Thursday, August 18, 2022

Latest Posts

ಆತ್ಮ ನಿರ್ಭರ್ ಯೋಜನೆ ಸದುಪಯೋಗಕ್ಕೆ ಬಾಗಲಕೋಟೆ ಸಂಸದ ಕರೆ

ಬಾಗಲಕೋಟೆ: ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಆತ್ಮ ನಿರ್ಭಯ ಯೋಜನೆಯಡಿ 3 ಲಕ್ಷ ಕೋಟಿ ರೂ.ಗಳ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡುವ ಸಾಲ ಸೌಲಭ್ಯದ ಸದುಪಯೋಗಕ್ಕೆ ಸಂಸದ ಪಿ.ಸಿ.ಗದ್ದಿಗೌಡರ ಕರೆ ನೀಡಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜರುಗಿದ ಆತ್ಮ ನಿರ್ಭಯ ಯೋಜನೆ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೋವಿಡ್-19 ಭೀತಿಯ ಹಿನ್ನಲೆಯಲ್ಲಿ ಕೇಂದ್ರ ಸರಕಾರ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದ್ದು, ಅದರಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಗಳ ಮೀಸಲಿರಿಸಿದ್ದು, ಜಿಲ್ಲೆಯ ಕೈಗಾರಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕೋವಿಡ್ ಬಿಕ್ಕಟ್ಟಿನಿಂದ ತೊಂದರೆಗೆ ಒಳಗಾಗಿದ್ದು, ಅವುಗಳನ್ನು ಪುನಚ್ಛೇತನಗೊಳಿಸುವ ದೃಷ್ಠಿಯಿಂದ ಈ ಯೋಜನೆಯ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತಿದೆ. ಈ ಯೋಜನೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲ ಪಡೆದವರಿಗೆ ಮಾತ್ರ ಅನ್ವಯವಾಗಲಿದ್ದು, ಸಹಕಾರ ಬ್ಯಾಂಕ್‍ಗಳಲ್ಲಿ ಸಾಲ ಪಡೆದವರಿಗೆ ಅನ್ವಯವಾಗುವದಿಲ್ಲ. ಜಿಲ್ಲೆಯ ಬ್ಯಾಂಕರ್ಸ್‍ಗಳು ಅರ್ಹ ಉದ್ಯಮಗಳಿಂದ ತುರ್ತಾಗಿ ಅರ್ಜಿಗಳನ್ನು ಪಡೆದುಕೊಂಡು ಇದರ ಸದುಪಯೋಗ ಪಡೆಯುವಂತಾಗಬೇಕು ಎಂದರು.
ಈ ಆತ್ಮ ನಿರ್ಭರ್ ಯೋಜನೆ ಅಕ್ಟೋಬರ 31 ವರೆಗೆ ಇದ್ದು, ಈ ಅವಧಿಯೊಳಗೆ 3 ಲಕ್ಷ ಕೋಟಿ ರೂ.ಗಳು ಖಾಲಿಯಾದರೆ ಈ ಯೋಜನೆ ಮುಕ್ತಾಯಗೊಳ್ಳುತ್ತದೆ. ಆದ್ದರಿಂದ ಜಿಲ್ಲೆಯಲ್ಲಿರುವ ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ತುರ್ತಾಗಿ ಬ್ಯಾಂಕ್‍ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಸಾಲ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಈಗಾಗಲೇ 2193 ಕೈಗಾರಿಕೆಗಳು ಒಟ್ಟು 25 ಕೋಟಿ ರೂ.ಗಳ ಸಾಲ ಪಡೆದುಕೊಂಡಿರುವುದಾಗಿ ಸಂಸದರು ತಿಳಿಸಿದರು.
ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಮಾತನಾಡಿ ಸರಕಾರದ ಯೋಜನೆಗಳ ಲಾಭ ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ ಎಂಬ ನೋವು ಇದೆ. ವಿವಿಧ ಇಲಾಖೆಯವರು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರವೇ ಬ್ಯಾಂಕ್‍ಗಳಿಗೆ ಸಾಲ ಸೌಲಭ್ಯಕ್ಕಾಗಿ ಆಯ್ಕೆ ಪಟ್ಟಿಯನ್ನು ಕಳುಹಿಸಲಾಗಿರುತ್ತದೆ. ಆಯ್ಕೆ ಪಟ್ಟಿಯಲ್ಲಿರುವ ಫಲಾನುಭವಿಗಳು ನಮ್ಮ ವ್ಯಾಪ್ತಿಗೆ ಬರುವದಿಲ್ಲವೆಂದು, ಸೆಕ್ಯೂರಿಟಿ ಕೊಟ್ಟವರಿಗೆ ಮಾತ್ರ ಸಾಲ ನೀಡುವ ಬಗ್ಗೆ ದೂರುಗಳು ಬರುತ್ತಿವೆ. ಇಂತಹ ದೂರುಗಳು ಕಡಿಮೆಯಾಗಿ ನಿಜವಾದ ಫಲಾನುಭವಿಗಳಿಗೆ ಸಾಲ ನೀಡುವಂತೆ ಬ್ಯಾಂಕರ್ಸ್‍ಗಳಿಗೆ ತಿಳಿಸಿದರು.
ಜಿಲ್ಲಾ ಅಗ್ರಣಿ ಬ್ಯಾಂಕ್‍ನ ವ್ಯವಸ್ಥಾಪಕ ಪಿ ಗೋಪಾಲರೆಡ್ಡಿ ಮಾತನಾಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಾಲ ಪಡೆದು ಫೆಬ್ರವರಿ 29ಕ್ಕೆ 25 ಕೋಟಿಗಿಂತ ಕಡಿಮೆ ಬಾಕಿ ಇರುವವರು ಆತ್ಮ ನಿರ್ಭರ್ ಯೋಜನೆಯ ಲಾಭ ಪಡೆಯಬಹುದಾಗಿದೆ. ಅಲ್ಲದೇ ವಾರ್ಷಿಕ 100 ಕೋಟಿ ವ್ಯವಹಾರ ನಡೆದಿರಬೇಕು. ಸಾಲದ 2 ಕಂತು ಬಾಕಿ ಉಳಿದವರು ಸಹ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಸಾಲ ಪಡೆದು ಬಾಕಿ ಉಳಿದ ಮೊತ್ತದ ಶೇ.20 ರಷ್ಟು ಸಾಲ ನೀಡಲಾಗುತ್ತಿದೆ. ಈ ಸಾಲ ಯೋಜನೆ 3 ವರ್ಷದ ಅವಧಿಯದಾಗಿದ್ದು, ಮೊದಲ ವರ್ಷ ಕೇವಲ ಬಡ್ಡಿಯ ಹಣವನ್ನು ಕಟ್ಟಬಹುದಾಗಿದೆ. ಎರಡನೇ ವರ್ಷದಿಂದ ಅಸಲು ಕಟ್ಟಬಹುದಾಗಿರುತ್ತದೆ. ಶೇ.9.95 ಕ್ಕಿಂತ ಹೆಚ್ಚಿನ ಬಡ್ಡಿಯನ್ನು ತೆಗೆದುಕೊಳ್ಳುವಂತಿಲ್ಲ. ಕೆನರಾ ಬ್ಯಾಂಕಿನಿಂದ ಶೇ.7.50 ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿರುವುದಾಗಿ ತಿಳಿಸಿದರು.
ನಂತರ ಕಳೆದ ಸಾಲಿನ ಸರಕಾರದ ವಿವಿಧ ಯೋಜನೆಗಳಿಗೆ ಬ್ಯಾಂಕ್‍ಗಳು ವಿತರಿಸಿದ ಬಗ್ಗೆ ಪ್ರಗತಿ ಪರಿಶೀಲನೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ನಬಾರ್ಡನ ಡಿಡಿಎಂ ಯಮುನಾ ಪೈ, ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ.ದೇಸಾಯಿ, ಕೆನರಾ ಬ್ಯಾಂಕಿನ ರಿಜನಲ್ ಮ್ಯಾನೇಜರ್ ವೈ ಸತೀಶಬಾಬು, ಕರ್ನಾಟಕ ವಿಕಾಶ ಗ್ರಾಮೀಣ ಬ್ಯಾಂಕಿನ ರಿಜಿನಲ್ ಮ್ಯಾನೇಜರ್ ಶ್ರೀಧರ ಎನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಕೈಗಾರಿಕೆಗಳ ಮಾಲಿಕರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!