ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಬರ ಕಲ್ಪನೆಯಂತೆ, ಭಾರತದಲ್ಲಿ ಶಿಕ್ಷಣ ಪಡೆದ ನಮ್ಮ ಯುವಕ ಯುವತಿಯರು, ತಮ್ಮ ಜ್ಞಾನವನ್ನ ನಮ್ಮ ರಾಷ್ಟ್ರ ದ ಅಭಿವೃದ್ಧಿಗೆ ಧಾರೆ ಎರೆಯುವಂತೆ ಪ್ರೇರೇಪಿಸಬೇಕಾಗಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಪ್ರೊ. ಜೆ. ಹೇಮಂತ್ ಕುಮಾರ್ ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ೭೪ ನೇ ಸ್ವಾತಂತ್ರ್ಯೋ ವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿ, ಮಾತನಾಡಿದ ಅವರು, ಯುವಜನತೆಯು ಭಾರತ ದೇಶದ ಜನಸಂಖ್ಯೆಯ ಪ್ರಧಾನ ಅಂಶವಾಗಿರುವುದರಿಂದ , ಅವರ ವಿದ್ಯೆ ಮತ್ತು ಉದ್ಯೋಗ ನಮ್ಮ ಗಮನಕ್ಕೆ ಬರಬೇಕಾಗಿದೆ. ಆ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಕೇಂದ್ರಗಳಾದಂತಹ ವಿಶ್ವವಿದ್ಯಾನಿಲಯಗಳ ಪಾತ್ರ ದೊಡ್ಡದು. ಹೀಗಾಗಿ ಮೈಸೂರು ವಿವಿ ಉನ್ನತ ಶಿಕ್ಷಣಕ್ಕೆ ನೀಡಿರುವ ಕೊಡುಗೆ ಅಪಾರ ಎಂದರು. ಶಿಕ್ಷಣಕ್ಕೂ ಮತ್ತು ಸ್ವಾತಂತ್ರಕ್ಕೂ ಅವಿನಾಭಾವ ಸಂಬಂಧವಿದೆ. ಒಂದು ರಾಷ್ಟ್ರದ ಸ್ವತಂತ್ರ್ಯ ಸುರಕ್ಷಿತವಾಗಿರಬೇಕಾದರೇ ಸುಶಿಕ್ಷಿತರು ಜಾಗೃತರಾಗಿರಬೇಕು. ಪ್ರಧಾನಿಗಳು ಮೇಲಿಂದ ಮೇಲೆ ನೆನಪಿಸುವ ಹಾಗೆ, ನಾವು ಉದ್ಯೋಗವನ್ನ ಬೇಡುವವರನ್ನ ಸೃಷ್ಠಿಸುವುದಕ್ಕಿಂತ ಉದ್ಯೋಗವನ್ನ ನೀಡುವವರನ್ನ ಸೃಷ್ಠಿಸಬೇಕು ಎಂದು ಸಲಹೆ ನೀಡಿದರು.
ಕೊರೋನಾ ವೈರಸ್ ಹಾವಳಿಯ ಪ್ರಸ್ತುತ ಸಂದರ್ಭದಲ್ಲಿ, ಜಗತ್ತಿನ ಹಲವು ರಾಷ್ಟ್ರಗಳಲ್ಲಿ ನೆಲೆಸಿದ್ದ ಭಾರತದ ಹಲವು ಸುಶಿಕ್ಷಿತರು ಮರಳಿ ಮನೆಗೆ ಬರುವಂತಾಯಿತು. ಭಾರತದಲ್ಲಿ ಶಿಕ್ಷಣ ಪಡೆದ ನಮ್ಮ ಯುವಕ ಯುವತಿಯರು ತಮ್ಮ ಜ್ಞಾನವನ್ನ ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಧಾರೆ ಎರೆಯುವಂತೆ ಅವರನ್ನ ಇಲ್ಲಿಯೇ ಉಳಿಸಿಕೊಳ್ಳಬೇಕಾಗಿದೆ. ಪ್ರಧಾನಿಮಂತ್ರಿಗಳ ಆತ್ಮನಿರ್ಭರ ಭಾರತ ಕಲ್ಪನೆಯೂ ಆದೇ ಆಗಿದೆ. ನಮ್ಮ ಅಗತ್ಯವಾದ ವಸ್ತುಗಳನ್ನ ನಾವೇ ಸೃಷ್ಠಿಸಿಕೊಳ್ಳುವುದು ಮಾತ್ರವಲ್ಲ. ನಮ್ಮ ಬುದ್ದಿವಂತ ಪ್ರತಿಭಾವಂತ ಸುಶಿಕ್ಷಿತರನ್ನ ಇಲ್ಲೇ ಇರಿಸಿಕೊಂಡು ಹೆಚ್ಚಿನ ರೀತಿಯಲ್ಲಿ ಅವರು ಸೇವೆ ಮಾಡುವಂತೆ ಪ್ರೇರೇಪಿಸಬೇಕಾಗಿದೆ ಎಂದು ಕರೆ ನೀಡಿದರು.