Monday, August 8, 2022

Latest Posts

ಆರೋಗ್ಯ ಸಮಸ್ಯೆಗಳಲ್ಲಿ ಒಂದಾದ ಶೀತ, ಕೆಮ್ಮು, ಅಲರ್ಜಿ ನಿಯಂತ್ರಣಕ್ಕೆ ಯೋಗ- ಮುದ್ರೆಗಳು

ದೇಶದೆಲ್ಲೆಡೆ ಕೊರೋನಾ ವೈರಾಣು ಹೆಮ್ಮಾರಿ ಜನಜೀವನವನ್ನು ಉಧ್ವಸ್ತಗೊಳಿಸಿದೆ. ಜನರು ಆತಂಕಿತರಾಗಿದ್ದಾರೆ. ಒಂದೆಡೆ ಭಯ, ಇನ್ನೊಂದೆಡೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಾರ್ಗೋಪಾಯದ ಶೋಧದ ನಡುವೆ ಜನರ ಜಂಜಾಟ ನಡೆದಿದೆ. ಈಗ ಜನತೆ ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ಮಾನಸಿಕ ಆರೋಗ್ಯವನ್ನೂ ಕಾಯ್ದುಕೊಳ್ಳಬೇಕಾಗಿದೆ. ಇದಕ್ಕೆ ಯೋಗವೇ ತಾರಕ ಎಂಬುದು ಸಿದ್ಧವಾಗಿರುವ ಅಂಶ.
ಯೋಗ ಮತ್ತು ಮುದ್ರೆಗಳಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಾಗುತ್ತದೆ. ಮೂಗಿನ ವಾಯು ಸಂಚಾರದ ಮಾರ್ಗ ಬಲಗೊಂಡು ಶ್ವಾಸನಾಳಗಳು ಆರೋಗ್ಯಕರವಾಗುತ್ತದೆ.
ಆರೋಗ್ಯ ಸಮಸ್ಯೆಗಳಲ್ಲಿ ಒಂದಾದ ಶೀತ, ಕೆಮ್ಮು, ಅಲರ್ಜಿಯು ಬಹಳ ತೊಂದರೆಯನ್ನುಂಟು ಮಾಡುತ್ತದೆ. ಸ್ಥಿರವಾದ ಸೀನುವಿಕೆ ಮತ್ತು ಗಂಟಲುಗಳ ಕಿರಿಕಿರಿಯಿಂದ ನಿತ್ಯ ಕೆಲಸಗಳಲ್ಲಿ ಅಡತಡೆಯುಂಟಾಗುತ್ತದೆ.
ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ನಮ್ಮ ಸುತ್ತಮುತ್ತಲಿನ ಜನರು ಸೀನುವಾಗ ಮತ್ತು ಕೆಮ್ಮುತ್ತಿರುವಾಗ ರೋಗಾಣುಗಳು ದೇಹಕ್ಕೆ ಪ್ರವೇಶಿಸಿ ಕಾಯಿಲೆಯನ್ನುಂಟು ಮಾಡುತ್ತದೆ. ಈ ವೈರಸ್ ವಾಯುಗಾಮಿ ಆಗಿರುವುದರಿಂದ ಬೇಗನೆ (ಹತ್ತಿರ ಸಂಪರ್ಕದಲ್ಲಿರುವವರಿಗೆ) ಹರಡುತ್ತದೆ. ವೈರಸ್ ಮೂಗು ಮತ್ತು ಗಂಟಲಿನ ಮೂಲಕ ಹಾದು ಹೋಗುತ್ತದೆ. ವೈರಸ್‌ನ್ನು ಮೇಲೆ ದಾಳಿಮಾಡಲು ಬಿಳಿ ರಕ್ತ ಕಣಗಳನ್ನು ಕಳುಹಿಸುತ್ತದೆ. ಬಿಳಿ ರಕ್ತಕಣಗಳು ಗಂಟಲು ಕಡೆಗೆ ಸೆಳೆಯಲು ಯೋಗ ಸಹಕಾರಿಯಾಗುತ್ತದೆ. ಯೋಗವು ನಮ್ಮ ದೇಹವನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಪಡಿಸುವ ಸಮಗ್ರ ಅಭ್ಯಾಸವಾಗಿದೆ. ಪರಿಣಾಮವಾಗಿ ದೇಹದ ರಕ್ಷಣಾ ಕಾರ್ಯ ವಿಧಾನವು ಅಂತಹ ಸ್ಥಿತಿಯಲ್ಲಿ ಸುಧಾರಿಸುತ್ತದೆ. ಆರೋಗ್ಯಕರ ಜೀವನಶೈಲಿ, ಆರೋಗ್ಯಕರ ಆಹಾರ ಆಯ್ಕೆಗಳು ಮತ್ತು ಯೋಗ ಮತ್ತು ಧ್ಯಾನದ ನಿಯಮಿತ ಅಭ್ಯಾಸವನ್ನು ಅಳವಡಿಸಿಕೊಂಡಾಗ ಆರೋಗ್ಯಕರ ಜೀವನವನ್ನು ಸುಲಭವಾಗಿ ಸಾಸಬಹುದು. ಯೋಗದ ನಿಯಮಿತ ಅಭ್ಯಾಸವು ದೇಹದ ಶಕ್ತಿ ವ್ಯವಸ್ಥೆ ಅಥವಾ ನಾಡಿಗಳನ್ನು ಸಮತೋಲನಗೊಳಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಪ್ರಾಣಾಯಾಮವು (ಉಸಿರಾಟದ ವ್ಯಾಯಾಮಗಳು) ಶ್ವಾಸಕೋಶಕ್ಕೆ ಹೆಚ್ಚಿನ ಆಮ್ಲಜನಕವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಕೆಮ್ಮು ಮತ್ತು ಶೀತವನ್ನು ತಡೆಯುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹಾಗೂ ಕೋವಿಡ್-19ರ ವಿರುದ್ಧ ಹೋರಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಆಯುಷ್ ಸಚಿವಾಲಯ ಕೆಲವೊಂದು ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಲಹೆ ನೀಡಿದೆ.
ರೋಗ ನಿರೋಧಕ ಶಕ್ತಿ ರ್ವಸುವ ಆಯುರ್ವೇದ ಸಲಹೆಗಳು
1. ನಿಯಮಿತವಾಗಿ ಬಿಸಿ ನೀರು ಕುಡಿಯುವುದು.
2. ಪ್ರತಿದಿನ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನ ಅಭ್ಯಾಸವನ್ನು ಕನಿಷ್ಠ 30 ನಿಮಿಷಗಳ ಕಾಲ ನಡೆಸುವುದು.
3. ಅಡುಗೆಯಲ್ಲಿ ಅರಿಶಿನ, ಜೀರಿಗೆ, ಧನಿಯಾ ಹಾಗೂ ಬೆಳ್ಳುಳ್ಳಿಯನ್ನು ಬಳಸುವುದು.
4. ಆಯುರ್ವೇದ ಪದ್ಧತಿಯಲ್ಲಿ ಹೇಳಲಾದ ದಿನಚರ್ಯ ಹಾಗೂ ಋತುಚರ್ಯೆಯನ್ನು ಪಾಲಿಸುವುದರಿಂದ ಉತ್ತಮ ಆರೋಗ್ಯ ಗಳಿಸಬಹುದು.
ಯೋಗ ಎಂದರೆ ಏನು?
ಯೋಗವು ಮೂಲತಃ ಆಧ್ಯಾತ್ಮದ ಆಧಾರದಿಂದಿರುವ/ತಳಹದಿ ಹೊಂದಿರುವ ಒಂದು ಸೂಕ್ಷ್ಮವಾದ ವಿಜ್ಞಾನದ ಶಾಖೆಯಾಗಿದ್ದು ದೇಹ ಮತ್ತು ಮನಸ್ಸುಗಳ ಜೊತೆ ಹೊಂದಾಣಿಕೆಯನ್ನು ತರಲು ಬೆಳಕು ಹರಡುವಂತದ್ದು ಇದು ಆರೋಗ್ಯವಾಗಿ ಬಾಳಲು ಒಂದು ವಿಜ್ಞಾನ ಮತ್ತು ಕಲೆ. ವ್ಯಾಪಕವಾಗಿ ತೊಡಗಿಸಿಕೊಂಡಿರುವ ಯೋಗಸಾಧನಗಳು ಇಂತಿವೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪತ್ಯಾಹಾರ, ಧಾರಣ ಸಮಾ, ಬಂಧಗಳು, ಹಾಗೂ ಮುದ್ರೆಗಳು, ಷಟ್ಕರ್ಮಗಳು, ಯುಕ್ತಾಹಾರ, ಮಂತ್ರಜಪ, ಯುಕ್ತ ಕರ್ಮ ಇತ್ಯಾದಿ. ಯೋಗ ಎನ್ನುವ ಪದ ಸಂಸ್ಕೃತ ಮೂಲಧಾತುವಾದ “ಯುಜ್” ಎನ್ನುವುದರಿಂದ ಬಂದಿದ್ದು “ಕೂಡಿಸು ಚಿತ್ತವನ್ನು ನಿರ್ದೇಶಿಸಿ ಕೇಂದ್ರೀಕರಿಸು” ಎನ್ನುವ ಆಜ್ಞೆಗಳನ್ನು ಕೊಡುತ್ತದೆ. ಯುಜ್ಯತೇ ಸಮಾಯತೇ?ನೇನ ಇತಿ ಯೋಗಃ ಇದು ಯೋಗ ಶಬ್ದದ ಉತ್ಪತ್ತಿಯಾಗಿದೆ. ಇಲ್ಲಿ ಜೀವಾತ್ಮವನ್ನು ಯಾವುದು ಆತ್ಮ ಸಾಕ್ಷಾತ್ಕಾರದೆಡೆಗೆ (ಪರಮಾತ್ಮನೆಡೆಗೆ) ಒಯ್ಯುವುದೋ ಅದು ಯೋಗ. ಜ್ಙಾನ ಯೋಗ, ಭಕ್ತಿಯೋಗ, ಕರ್ಮಯೋಗ ಮತ್ತು ರಾಜಯೋಗಗಳೆಂದು ನಾಲ್ಕು ವಿಧದ ಯೋಗಗಳಿವೆ. ಯೋಗ: ಚಿತ್ತ ವೃತ್ತಿ ನಿರೋಧಃ -(ಪತಂಜಲಿ ಋಷಿಗಳ 196 ಸೂತ್ರಗಳ – 2ನೇ ಅಧ್ಯಾಯದಲ್ಲಿ) ಚಿತ್ತದ ವೃತ್ತಿಗಳನ್ನು (ಬಯಕೆಗಳನ್ನು) ಸಂಪೂರ್ಣ ತಡೆ ಹಿಡಿದು ಸರ್ವಥಾ ವಿರೋಸಿ, ನಿಲ್ಲಿಸಿ, ಏಕಾಗ್ರತೆ ಸಾಸುವುದೇ ಯೋಗ.

  • ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ

ಗೋಪಾಲಕೃಷ್ಣ ದೇಲಂಪಾಡಿ ಬಗ್ಗೆ…
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಯೋಗಪ್ರಚಾರನಿರತರಾಗಿರುವ ಒಬ್ಬ ಯೋಗ ಸಾಧಕರಾಗಿದ್ದಾರೆ. ಕಾಸರಗೋಡು ಜಿಲ್ಲೆಯ ದೇಲಂಪಾಡಿ ಎಂಬಲ್ಲಿನ ಪಟೇಲ್ ಕೃಷ್ಣಯ್ಯ ಕಾಟೂರಾಯ ಮತ್ತು ಶ್ರೀಮತಿ ಪಾರಿಜಾತ ದಂಪತಿ ಸುಪುತ್ರರಾಗಿರುವ ಇವರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹಿರಿಯ ಆರೋಗ್ಯ ಪರೀಕ್ಷಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಖ್ಯಾತ ಯೋಗ ಸಾಧಕ ಸುಳ್ಯದ ಶ್ರೀ ಪುಟ್ಟಪ್ಪ ಜೋಷಿ ಅವರಿಂದ ಯೋಗ ಕಲಿತ ಇವರು ಅನಂತರ ವಿಟ್ಲದ ಚಿದಾನಂದ ಹಾಗೂ ಮಲ್ಲಾಡಿಹಳ್ಳಿಯ ಖ್ಯಾತ ಯೋಗಾಚಾರ್ಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಯೋಗ ಸಾಧಕರಾದವರು.


1983 ರಿಂದ ಉಚಿತ ಯೋಗ ತರಗತಿಗಳನ್ನು ಆರಂಭಿಸಿದ ಅವರಿಂದ ಯೋಗ ಕಲಿತವರ ಸಂಖ್ಯೆ ಎರಡೂವರೆ ಲಕ್ಷಕ್ಕೂ ಅಧಿಕ. 1500 ಕ್ಕೂ ಹೆಚ್ಚು ಯೋಗ ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ.ಅವರ ಶಿಷ್ಯರು ಇಂದು ದೇಶ-ವಿದೇಶಗಳಲ್ಲಿದ್ದು , ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗಳ ರೆಫ್ರೀಯಾಗಿಯೂ ಮನ್ನಣೆ ಪಡೆದಿದ್ದಾರೆ.ಯೋಗ ಬಗ್ಗೆ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಅನೇಕ ಜಿಲ್ಲಾ-ರಾಜ್ಯ-ರಾಷ್ಟ್ರಮಟ್ಟದ ಗೌರವ, ಪ್ರಶಸ್ತಿ ಭಾಜನರು. ಅವರು ‘ಹೊಸದಿಗಂತ’ ಆನ್‌ಲೈನ್‌ನಲ್ಲಿ ಯೋಗದ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಲಿದ್ದಾರೆ. ಅವರ ದೂರವಾಣಿ: 9448394987

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss