ತೀರ್ಥಹಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ಹಾಗೂ ಶಿವಮೊಗ್ಗ ಜಿ ನಿಕಟಪೂರ್ವ ಸಂಘಚಾಲಕ ಚಕ್ಕೋಡಬೈಲು ಬೆನಕ ಭಟ್ (86) ಬುಧವಾರ ಬೆಳಗ್ಗೆ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಪುತ್ರಿಯ ಮನೆಗೆ ತೆರಳಿದಾಗ ಬೆಳಗ್ಗೆ 5.30ರ ವೇಳೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಾಲ್ವರು ಪುತ್ರಿಯರು ಹಾಗೂ ಮೂವರು ಪುತ್ರರು ಸೇರಿ ಅಪಾರ ಕುಟುಂಬ ವರ್ಗ, ಶಿಷ್ಯ ವೃಂದವನ್ನು ಅವರು ಅಗಲಿದ್ದಾರೆ. ಅವರು ಅನೇಕ ವರ್ಷ ಶಿವಮೊಗ್ಗ ಜಿಲ್ಲಾ ಸಂಘಚಾಲಕರಾಗಿ ಹಾಗೂ ಸಂಘದ ಅನೇಕ ಜವಾಬ್ದಾರಿ ನಿರ್ವಹಿಸಿದ್ದರು.
ಸಾವಯವ ಕೃಷಿ, ಶಿಕ್ಷಣ, ಗ್ರಾಮ ವಿಕಾಸ, ಕೌಟುಂಬಿಕ ಮೌಲ್ಯಗಳ ಸಂವರ್ಧನೆ, ಸಾಮಾಜಿಕ ಸಾಮರಸ್ಯ, ಸಹಕಾರಿ ಕ್ಷೇತ್ರ ಸೇರಿ ಹಲವು ಸಮಾಜಮುಖಿ ಚಟುವಟಿಕೆಗಳನ್ನು ಸ್ವತಃ ನಡೆಸುತ್ತಿದ್ದ ಬೆನಕ ಭಟ್ ಅವರ ಅಗಲುವಿಕೆ ಯಿಂದ ಆರೆಸ್ಸೆಸ್ನ ಮೊದಲ ಗುಂಪಿನ ಸ್ವಯಂಸೇವಕರ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ.
ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಬೆನಕ ಭಟ್ಟರ ನಿಧನದ ಸುದ್ದಿ ಅತ್ಯಂತ ಆಘಾತಕರ. ಮನ ಶೂನ್ಯವಾಗಿಬಿಟ್ಟಿತು. ಏನು ಹೇಳಲೂ ತೋಚದು. ಉಳಿದ ಮಿತ್ರರೆಲ್ಲ ವ್ಯಕ್ತಪಡಿಸಿದ್ದನ್ನೂ ಸೇರಿಸಿ ಹಲವು ಭಾವನೆಗಳು ತುಂಬಿ ಬರುತ್ತಿವೆ. ಮನದಾಳದ ಶ್ರದ್ಧಾಂಜಲಿ, ಭಾವಾಂಜಲಿ ಅರ್ಪಿಸುತ್ತೇನೆ. ಅವರ ಆತ್ಮಕ್ಕಿ ಸದ್ಗತಿ ಸಿಗಲಿ. ಈ ಜಗತ್ತು ಬಡವಾಗದಂತೆ ಭಗವಂತ ಅಂಥವರನ್ನು ಪುನಃ ಪುನಃ ಸೃಜಿಸಿ, ಭೂಮಿಗೆ ಕಳುಹಿಸುತ್ತಿರಲಿ.
-ದತ್ತಾತ್ರೇಯ ಹೊಸಬಾಳೆ, ಆರ್ಎಸ್ಎಸ್ ಸಹ ಸರಕಾರ್ಯವಾಹ
ಬೆನಕ ಭಟ್ಟರು ಇಡೀ ಕುಟುಂಬ ವನ್ನು ಸಂಘದ ಕುಟುಂಬವನ್ನಾಗಿ ಮಾಡಿದವರು. ಅವರ ಸಂಘ ಕಾರ್ಯದ ರೀತಿ, ಆತ್ಮೀಯತೆಯನ್ನು ಪಡೆದವರಲ್ಲಿ ನಾನು ಒಬ್ಬ. ಅವರಿಗೆ ಭಗವಂತನ ಸಾನ್ನಿಧ್ಯ ದೊರೆಯಲೆಂದು ಪ್ರಾರ್ಥಿಸುತೇನೆ.
-ವಿ.ನಾಗರಾಜ್, ಆರೆಸ್ಸೆಸ್ ದಕ್ಷಿಣ ಪ್ರಾಂತ ಮಧ್ಯಕ್ಷೇತ್ರೀಯ ಸಂಘಚಾಲಕ