ಹೊಸ ದಿಗಂತ ವರದಿ, ಮೈಸೂರು:
ಆಫ್ಲೈನ್ ಪರೀಕ್ಷೆ ಬೇಡ, ಆನ್ಲೈನ್ ಪರೀಕ್ಷೆ ಬೇಕು ಎನ್ನುವ ರಾಜ್ಯದ ವಿದ್ಯಾರ್ಥಿಗಳ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಮೈಸೂರಿನಲ್ಲಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ಮಾಜಿ ಶಾಸಕ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ನಗರದ ಆರ್ ಗೇಟ್ ಬಳಿ ಕೆಲಕಾಲ ಪ್ರತಿಭಟನೆ ನಡೆಸಿದ ಅವರು, ವಿದ್ಯಾರ್ಥಿಗಳ ಈ ಬೇಡಿಕೆಗೆ ಸರ್ಕಾರ ಮಾನ್ಯತೆ ನೀಡಬೇಕು ಒತ್ತಾಯಿಸಿದರು.
ಆನ್ ಲೈನ್ ಪರೀಕ್ಷೆ ಬೇಕು ಎನ್ನುವುದು ವಿದ್ಯಾರ್ಥಿಗಳ ಬೇಡಿಕೆಯಾಗಿದ್ದು, ಸರಕಾರ ಇವರ ಬೇಡಿಕೆಗೆ ಮಾನ್ಯತೆ ನೀಡಬೇಕು. ವಿದ್ಯಾರ್ಥಿಗಳ ಜೊತೆ ನಾನು ಯಾವಾಗಲೂ ಇರ್ತೀನಿ. ನೀವು ಒಂದು ಒಕ್ಕೂಟ ಮಾಡಿ ನನಗೆ ತಿಳಿಸಿ ನಾನು ಬರುತ್ತೇನೆ. ನಿಮ್ಮ ಜೊತೆ ನಾನಿದ್ದೀನಿ, ಧೈರ್ಯವಾಗಿ ಇರಿ. ರಾಜ್ಯಾದ್ಯಂತ ಆನ್ ಲೈನ್ ಬಗ್ಗೆ ಹೋರಾಟ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಸಿಡಿ ಬ್ಲಾಕ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ:
ಸಿಡಿ ಮೂಲಕ ಮುಖ್ಯಮಂತ್ರಿಗಳನ್ನೇ ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ಕೂಡಲೇ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ವಾಟಾಳ್ ನಾಗರಾಜ್ ಇದೇ ವೇಳೆ ಆಗ್ರಹಿಸಿದರು.
ಕರ್ನಾಟಕದಲ್ಲಿ ಕಳೆದ ವಾರದಿಂದ ಸಿಡಿ ವಿಚಾರ ಚರ್ಚೆಯಾಗುತ್ತಿದೆ. ಸಿಡಿ ಮಾಡುವುದು ಅಪರಾಧ, ಕರ್ನಾಟಕದ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ ಎಂದಿದ್ದಾರೆ.
ಸಿಡಿ ಇದೆ ಎಂದು ಮುಖ್ಯಮಂತ್ರಿಗಳನ್ನು ಬ್ಲಾಕ್ ಮೇಲ್ ಮಾಡುವುದು ಸರಿಯಲ್ಲ. ಕೂಡಲೇ ಸಿಡಿ ಮಾಡಿದವರನ್ನು ಬಂಧಿಸಬೇಕು. ಈ ಪ್ರಕರಣ ಸಿಬಿಐಗೆ ವಹಿಸಬೇಕು. ಅಲ್ಲಿಯವರೆಗೂ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.