ಹೊಸದಿಗಂತ ಆನ್ ಲೈನ್ ಡೆಸ್ಕ್:
ಕಳೆದ ಎಂಟು ತಿಂಗಳಲ್ಲಿ ಉತ್ತರ ಪ್ರದೇಶ ಸರಕಾರ 26,62,960 ಜನರಿಗೆ ಉದ್ಯೋಗ ಒದಗಿಸಿದೆ. ಈ ಕುರಿತು ಮಾಹಿತಿ ನೀಡಿದ ಯೋಗಿ ಸರಕಾರ, ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಈ ಕ್ರಿಯಾ ಯೋಜನೆಯಂತೆ ಕಾರ್ಯನಿರ್ವಹಿಸಿ, ‘ಆತ್ಮನಿರ್ಭರ’ ಪ್ಯಾಕೇಜ್ ಅಡಿ 6,65,740 ಹೊಸ ಘಟಕಗಳಲ್ಲಿ 26,62,960 ಜನರಿಗೆ ಉದ್ಯೋಗ ನೀಡಲಾಗಿದೆ ಎಂದು ಹೇಳಿದೆ.
ಇದಲ್ಲದೇ ‘ಉದ್ಯೋಗ ಪೋರ್ಟಲ್’ ಮೂಲಕ 5,25,978 ಜನರಿಗೆ ಉದ್ಯೋಗ ಒದಗಿಸಲಾಗಿದೆ.
ಕೊರೋನಾ ಲಾಕ್ಡೌನ್ ಸಮಯದಲ್ಲಿ ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದರು, ಇಂತಹ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ನಿರಂತರ ಉದ್ಯೋಗ ನೀಡಲು ಪ್ರಯತ್ನಿಸಿದ್ದಾರೆ. ಅವರ ಪ್ರಯತ್ನಗಳಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರಿಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ವಲಯದಲ್ಲಿ ಉದ್ಯೋಗ ದೊರಕಿದೆ.
ಎಂಎಸ್ಎಂಇ ಇಲಾಖೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಳೆದ ಎಂಟು ತಿಂಗಳಲ್ಲಿ ರಾಜ್ಯದಲ್ಲಿ 6,65,740 ಹೊಸ ಘಟಕಗಳನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ 26,62,960 ಜನರಿಗೆ ಉದ್ಯೋಗ ದೊರೆತಿದೆ. ಈ ಪೈಕಿ 2,57,348 ವಲಸೆ ಕಾರ್ಮಿಕರಿದ್ದು, ಈಗಾಗಲೇ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಘಟಕಗಳಲ್ಲಿ ಉದ್ಯೋಗ ಒದಗಿಸಲಾಗಿದೆ.
‘ಆತ್ಮನಿರ್ಭರ’ ಪ್ಯಾಕೇಜ್ ಅಡಿ ಸ್ಥಾಪಿಸಲಾದ 4,24,283 ಯುನಿಟ್ಗಳಿಗೆ 1,092 ಕೋಟಿ ರೂ. ಸಾಲ ನೀಡಿದೆ. ಈ ಮೂಲಕ ಉದ್ಯೋಗ ಸೃಷ್ಟಿಗೆ ನೆರವಾಗಿದೆ.