ಬೆಂಗಳೂರು: ಬದುಕಿನಲ್ಲಿ ಕಷ್ಟ ಸುಖ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಇರಬೇಕು. ಕಷ್ಟ ಬಂದಾಗ ತಾನು ವಾಸಿಸುವ ಪ್ರದೇಶ, ಪರಿಸರ, ಕೆಲಸ ಮಾಡುವ ಜಾಗ ಎಲ್ಲೆಂದರಲ್ಲಿ ಪಾಸಿಟಿವ್ ಭಾವನೆ ಮೂಡಿಸುವ ಪರಿಕರಗಳನ್ನು ಜೋಡಿಸಿಕೊಳ್ಳಬೇಕು. ಹಾಗಿದ್ದರೆ ಕಷ್ಟದ ಸಂದರ್ಭದಲ್ಲಿ ಸಮರ್ಥವಾಗಿ ನಿಭಾಯಿಸಲು ಸಾಧ್ಯ ಎಂದು ಆಧ್ಯಾತ್ಮಿಕ ಗುರು, ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಮಂಗಳವಾರ ವೆಬಿನಾರ್ ಮೂಲಕ ವಿಶ್ವದ ನಾನಾ ಭಾಗದಲ್ಲಿದ್ದ ಅನುಯಾಯಿಗಳೊಂದಿಗಿನ ಸಂವಾದದಲ್ಲಿ ಮಾತನಾಡುತ್ತಿದ್ದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಸಂವಾದದಲ್ಲಿ ೧೦೦ಕ್ಕೂ ಅಧಿಕ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಕಷ್ಟ ಎಂಬುದು ಸುಖದೊಂದಿಗೆ ಹುಟ್ಟಿಕೊಂಡ ಪದ. ಕಷ್ಟ ಎನ್ನುವ ಭಾವನೆ ನಮ್ಮ ಮನಸ್ಸಿನ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಪರಿಸ್ಥಿತಿಯನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ ಕೃಷಿಕನಿಗೆ ಶ್ರಮಪಟ್ಟು ಕೃಷಿ ಮಾಡುವುದು ಕಷ್ಟ ಎಂದೆನಿಸುವುದಿಲ್ಲ. ಆತ ಕಠಿಣ ಶ್ರಮದಲ್ಲಿ ಸುಖವನ್ನು ಕಾಣುತ್ತಾನೆ. ಅದೇ ರೀತಿ ವೈದ್ಯರು ದಿನದ ೨೪ ಗಂಟೆಯೂ ರೋಗಿಯ ಸೇವೆ ಮಾಡುತ್ತಾರೆ. ಅವರಿಗೆ ಅದು ಅವರಿಗೆ ಕಷ್ಟ ಎಂದೆನಿಸುವುದಿಲ್ಲ. ಆದುದರಿಂದ ಕಷ್ಟ ಸುಖ ಎರಡೂ ವ್ಯಕ್ತಿಯ ಮನಸ್ಥಿತಿಗೆ ಅನುಗುಣವಾಗಿರುತ್ತದೆ. ಇದನ್ನು ಅರಿತುಕೊಂಡರೆ ಕೋವಿಡ್ ೧೯ರ ಸಂದರ್ಭದಲ್ಲಿ ನಮ್ಮ ಮುಂದಿರುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬಹುದಾಗಿದೆ ಎಂದರು.
೭೩ ವರ್ಷಗಳ ಹಿಂದೆ ಬೌತಿಕ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಒಂದಾಗಿ ಹೋರಾಟ ನಡೆಸಿದ್ದರು. ಆದರೆ ಇದೀಗ ಅಂತಹ ಮತ್ತೊಂದು ಸ್ವಾತಂತ್ರ್ಯ ಹೋರಾಟ ಮಾಡುವ ಸ್ಥಿತಿ ನಮ್ಮ ಮುಂದಿದೆ. ಅದು ಆರ್ಥಿಕ ಸ್ವಾತಂತ್ರ್ಯ. ಈ ಹೋರಾಟದಲ್ಲಿ ಕಾರ್ಮಿಕ ವರ್ಗದಿಂದ ಹಿಡಿದು, ಬಂಡವಾಳ ಶಾಹಿಗಳು, ಕೃಷಿಕರಿಂದ ಹಿಡಿದು ಕೈಗಾರಿಕೋದ್ಯಮಿಗಳು, ವಿದ್ಯಾರ್ಥಿಗಳಿಂದ ಹಿಡಿದು ಪೋಷಕರು ಕೈ ಜೋಡಿಸಿಕೊಳ್ಳಬೇಕು ಎಂದರು.
ವಿಶ್ವದ ನಾನಾ ಭಾಗದಿಂದ ಬಂದ ಬೇಡಿಕೆಯ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸೀಮಿತ ಆಹ್ವಾನಿತರೊಂದಿಗೆ ವಾರಕ್ಕೊಮ್ಮೆ ವೆಬಿನಾರ್ ಮಾಡಲಾಗುವುದು ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.