spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, September 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆರೋಗ್ಯ ಪರಿಕರ ಖರೀದಿಯಲ್ಲಿ ಅವ್ಯವಹಾರ ನಡೆದಿರುವುದು ನಿಜ, ನಾಳೆ ದಾಖಲೆ ಬಿಡುಗಡೆ :ಎ.ಎಸ್. ಪೊನ್ನಣ್ಣ

- Advertisement -Nitte

ಮಡಿಕೇರಿ: ಕೋವಿಡ್ ಸಂಬಂಧದ ಆರೋಗ್ಯ ಪರಿಕರಗಳ ಖರೀದಿಯಲ್ಲಿ ಎರಡು ಸಾವಿರ ಕೋಟಿ ರೂ.ಗಳ ಅವ್ಯವಹಾರ ನಡೆದಿರುವುದು ನಿಜ. ಈ ಕುರಿತ ಅಗತ್ಯ ದಾಖಲೆ ತಮ್ಮ ಬಳಿ ಇದ್ದು, ಆ.1ರಂದು ಮಡಿಕೇರಿಯಲ್ಲಿ ಮಾಜಿ ಸಚಿವ ರಮಾನಾಥ್ ರೈ ಹಾಗೂ ಚಾಮರಾಜನಗರದ ಮಾಜಿ ಸಂಸದ ಧ್ರುವಕುಮಾರ್ ಅವರುಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡಲಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಕಾನೂನು, ಮಾನವ ಹಕ್ಕು, ಆರ್.ಟಿ.ಐ. ಘಟಕದ ನೂತನ ಅಧ್ಯಕ್ಷ ಹಾಗೂ ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅಜ್ಜಿಕುಟ್ಟಿರ.ಎಸ್.ಪೊನ್ನಣ್ಣ ತಿಳಿಸಿದರು.
ಕೆಪಿಸಿಸಿ ಕಾನೂನು, ಮಾನವ ಹಕ್ಕು, ಆರ್.ಟಿ.ಐ. ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಆಗಮಿಸಿದ ಅವರನ್ನು ಶುಕ್ರವಾರ ಆನೆಚೌಕೂರು ಗೇಟ್ ಬಳಿ ಅಭಿಮಾನಿಗಳು ಸ್ವಾಗತಿಸಿದ ಸಂದರ್ಭ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಸರ್ಕಾರ ಕೋವಿಡ್ 19ರ ಬಳಿಕ ಸುಮಾರು ರೂ.4 ಸಾವಿರ ಕೋಟಿ ಮೊತ್ತವನ್ನು ರಾಜ್ಯದ ಜನತೆಯ ಆರೋಗ್ಯದ ದೃಷ್ಟಿಯಿಂದ ವ್ಯಯಿಸಿರುವುದಾಗಿ ಹೇಳುತ್ತಿದೆ. ಆದರೆ ಪಿಪಿಇ ಕಿಟ್, ವೆಂಟಿಲೇಟರ್, ಸ್ಯಾನಿಟೈಸರ್, ಟೆಸ್ಟಿಂಗ್ ಕಿಟ್ ಇತ್ಯಾದಿಗಳ ಮುಖ ಬೆಲೆಗೂ ಸರ್ಕಾರ ಪಾವತಿ ಮಾಡಿರುವ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈ ಬಗ್ಗೆ ಅಗತ್ಯ ದಾಖಲೆ ತಮ್ಮಲ್ಲಿದೆ. ಈ ಅವ್ಯವಹಾರದ ಕುರಿತು ಮಡಿಕೇರಿಯಲ್ಲಿ ಮಾಧ್ಯಮಗಳಿಗೆ ನಾಳೆ (ಆ.1) ದಾಖಲೆ ಬಿಡುಗಡೆ ಮಾಡಲಾಗುವದು ಎಂದರು.
ಈಗಾಗಲೇ ರಾಜ್ಯ ಸರ್ಕಾರ ನಡೆಸಿರುವ ಸಿ.ಇ.ಟಿ.ಪರೀಕ್ಷೆಯನ್ನು ಎನ್.ಎಸ್.ಯು.ಐ.ಘಟಕ ವಿರೋಧಿಸಿದ್ದು, ಸಿ.ಇ.ಟಿ.ಪರೀಕ್ಷೆ ಬರೆಯಲು ಗಡಿನಾಡ ಕನ್ನಡಿಗರು, ಹೊರನಾಡ ಕನ್ನಡಿಗರು ಬರಬೇಕಾಗಿತ್ತು. ರಾಜ್ಯದಲ್ಲಿ ಕೋವಿಡ್-19ರ ಹಿನ್ನೆಲೆಯಲ್ಲಿ ಹೊರನಾಡ ಕನ್ನಡಿಗರಿಗೆ, ಗಡಿನಾಡಿನ ಅಭ್ಯರ್ಥಿಗಳಿಗೆ ಅವಕಾಶ ತಪ್ಪಿಹೋಗಿದೆ. ಸಿ.ಇ.ಟಿ.ವರ್ಷಕ್ಕೊಮ್ಮೆ ನಡೆಸುವ ಪರೀಕ್ಷೆಯಾಗಿದ್ದು, ಇತರೆ ಪರೀಕ್ಷೆಗಳಂತೆ ಮರು ಪರೀಕ್ಷೆಗೆ ಅವಕಾಶವಿಲ್ಲ. ಹಲವಷ್ಟು ವಿದ್ಯಾರ್ಥಿಗಳು ಕೊರೋನಾ ಭಯದಿಂದ ಬೆಂಗಳೂರಿಗೆ ಬಂದಿಲ್ಲ. ಇದರಿಂದಾಗಿ ಪರೀಕ್ಷೆ ಮುಂದೂಡಲು ತಾನು ಒತ್ತಾಯಿಸಿದ್ದೆ ಎಂದು ಹೇಳಿದರು.
