ಮಂಡ್ಯ : ಮಾನಸಿಕ ಒತ್ತಡದಿಂದ ಬಳಲುವವರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ನಡೆಸಿದಲ್ಲಿ ಮಾನಸಿಕ ತೊಳಲಾಟವನ್ನು ನಿಯಂತ್ರಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಪಿ. ಮಂಚೇಗೌಡ ಅಭಿಪ್ರಾಯಪಟ್ಟರು.
ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸೇವೆಗಳು, ಜಿಲ್ಲಾ ಆರೋಗ್ಯ ಸಂಘ ಇವರ ವತಿಯಿಂದ ರೋಟರಿ ಶಾಲೆಯ ಸಭಾಂಗಣದಲ್ಲಿ ಮಂಡ್ಯ ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ನಡೆದ ಮಾನಸಿಕ ಆರೋಗ್ಯ ಮತ್ತು ಚಿಕಿತ್ಸೆ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾನಸಿಕ ರೋಗಿಗಳಿಗೆ ಚಿಕಿತ್ಸೆ ಎಂದರೆ ಕೇವಲ ನಿಮ್ಹಾನ್ಸ್ ಎಂಬ ಸಂಸ್ಥೆ ಮಾತ್ರ ಇದ್ದು, ಈಗ ಬದಲಾದ ಸನ್ನಿವೇಶದಲ್ಲಿ ಪ್ರತೀ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡುವುದು ಹಾಗೂ ಕಾಯಿಲೆ ಇರುವ ವ್ಯಕ್ತಿಗಳನ್ನು ಮೊದಲೇ ಗುರುತಿಸಿ ಅವರು ಆತ್ಮಹತ್ಯೆಗೆ ಶರಣಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ನೀಡುವ ತರಬೇತಿ ಕಾರ್ಯಕ್ರಮಗಳು ಸಹಾಯಕವಾಗಿವೆ ಎಂದರು.
ಕಳೆದ ನಾಲ್ಕು ವರ್ಷಗಳಲ್ಲಿ ಇದ್ದಂತ ಆತ್ಮಹತ್ಯೆ ಪ್ರಕರಣಗಳು ಜಿಲ್ಲೆಯಲ್ಲಿ ಕಡಿಮೆಯಾಗಿವೆ. ರೈತ ಆತ್ಮಹತ್ಯೆ, ಮಾನಸಿಕ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಇದಕ್ಕೆ ಆರೋಗ್ಯ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಪ್ತ ಸಮಾಲೋಚನೆಯಲ್ಲಿ ತೊಡಗಿರುವುದೇ ಕಾರಣವಾಗಿದೆ ಎಂದು ಹೇಳಿದರು.