ಹೊಸದಿಗಂತ ವರದಿ, ಕೊಡಗು:
ಸಿಕ್ಕಲ್ ಸೆಲ್ ಅನಿಮಿಯಾ ಎಂಬ ರಕ್ತ ಹೀನತೆ ಕಾಯಿಲೆಯಿಂದ ಬಳಲುತ್ತಿರುವ ಆದಿವಾಸಿ ಜೇನು ಕುರುಬ, ಎರವ, ಸೋಲಿಗ, ಕಾಡುಕುರುಬ ಜನಾಂಗದವರ ಸಮಗ್ರ ಆರೋಗ್ಯ ಪಾಲನೆ ಸಂಬಂಧಿಸಿದಂತೆ ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆದಿವಾಸಿ ಸಮುದಾಯದ ವಿವಿಧ ಅಭಿವೃದ್ಧಿ ಯೋಜನೆಯಡಿ ಸಿಕ್ಕಲ್ ಸೆಲ್ ಅನಿಮಿಯಾ ರಕ್ತಹೀನತೆ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.
ಸಿಕ್ಕಲ್ ಸೆಲ್ ರಕ್ತ ಹೀನತೆ ಸ್ಕ್ರೀನಿಂಗ್ ಪರೀಕ್ಷೆಯನ್ನು ಹೆಚ್ಚಿಸಬೇಕು. ಈ ರೋಗದಿಂದ ಬಳಲುತ್ತಿರುವವರನ್ನು ಗುರುತಿಸಿ ಹೆಚ್ಚಿನ ಆರೋಗ್ಯ ಸೇವೆ ಕಲ್ಪಿಸಬೇಕು ಎಂದು ಅವರು ನಿರ್ದೇಶನ ನೀಡಿದರು. ಸಿಕ್ಕಲ್ ಸೆಲ್ ಅನಿಮಿಯಾ ಎಂಬ ರಕ್ತ ಹೀನತೆ ತಡೆಯುವಲ್ಲಿ ಅಗತ್ಯ ಮಾನವ ಸಂಪನ್ಮೂಲ, ವಾಹನ ವ್ಯವಸ್ಥೆ, ಪ್ರಯೋಗಾಲಯ ಮತ್ತಿತರ ಸೌಲಭ್ಯಗಳನ್ನು ನೀಡಿದ್ದರೂ ಸಹ ಸರಿಯಾದ ರೀತಿಯಲ್ಲಿ ಆರೋಗ್ಯ ಸೌಲಭ್ಯ ಕಲ್ಪಿಸದಿರುವುದಕ್ಕೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.
ಆದಿವಾಸಿ ಸಮುದಾಯಕ್ಕೆ ಆರೋಗ್ಯ ಸಂಬಂಧಿಸಿದಂತೆ ಹಾಡಿಗಳಿಗೆ ತೆರಳಿ ಮಾಹಿತಿ ನೀಡಬೇಕು. ಯಾರೂ ಸಹ ರಕ್ತ ಹೀನತೆಯಿಂದ ಬಳಲಬಾರದು. ಪ್ರತಿ ನಿತ್ಯ ಆರೋಗ್ಯ ಉಪಚರಿಸಬೇಕು. ರಕ್ತ ಹೀನತೆ ಪರೀಕ್ಷೆ ಮಾಡಿದವರನ್ನು ಆಗಾಗ ಕೌನ್ಸೆಲಿಂಗ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಸಿಕ್ಕಲ್ ಸೆಲ್ ಅನಿಮಿಯಾ ಎಂಬ ರಕ್ತ ಹೀನತೆ ಕಾಯಿಲೆ ನಿಯಂತ್ರಣ ಮಾಡುವಲ್ಲಿ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು ಎಂದು ಅವರು ಹೇಳಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು ಜಿಲ್ಲೆಯಲ್ಲಿ ಸಿಕ್ಕಲ್ ಸೆಲ್ ರಕ್ತ ಹೀನತೆಗೆ ಸಂಬಂಧಿಸಿದಂತೆ 6 ರಿಂದ 21 ವರ್ಷದೊಳಗಿನ 9931 ಮಂದಿಯನ್ನು ಪರೀಕ್ಷಿಸಬೇಕಿದ್ದು, ಇವರಲ್ಲಿ 3,597 ಮಂದಿಯನ್ನು ಪರೀಕ್ಷೆ ಮಾಡಲಾಗಿದೆ. 459 ಮಂದಿಗೆ ವಿವಿಧ ರೀತಿಯ ರಕ್ತ ಹೀನತೆ ಕಂಡುಬಂದಿದೆ. ಅದರಲ್ಲಿ 18 ಮಂದಿಯಲ್ಲಿ ಸಿಕ್ಕಲ್ ಸೆಲ್ ಅನಿಮಿಯಾ ರಕ್ತ ಹೀನತೆ ಗೋಚರಿಸಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಸಿಕ್ಕಲ್ ಸೆಲ್ ಅನಿಮಿಯಾ ರಕ್ತಹೀನತೆ ಬಗ್ಗೆ ಕೈಗೊಂಡಿರುವ ಆರೋಗ್ಯ ಸೇವೆ ಸಂಬಂಧ ಮಾಹಿತಿ ನೀಡಿದರು.
ಐಟಿಡಿಪಿ ಇಲಾಖಾ ಅಧಿಕಾರಿ ಸಿ.ಶಿವಕುಮಾರ್, ಭಾಗಮಂಡಲದ ಆರೋಗ್ಯ ನಿರೀಕ್ಷಕ ದೇವಿಪ್ರಸಾದ್, ಜಿ.ಪಂ. ಸಹಾಯಕ ನಿರ್ದೇಶಕ ಜೀವನ್ ಕುಮಾರ್ ಅವರು ಕೆಲವು ಮಾಹಿತಿ ನೀಡಿದರು.