ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಕೋವಿಡ್-19, ಅತೀವೃಷ್ಟಿಯಿಂದಾಗಿ ಉಂಟಾಗಿರುವ ಆರ್ಥಿಕ ಸಂಕಷ್ಟದ ಅನಿವಾರ್ಯ ಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಸ್ವಲ್ಪಮಟ್ಟಿನ ವಿದ್ಯುತ್ ದರವನ್ನು ಹೆಚ್ಚಿಸಿದ್ದಾರೆ. ಜನರು ಸಹಕರಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಕಳೆದ 8 ತಿಂಗಳಿನಿಂದ ರಾಜ್ಯದ 6 ಕೋಟಿ ಜನರಿಗೆ ವಿವಿಧ ರೀತಿಯಲ್ಲಿ ಕೋವಿಡ್ ನಿರ್ವಹಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಒಂದೇ ವರ್ಷದಲ್ಲಿ ಎರಡು ಬಾರಿ ಅತೀವೃಷ್ಟಿ ಸಂಭವಿಸಿ ಸಾವಿರಾರು ಕೋಟಿ ರೂ. ನಷ್ಟ ಸಂಭವಿಸಿದೆ. ಇದರ ನಡುವೆಯೂ ಸರ್ಕಾರದ ಎಲ್ಲ ಸಿಬ್ಬಂದಿಗಳಿಗೆ ಪರಿಪೂರ್ಣವಾಗಿ ವೇತನ ಪಾವತಿಸುವ ಜೊತೆಗೆ ಅಭಿವೃದ್ಧಿ ಕೆಲಸಗಳನ್ನೂ ಮಾಡಿಕೊಂಡು ಬಂದಿದೆ ಎಂದರು.
ಸರ್ಕಾರ ಎಂದರೆ ಅಕ್ಷಯ ಪಾತ್ರೆಯಲ್ಲ. ಅದಕ್ಕೆ ಆರ್ಥಿಕ ಇತಿಮಿತಿಗಳಿರುತ್ತವೆ. ಈಗ ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳು ಕಡಿಮೆಯಾಗಿ ಎಲ್ಲ ರೀತಿಯ ಹಣ ಕ್ರೂಢೀಕರಣಕ್ಕೆ ಕಷ್ಟವಾಗಿದೆ. ಯಾವ ಸರ್ಕಾರವೂ ಸಂತೋಷದಿಂದ ಬೆಲೆ ಹೆಚ್ಚಳ ಮಾಡುವುದಿಲ್ಲ. ಮುಖ್ಯಮಂತ್ರಿಗಳು ಎಲ್ಲವನ್ನೂ ಚಿಂತಿಸಿ ಈ ನಿರ್ದಾರ ಕೈಗೊಂಡಿದ್ದಾರೆ ಎಂದರು.
ಕಳೆದ ಎಂಟು ತಿಂಗಳಿನಿಂದಲೂ ಕೆಎಸ್ಆರ್ಟಿಸಿಗೆ ನೂರಾರು ಕೋಟಿ ರೂ. ನಷ್ಟ ಸಂಭವಿಸುತ್ತಿದೆ. ಹಾಗೆಂದ ಮಾತ್ರಕ್ಕೆ ಬಸ್ ಸಂಚಾರವನ್ನು ನಿಲ್ಲಿಸಿಲ್ಲ. ಕಠಿಣ ಪರಿಸ್ಥಿಯಲ್ಲೂ ಬಸ್ಗಳನ್ನು ಒಡಿಸುತ್ತಿದೆ ಎಂದರು.
ಜನರ ಜೀವನ ಮತ್ತು ಆರೋಗ್ಯವೇ ಸರ್ಕಾರಕ್ಕೆ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಪಟಾಕಿ ನಿಷೇಧ ಮಾಡಿದೆ. ಪಟಾಕಿ ತಯಾರಕರು ಮತ್ತು ವರ್ತಕರಿಗೆ ಈ ವಿಚಾರ ಮೊದಲೇ ಗೊತ್ತಿರಬೇಕಿತ್ತು. ಕೆಲವರ ಲಾಭಕ್ಕಾಗಿ ಕೊಟ್ಯಾಂತರ ಜನರ ಆರೋಗ್ಯವನ್ನು ನಿರ್ಲಕ್ಷಿಸಲು ಸ
ಆಧ್ಯವಿಲ್ಲ. ಸ್ಥಳೀಯವಾಗಿ ಕೆಲವಡೆ ಪಟಾಕಿ ಮಾರಾಟಕ್ಕೆ ಈಗಾಗಲೇ ಅನುಮತಿ ನೀಡಿರಬಹುದು ಆದರೆ ಪಟಾಕಿ ನಿಷೇಧ ನಿರ್ಧಾರ ರಾಜ್ಯ ಮಟ್ಟದಲ್ಲಿ ಆಗಿರುವ ತೀರ್ಮಾನ ಎಲ್ಲರೂ ಅದಕ್ಕೆ ಬದ್ಧರಿರಬೇಕು ಎಂದರು.
ಡಯಾಲಿಸಿಸ್ ಘಟಕಗಳ ವಿಚಾರದಲ್ಲಿ ಯಾರೂ ಆತಂಕಪಡುವುದು ಬೇಡ ಈ ಹಿಂದೆ ಪಿಪಿಪಿ ಮಾದರಿಯಲ್ಲಿ ಎರಡು ಕಂಪನಿಗಳಿಗೆ ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಯನ್ನು ವಹಿಸಿಕೊಡಲಾಗಿತ್ತು. ಈ ಪೈಕಿ ವಿ.ಆರ್.ಶೆಟ್ಟಿ ಎನ್ನುವ ಸಂಸ್ಥೆ ಆರ್ಥಿಕವಾಗಿ ನಷ್ಟ ಅನುಭವಿಸಿದೆ. ಕಳೆದ 15 ದಿನಗಳಿಂದ ಅದು ಇನ್ನಷ್ಟು ಹೆಚ್ಚಾಗಿದೆ. ಸಧ್ಯಕ್ಕೆ ಆಸ್ಪತ್ರೆಗಳ ಬಳಕೆದಾರರ ನಿಧಿಯಿಂದ ನಿರ್ವಹಿಸಲಾಗುತ್ತಿದೆ. ಇದಕ್ಕೆ ಸಧ್ಯದಲ್ಲೇ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಬಡ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಈ ವಿಚಾರದಲ್ಲಿ ಯಾರಿಗೂ ಆತಂಕ ಬೇಡ ಎಂದರು.