ಹೊಸ ದಿಗಂತ ವರದಿ, ಕಾಸರಗೋಡು:
ಕೇರಳದಲ್ಲಿ ಕೆಎಸ್ಆರ್ ಟಿಸಿ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಆರ್ಥಿಕ ಸಹಾಯ ಒದಗಿಸಬೇಕೆಂದು ರಾಜ್ಯದ ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಅವರು ಕೇಂದ್ರದ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ವಿನಂತಿಸಿದ್ದಾರೆ. ಅಲ್ಲದೆ ಕೇಂದ್ರ ಸರಕಾರವು ಜಾರಿಗೊಳಿಸಲು ಉದ್ದೇಶಿಸಿರುವ ಅಗ್ರಗೇಟರ್ ಲೈಸನ್ಸ್ ವ್ಯವಸ್ಥೆ ಹಾಗೂ ಡ್ರಾಫ್ಟ್ ಬಿಲ್ ಬಗ್ಗೆ ಕೇರಳದ ವಿರೋಧವನ್ನು ರಾಜ್ಯದ ಸಾರಿಗೆ ಸಚಿವರು ವ್ಯಕ್ತಪಡಿಸಿದ್ದಾರೆ. ಕೋವಿಡ್ ಲಾಕ್ ಡೌನ್ ಬಳಿಕ ಕೆಎಸ್ಆರ್ ಟಿಸಿ ಆದಾಯದಲ್ಲಿ ಶೇಕಡಾ 50ರಷ್ಟು ಕಡಿಮೆಯಾಗಿದೆ. 6.50 ಕೋಟಿ ರೂ. ಇದ್ದ ಆದಾಯವು ಇದೀಗ 3.25 ಕೋಟಿ ರೂ. ಆಗಿ ಇಳಿದಿದೆ. ಇದರಲ್ಲಿ ಶೇಕಡಾ 50ರಷ್ಟು ಮೊತ್ತ ಡೀಸೆಲ್ ಗೆ ಖರ್ಚಾಗುತ್ತಿದೆ. ಈ ಸಮಸ್ಯೆ ಪರಿಹರಿಸಲು ಮತ್ತು ಇಂಧನ ದಕ್ಷತೆ ಖಚಿತಪಡಿಸಲು ಸಿಎನ್ ಜಿ – ಎಲ್ಎನ್ ಜಿ ವ್ಯವಸ್ಥೆಗೆ ಬದಲಾಯಿಸಬೇಕು. ಹೊಸ ಬಸ್ ಗಳನ್ನು ಖರೀದಿಸುವುದರ ಬದಲು ರಾಜ್ಯದ 3000 ಆರ್ಡಿನರಿ ಬಸ್ ಗಳನ್ನು ಸಿಎನ್ ಜಿ – ಎಲ್ಎನ್ ಜಿ ಬಸ್ ಗಳಾಗಿ ಬದಲಾಯಿಸಲು ಯೋಜಿಸಲಾಗಿದೆ. ಆದರೆ ಇದರ ಖರ್ಚು ಭರಿಸಲು ಕೇರಳಕ್ಕೆ ಸಾಧ್ಯವಿಲ್ಲ. ಆದ್ದರಿಂದ ಕೇರಳ ಕೆಎಸ್ಆರ್ ಟಿಸಿ ವಿಭಾಗವನ್ನು ಸಮಗ್ರ ಅಭಿವೃದ್ಧಿಗೊಳಿಸಲು 500 ಕೋಟಿ ರೂಪಾಯಿಗಳ ತುರ್ತು ಧನಸಹಾಯ ಬಿಡುಗಡೆ ಮಾಡಬೇಕೆಂದು ರಾಜ್ಯ ಸರಕಾರವು ಕೇಂದ್ರ ಸರಕಾರವನ್ನು ಮನವಿ ಮೂಲಕ ಆಗ್ರಹಿಸಿದೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಕೇಂದ್ರ ಸಾರಿಗೆ ಸಚಿವರು ಭರವಸೆ ನೀಡಿದ್ದಾರೆ.