Wednesday, August 17, 2022

Latest Posts

ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಹಿಂದು ಧಾರ್ಮಿಕ ನಂಬಿಕೆಗೆ ಘಾಸಿ: ಪಾಠವನ್ನು ಕೈ ಬಿಡಲು ಶಿಕ್ಷಣ ಸಚಿವರ ಆದೇಶ

ಉಡುಪಿ: ಕರ್ನಾಟಕ ರಾಜ್ಯ ಪಠ್ಯಕ್ರಮದ ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಹಿಂದು ಧಾರ್ಮಿಕ ನಂಬಿಕೆಗೆ ಘಾಸಿಯಾಗುವ ಅಂಶಗಳಿವೆ ಎಂಬ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಪಾಠವನ್ನು ಕೈ ಬಿಡಲು ಶಿಕ್ಷಣ ಸಚಿವರು ಆದೇಶಿಸಿದ್ದಾರೆ.
ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ಅಂಶಗಳನ್ನು ಮಕ್ಕಳಿಗೆ ಪಠ್ಯ ಬೋಧಿಸುವುದು ಎಷ್ಟು ಸರಿ ಎಂಬ ವಿಚಾರ ಇತ್ತೀಚೆಗೆ ಚರ್ಚೆಗೀಡಾಗಿತ್ತು. ಈ ಕುರಿತು ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯತೀರ್ಥರು ಆಡಿಯೋ ಮೂಲಕ ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು.
ವಿವಾದಿತ ಪಠ್ಯದಲ್ಲಿ ಏನಿದೆ?
ವಿವಾದಕ್ಕೆ ಕಾರಣವಾದ ಪಠ್ಯದ ಸಾರಾಂಶ ಈ ರೀತಿ ಇದೆ. ‘ಉತ್ತರ ವೇದ ಕಾಲದಲ್ಲಿ ವೈದಿಕ ಆಚರಣೆಗಳಾದ ಯಾಗ-ಯಜ್ಞಗಳ ಹೆಸರಲ್ಲಿ ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು. ಇದರಿಂದ ಆಹಾರದ ಉತ್ಪಾದನೆ ಕುಂಠಿತವಾಯಿತು. ಯಾಗಗಳಿಗೆ ಆಹಾರ ಧಾನ್ಯ-ಹಾಲು-ತುಪ್ಪಗಳನ್ನು ಹಾಕಿದ ಪರಿಣಾಮ ಆಹಾರದ ಅಭಾವವೂ ಉಂಟಾಯಿತು. ಯಾಗ-ಯಜ್ಞಗಳಿಂದ ಮಾತ್ರ ಮುಕ್ತಿ ಸಾಧ್ಯ ಎಂಬ ನಂಬಿಕೆ ಜನರಲ್ಲಿ ಮನೆ ಮಾಡಿತ್ತು. ಸಂಸ್ಕೃತವೆಂಬ ಪುರೋಹಿತ ಭಾಷೆಯಲ್ಲಿ ಈ ಆಚರಣೆಗಳು ನಡೆಯುತ್ತಿದ್ದು, ಜನ ಸಾಮಾನ್ಯರಿಗೆ ಇದು ಅರ್ಥವಾಗುತ್ತಿರಲಿಲ್ಲ. ಸರಳ ಮಾರ್ಗಗಳ ಮೂಲಕ ಮುಕ್ತಿ ಹೊಂದಲು ಹೊಸ ಧರ್ಮವನ್ನು ಜನ ಅಪೇಕ್ಷಿಸುತ್ತಿದ್ದರು’ ಎಂಬುದು ಈ ಪಠ್ಯದಲ್ಲಿ ಉಲ್ಲೇಖಿಸಲಾಗಿದೆ.
ಪರ್ಯಾಯ ಮಠಾಧೀಶರು ಶ್ರೀಈಶಪ್ರಿಯತೀರ್ಥರು ಈ ವಿಚಾರಗಳನ್ನು ಆಕ್ಷೇಪಿಸಿ, ಯಾಗಗಳಿಗೆ ಮಹತ್ವ ಇತ್ತಾದರೂ, ಅದಕ್ಕೂ ಒಂದು ನಿಯಮ ಇತಿಮಿತಿಗಳಿತ್ತು. ಈ ಕುರಿತು ಭಾಗವತದಲ್ಲಿ ಉಲ್ಲೇಖವಿದೆ. ಎಲ್ಲಾ ಸಾಧಕರಿಗೂ ಯಾಗದಿಂದಲೇ ಮುಕ್ತಿ ಎಂಬ ಅಭಿಪ್ರಾಯ ಇರಲಿಲ್ಲ ಎಂದು 5 ಸಾವಿರ ವರ್ಷಗಳ ಹಿಂದೆ ಬಂದ ಭಾಗವತದಲ್ಲಿಯೇ ಹೇಳಿದೆ. ಹಾಗಾಗಿ ಪಠ್ಯದಲ್ಲಿರುವ ಮಾತು ಸರಿಯಲ್ಲ ಎಂದು ಆಡಿಯೋದಲ್ಲಿ ತಿಳಿಸಿದ್ದರು.
ಇದೀಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆ ಪಠ್ಯವನ್ನೇ ಕೈ ಬಿಡುವುದಾಗಿ ಹೇಳಿದ್ದಾರೆ. ಸಚಿವರು ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಈ ಪಾಠ ಪುಸ್ತಕ ಈ ವರ್ಷ ಪ್ರಕಟವಾಗಿದ್ದಲ್ಲ, ಆದರೂ ಈ ವರ್ಷ ಈ ಪಾಠವನ್ನು ಮಾಡದಿರುವಂತೆ ಆದೇಶ ಮಾಡುತ್ತೇನೆ, ಜೊತೆಗೆ ಮುಂದಿನ ವರ್ಷ ಪಠ್ಯ ಪುಸ್ತಕ ಪ್ರಕಟವಾಗುವಾಗ ಈ ಪಾಠ ತೆಗೆಸುತ್ತೇನೆ. ಈಗಾಗಲೇ ಪಠ್ಯ ಮುದ್ರಣವಾಗಿ ಮಕ್ಕಳಿಗೆ ತಲುಪಿದೆ. ಹಾಗಾಗಿ ಪಠ್ಯದಿಂದ ಹೊರತೆಗೆಯಲು ಆಗುವುದಿಲ್ಲ. ಈ ಬಗ್ಗೆ ವಿಷಾದವಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!