ಹೊಸದಿಲ್ಲಿ: ಕೋವಿಡ್ -19ರ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರ ಮೇಲೆ ನಡೆಯುವ ದಾಳಿಯನ್ನು ಸಹಿಸಲಾಗದು.ಅವರ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ. ಇದಕ್ಕಾಗಿಯೇ ಆರೋಗ್ಯ ಕಾರ್ಯಕರ್ತರ ಸುರಕ್ಷೆಗಾಗಿ ನಾವು ಹೊಸ ಸುಗ್ರೀವಾಜ್ಞೆ ತಂದಿದ್ದೇವೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಆರೋಗ್ಯ ಕಾರ್ಯಕರ್ತರ ಮೇಲೆ ದೇಶದ ಕೆಲವೆಡೆ ನಡೆದ ದಾಳಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಧಾನಿಯವರು ಇದನ್ನು ಸಹಿಸಲು ಸಾಧ್ಯವಿಲ್ಲ. ಎಪಿಡೆಮಿಕ್ ಡಿಸೀಸ್ (ಅಮೆಂಡ್ಮೆಂಟ್) ಆರ್ಡಿನೆನ್ಸ್ 2020 , ಕೋವಿಡ್-19ರ ವಿರುದ್ಧ ಮುಂಚೂಣಿಯಲ್ಲಿ ನಿಂತು ದಿಟ್ಟತನದಿಂದ ಹೋರಾಡುತ್ತಿರುವ ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತರ ರಕ್ಷಣೆಗೆ ನಮ್ಮ ಕಟಿಬದ್ಧತೆಯನ್ನು ಸಾರುತ್ತದೆ.ನಮ್ಮ ವೃತ್ತಿಪರರ ರಕ್ಷಣೆಯನ್ನು ಇದು ಖಾತ್ರಿಗೊಳಿಸುತ್ತದೆ. ಅವರ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ ಎಂಬುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇದೇ ವೇಳೆ , ಆರೋಗ್ಯ ಕಾರ್ಯಕರ್ತರ ಸುರಕ್ಷೆಯನ್ನು ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವೂ ಖಾತ್ರಿಪಡಿಸಿಕೊಳ್ಳಬೇಕು. ಅವರ ಸುರಕ್ಷೆಯನ್ನು ಖಾತ್ರಿ ಪಡಿಸುವಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಬೇಕೆಂಬುದಾಗಿ ಕೇಂದ್ರ ಸರಕಾರ ಸೂಚಿಸಿದ್ದು, ಆರೋಗ್ಯ ಕಾರ್ಯಕರ್ತರ ಮೇಲೆ ನಡೆಯುವ ಅನಾಗರಿಕ ಆಕ್ರಮಣಗಳನ್ನು ಹತ್ತಿಕ್ಕಲು ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವ ಸುಗ್ರೀವಾಜ್ಞೆಯೊಂದನ್ನು ಕೇಂದ್ರ ಸರಕಾರ ಹೊರಡಿಸಿದ ಬೆನ್ನಲ್ಲೇ ಪ್ರಧಾನಿಯವರ ಈ ಮಾತು ಬಂದಿದೆ.