Wednesday, August 17, 2022

Latest Posts

ಆನ್‌ಲೈನ್ ಯಕ್ಷಗಾನ: ವಿಶ್ವಯಕ್ಷ ಕಲಾನಿಕೇತನ ಸಂಸ್ಥೆ, ಕಲ್ಪಕಲಾ ಪ್ರತಿಷ್ಠಾನ ಯಶಸ್ವಿ ಪ್ರಯೋಗ

ಮಂಗಳೂರು: ಕರಾವಳಿಯಲ್ಲಿ ಬಡಗುತಿಟ್ಟಿನಲ್ಲಿ ಮೊದಲ ಬಾರಿಗೆ ಆನ್‌ಲೈನ್ ಯಕ್ಷಗಾನ ಪ್ರದರ್ಶನ ಸಂಘಟಿಸಿ ಮೂರು ಕಾರ್ಯಕ್ರಮಗಳನ್ನು ನೀಡಿದ ನೀಲಾವರ ಮಧ್ಯಸ್ಥರಬೆಟ್ಟು ಶ್ರೀ ವಿಶ್ವಯಕ್ಷ ಕಲಾನಿಕೇತನ ಸಂಸ್ಥೆ ಹಾಗೂ ಬ್ರಹ್ಮಾವರ ಬೈಕಾಡಿ ಕಲ್ಪಕಲಾ ಪ್ರತಿಷ್ಠಾನ ಈಗ ೪ನೇ ಪ್ರದರ್ಶನ ಮೂಲಕ ಜನಮನ ಸೂರೆಗೊಂಡಿದೆ.
ಆ. 8ರಂದು ಸಂಜೆ 5ಕ್ಕೆ ಬಡಗಿನ ಹವ್ಯಾಸಿ ಮತ್ತು ವೃತ್ತಿ ಕಲಾವಿದರಿಂದ ‘ಯಕ್ಷಲೋಕ ವಿಜಯ’ ಪ್ರದರ್ಶನ.  ಕೋಸ್ಟಲ್‌ವುಡ್ ಎಂಟರ್‌ಟೈನ್‌ಮೆಂಟ್ ಯೂಟ್ಯೂಬ್ ಚಾನೆಲ್ ಮೂಲಕ ಈ ಕಾರ್ಯಕ್ರಮ ನೇರಪ್ರಸಾರ. ಸುಮಾರು 20 ಮಂದಿ ಕಲಾವಿದರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ವಿಶೇಷವೆಂದರೆ ಯಾವುದೇ ವೇಷಧಾರಿ ಸಂಭಾವನೆ ಪಡೆಯುವುದಿಲ್ಲ. ಹಿಮ್ಮೇಳ ಕಲಾವಿದರಿಗೆ ಮಾತ್ರ ಗೌರವಧನ ನೀಡಲಾಗುತ್ತಿದೆ. ಕಲಾವಿದರು ವೇಷಭೂಷಣಗಳನ್ನು ಅವರವರೇ ತರುತ್ತಾರೆ. ನೀಲಾವರ ಮಧ್ಯಸ್ಥರಬೆಟ್ಟು ಶಾರದಾ ಸಭಾಭವನದಲ್ಲಿ ಪ್ರದರ್ಶನ ನಡೆಯುತ್ತದೆ ಎನ್ನುತ್ತಾರೆ ಕಾರ್ಯಕ್ರಮ ಸಂಘಟಕರಾದ ನೀಲಾವರ ಮಧ್ಯಸ್ಥರಬೆಟ್ಟು ಶ್ರೀ ವಿಶ್ವಯಕ್ಷ ಕಲಾನಿಕೇತನ ಸಂಸ್ಥೆಯ ವೈ.ಎಲ್. ವಿಶ್ವರೂಪ ಮಧ್ಯಸ್ಥ ನೀಲಾವರ.
ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಮತ್ತು ಅನ್‌ಲಾಕ್ ಬಳಿಕ ಯಕ್ಷಗಾನವನ್ನು ಪ್ರಯೋಗಾತ್ಮಕ ರೀತಿಯಲ್ಲಿ ಅಭಿವ್ಯಕ್ತಗೊಳಿಸಬೇಕು ಎಂಬ ಆಶಯದಿಂದ ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ಆನ್‌ಲೈನ್ ಯಕ್ಷಗಾನ ಸಂಘಟಿಸಿದ್ದೇವೆ. ಆರಂಭಿಕವಾಗಿ ಮಧುರಾವಲ್ಲಭ ಯಕ್ಷಗಾನ ಪ್ರದರ್ಶನ ಜನಮನ್ನಣೆ ಪಡೆಯಿತು. ಬಳಿಕ ಶ್ರೀಕೃಷ್ಣ ಲೀಲಾಮೃತ, ಶ್ರೀರಾಮಾಶ್ವಮೇಧ ಪ್ರಸಂಗ ಪ್ರದರ್ಶಿಸಿದ್ದೇವೆ. ಎಲ್ಲ ಕಲಾವಿದರ ಸಹಕಾರದಿಂದ ಇದೀಗ ನಾಲ್ಕನೇ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಕೊರೋನಾದಿಂದ ಯಕ್ಷಗಾನ ಪ್ರದರ್ಶನಗಳು ಸ್ಥಗಿತಗೊಂಡ ಬಳಿಕ ಕಲಾವಿದರಿಗೆ ಅವಕಾಶ ಇಲ್ಲದಾಯಿತು. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆ ಆನ್‌ಲೈನ್ ಯಕ್ಷಗಾನ ಸಂಘಟಿಸುತ್ತಿದೆ. ಕಲಾವಿದರ ಸಹಕಾರದಿಂದ ಕಾರ್ಯಕ್ರಮಗಳು ಜನಮೆಚ್ಚುಗೆ ಪಡೆಯುತ್ತಿವೆ. ಯೂಟ್ಯೂಬ್‌ನಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸುತ್ತಿದ್ದಾರೆ. ಕಾರ್ಯಕ್ರಮದ ಸಭಾಭವನಕ್ಕೂ ಅದರ ಮಾಲಕರು ಯಾವುದೇ ಬಾಡಿಗೆ ಪಡೆಯಲಾಗುತ್ತಿಲ್ಲ. ಊಟ, ತಿಂಡಿಯನ್ನು ಸಂಸ್ಥೆಯಿಂದಲೇ ಭರಿಸಲಾಗುತ್ತಿದೆ. ನಮ್ಮಿಂದ ಪ್ರೇರಣೆ ಪಡೆದು ಈಗ ಅನೇಕರು ಕರಾವಳಿಯಲ್ಲಿ ಬಡಗುತಿಟ್ಟಿನಲ್ಲಿ ಆನ್‌ಲೈನ್ ಯಕ್ಷಗಾನ ನಡೆಸುತ್ತಿದ್ದಾರೆ.
ವೈ.ಎಲ್. ವಿಶ್ವರೂಪ ಮಧ್ಯಸ್ಥ
ನೀಲಾವರ ಮಧ್ಯಸ್ಥರಬೆಟ್ಟು ಶ್ರೀ ವಿಶ್ವಯಕ್ಷ ಕಲಾನಿಕೇತನ ಸಂಸ್ಥೆ ಮುಖ್ಯಸ್ಥರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!