ಕೆಪಿಸಿಸಿ ಮೂಲಕ ತಮಗೆ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಕಾಂಗ್ರೆಸ್ ಘಟಕದ ಮಾನವ ಹಕ್ಕು ಆಯೋಗ ಹಾಗೂ ಆರ್.ಟಿ.ಐ.ಗೆ ರಾಜ್ಯಾಂದ್ಯಂತ ಪ್ರವಾಸ ಮಾಡುವ ಮೂಲಕ ಘಟಕದ ಸದಸ್ಯರ ಅಭಿಯಾನ ಆರಂಭಿಸಬೇಕಾಗಿದೆ. ಪಕ್ಷದಲ್ಲಿ ಕಾನೂನು ವ್ಯಾಪ್ತಿಯಲ್ಲಿಯೂ ಜವಾಬ್ದಾರಿಯುತ ಕೆಲಸ ನಿಭಾಯಿಸಬೇಕಾಗಿದೆ ಎಂದರು.
ಕೊಡಗು ಕಾಂಗ್ರೆಸ್ ಬಲಿಷ್ಠವಾಗಿದೆ: ಕಳೆದ 20 ವರ್ಷದಿಂದ ಕೊಡಗು ಜಿಲ್ಲೆಯ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಅಭ್ಯರ್ಥಿಗಳು ಅಥವಾ ಮುಖಂಡರನ್ನು ಬೊಟ್ಟು ಮಾಡುವುದು ಸರಿಯಲ್ಲ. ಕೊಡಗಿನಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಸೋಲು ಗೆಲವಿನ ಅಂತರವೂ ಕಡಿಮೆ ಇದೆ. ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಚ್ಚಾಟವೂ ಸೋಲಿಗೆ ಕಾರಣ ಎಂದು ಹೇಳಲಾಗದು. ಬೂತ್ ಮಟ್ಟದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ಕೆಲಸವಾಗಬೇಕಾಗಿದೆ ಎಂದು ಅವರು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ವಿತರಿಸಲು ಸುಮಾರು ರೂ.15 ಲಕ್ಷ ವೆಚ್ಚದ ಆಹಾರ ಕಿಟ್ ಸಿದ್ಧವಿದ್ದು, ಕೊಡಗಿನ ಕಾಂಗ್ರೆಸ್ ಪ್ರಮುಖರು ದಿನ ನಿಗದಿಪಡಿಸಿದ್ದಲ್ಲಿ ವಿತರಣೆಯನ್ನು ಶೀಘ್ರ ಹಮ್ಮಿಕೊಳ್ಳಲಾಗುವದು ಎಂದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಕಾನೂನು, ಮಾನವ ಹಕ್ಕು, ಆರ್.ಟಿ.ಐ. ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಆಗಮಿಸಿದ ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್, ಹಿರಿಯ ವಕೀಲ ಅಜ್ಜಿಕುಟ್ಟೀರ.ಎಸ್.ಪೊನ್ನಣ್ಣ ಅವರನ್ನು ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ದಕ್ಷಿಣ ಕೊಡಗಿನ ಗಡಿಭಾಗ ಆನೆಚೌಕೂರು ಗೇಟ್ ಮುಂಭಾಗ ಸ್ವಾಗತಿಸಲಾಯಿತು.
ಬಿ.ಶೆಟ್ಟಿಗೇರಿಯ ಕಾಂಗ್ರೆಸ್ ಪ್ರಮುಖ ಕೊಲ್ಲೀರ ಬೋಪಣ್ಣ, ಡಿಸಿಸಿ ಸದಸ್ಯ ಹಾಗೂ ಎ.ಪಿ.ಎಂ.ಸಿ. ಮಾಜಿ ನಾಮ ನಿರ್ದೇಶಿತ ಸದಸ್ಯೆ ಕಡೇಮಾಡ ಕುಸುಮಾ ಜೋಯಪ್ಪ, ಹುದಿಕೇರಿ ಕಾಂಗ್ರೆಸ್ ವಲಯಾಧ್ಯಕ್ಷ, ಎಪಿ.ಎಂ.ಸಿ .ಮಾಜಿ ಸದಸ್ಯ ಎ.ಎಸ್. ನರೇನ್ ಕಾರ್ಯಪ್ಪ, ಪೊನ್ನಪೇಟೆ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಚೇರಂಡ ಮೋಹನ್, ಬಿ.ಶೆಟ್ಟಿಗೇರಿ ಕಾಂಗ್ರೆಸ್ ವಲಯಾಧ್ಯಕ್ಷ ತೀತಿಮಾಡ ಸದನ್, ಬಿ.ಶೆಟ್ಟಿಗೇರಿ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಲಯಾಧ್ಯಕ್ಷ ಚಂದೂರ ರೋಹಿತ್, ಹುದಿಕೇರಿ ಕಾಂಗ್ರೆಸ್ ವಲಯ ಪ್ರಧಾನ ಕಾರ್ಯದರ್ಶಿ ಕೇಚಮಾಡ ಶಿವ ನಾಚಪ್ಪ ಮುಂತಾದವರು ಪೊನ್ನಣ್ಣಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss