆಗಳು ತೀರಾ ಅವಶ್ಯ . ಇದರ ವಿನ:, ಆರೋಪಿ ಆತ್ಮಹತ್ಯೆಯ ಪ್ರಚೋದಕ ಎಂಬುದನ್ನು ಪೊಲೀಸರೇ ತಮ್ಮಷ್ಟಕ್ಕೆ ಗ್ರಹಿಸುವಂತಿಲ್ಲ ಎಂದು ಪಂಜಾಬಿನ ಗುರುಚರಣ್ ಸಿಂಗ್ ಎಂಬವರ ಮೇಲ್ಮನವಿ ವಿಚಾರಣೆ ಸಂದರ್ಭ ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಗುರುಚರಣ್ ಅವರ ಪತ್ನಿ ೨೨ ವರ್ಷ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಪತಿಯ ಪ್ರಚೋದನೆಯೇ ಕಾರಣವೆಂದು ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದರು. ಗುರುಚರಣ್ ಪತ್ನಿಯ ಆಶೆಗಳನ್ನು ಉದ್ದೇಶಪೂರ್ವಕ ನಿರ್ಲಕ್ಷಿಸಿದ ಕಾರಣದಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಳೆಂದು ಪರಿಗಣಿಸಿದ ಅಧಿನ ನ್ಯಾಯಾಲಯ ಗುರುಚರಣ್ ಅಪರಾ ಎಂದು ತೀರ್ಪಿತ್ತಿತ್ತು. ಆದರೆ ಈತ ಪತ್ನಿಗೆ ಕಿರುಕುಳ ಕೊಟ್ಟ ಆರೋಪವಾಗಲಿ ಅಥವಾ ಈ ಬಗ್ಗೆ ಯಾವುದೇ ನೇರ ಸಾಕ್ಷಿ- ಸಾಕ್ಷ್ಯವಾಗಲಿ ಈತನ ವಿರುದ್ಧ ಇರಲಿಲ್ಲ. ನಂತರ ಹೈಕೋರ್ಟ್ ಕೂಡ ಅಧಿನ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು.
ಇದರ ವಿರುದ್ಧ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಯಲ್ಲಿ, ತಾನು ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದೇನೆ ಅಥವಾ ಈ ದಾರುಣ ಕೃತ್ಯವೆಸಗುವಲ್ಲಿ ಆಕೆಗೆ ಉದ್ದೇಶಪೂರ್ವಕ ಸಹಾಯ ಮಾಡಿದ್ದೇನೆಂಬ ಆರೋಪ ಸಾಬೀತುಪಡಿಸುವ ಒಂದೇ ಒಂದು ಸಾಕ್ಷ್ಯಗಳು ಪೊಲೀಸರ ಬಳಿ ಇಲ್ಲ. ಹಾಗಿರುವಾಗ ತನ್ನನ್ನು ಅಪರಾಧಿ ಎಂದು ಪರಿಗಣಿಸುವುದು ನ್ಯಾಯವೇ ಎಂದು ನ್ಯಾಯಾಲಯವನ್ನು ಪ್ರಶ್ನಿಸಿದ್ದ.
ವಾದ -ಪ್ರತಿವಾದ ಆಲಿಸಿದ ಸರ್ವೋಚ್ಛ ನ್ಯಾಯಾಲಯದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿ ಅಧಿನ ನ್ಯಾಯಾಲಯಗಳ ತೀರ್ಪನ್ನು ತಳ್ಳಿಹಾಕಿತಲ್ಲದೆ, ಎರಡು ಮಕ್ಕಳ ತಾಯಿಯಾದ ಯುವತಿ ಯಾಕಾಗಿ ಆತ್ಮಹತ್ಯೆ ಮಾಡಿಕೊಂಡಳೆಂಬುದನ್ನು ನ್ಯಾಯಾಲಯಕ್ಕೆ ಊಹಿಸಲಾಗದು ಎಂದು ಹೇಳಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss