Monday, July 4, 2022

Latest Posts

ಆರ್‌ಎಸ್‌ಎಸ್ ದೂಷಿಸದಂತೆ ಎಚ್ಚರಿಕೆ: ಸಚಿವ ಸಿ.ಟಿ. ರವಿ

ಬೆಂಗಳೂರು: ಮಹಾತ್ಮ ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಾತ್ರವಿಲ್ಲ ಎಂದು ಅಂದೇ ಜೀವನ್‌ಲಾಲ್ ಕಪೂರ್ ಆಯೋಗ ಸ್ಪಷ್ಟಪಡಿಸಿದ್ದರೂ ಪದೇ ಪದೇ ಆರ್‌ಎಸ್‌ಎಸ್‌ಅನ್ನು ದೂಷಿಸುವುದು ಸರಿಯಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಎಚ್ಚರಿಸಿದರು.

ಸಂವಿಧಾನದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಗಾಂಧೀಜಿ ಹತ್ಯೆ ನಂತರ ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರಿದ್ದೂ ಅಲ್ಲದೆ, ಗುರೂಜಿ ಅವರನ್ನು ಬಂಧಿಸಲಾಗಿತ್ತು. ಅಂದು ಈ ಪ್ರಕರಣದಲ್ಲಿ ಆರ್‌ಎಸ್‌ಎಸ್ ಪಾತ್ರವಿಲ್ಲ ಎಂಬ ವರದಿಯನ್ನು ರಾಜನಾಥ್ ಸಿಂಗ್ ಅವರಾಗಲೀ, ಅಮಿತ್ ಶಾ ಅವರಾಗಲೀ ಕೊಟ್ಟಿದ್ದಲ್ಲ. ಜೀವನ್‌ಲಾಲ್ ಕಪೂರ್ ಆಯೋಗ ನೀಡಿದ ವರದಿ ಆಧಾರದ ಮೇಲೆ ನಿಷೇಧಾಜ್ಞೆ ಹಿಂಪಡೆಯಲಾಗಿತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡಲು ಜನರನ್ನು ಸಂಘಟಿಸಲು ಗಾಂಧಿ ಕಟ್ಟಿದ ಕಾಂಗ್ರೆಸ್ ಹೆಸರನ್ನು ಬಳಸಿಕೊಳ್ಳುತ್ತಿರುವರು ಇಂದಿಗೂ ಆರ್‌ಎಸ್‌ಎಸ್ ದೂಷಿಸುವುದು ನಿಲ್ಲಿಸಿಲ್ಲ ಇದು ತಪ್ಪು ಎಂದರು. ಸರ್ದಾರ್ ವಲ್ಲಭಬಾಯಿ ಪಟೇಲಿಗೆ 15 ಜನರ ಪೈಕಿ 12 ಜನರ ಮತವಿದ್ದರೂ ಗಾಂಧೀಜಿ ಅವರು ನೆಹರುರನ್ನು ಪ್ರಧಾನಿ ಪಟ್ಟದಲ್ಲಿ ಕೂರಿಸಿದರು. ಇದುವರೆಗೆ 104 ಬಾರಿ ತಿದ್ದುಪಡಿಯಾಗಿರುವ ನಮ್ಮ ಸಂವಿಧಾನಕ್ಕೆ ಅತಿ ಹೆಚ್ಚು ಅಂದರೆ, 75 ಬಾರಿ ತಿದ್ದುಪಡಿಗಳನ್ನು ಮಾಡಿರುವುದು ಕಾಂಗ್ರೆಸ್. ಆದರೂ ಸಂವಿಧಾನ ತಿದ್ದುಪಡಿ, ಬದಲಾವಣೆ ಬಗ್ಗೆ ಅಪಪ್ರಚಾರ ಮಾಡುವುದನ್ನು ನಿಲ್ಲಿಸಿಲ್ಲ.

ಕಲಾಂ ತತ್ತ್ವ ನಂಬ್ತೀವಿ, ಲಾಡನ್‌ ನ್ನದಲ್ಲ: ಅಂಬೇಡ್ಕರರ ಸಮಾಧಿಗೂ ಜಾಗ ಕೊಡದ ಸ್ಥಿತಿಯಿತ್ತು. ಇದು ಅಂಬೇಡ್ಕರ ರ ಸ್ಥಳಗಳನ್ನು ಪುನರುತ್ಥಾನ ಮಾಡುತ್ತಿರುವ ಪ್ರಧಾನಿ ಮೋದಿ. ಅಂಬೇಡ್ಕರರಿಗೆ ಭಾರತರತ್ನ ಕೊಡಲು ವಾಜಪೇಯಿ ಅವರು ಸಿಂಗ್ ಅವರಿಗೆ ಶಿಫಾರಸು ಮಾಡಿದ್ದನ್ನೂ ಸ್ಮರಿಸಬೇಕು. ಹಿಂದುವಾಗಿ ಹುಟ್ಟಿರುವ ತಾನು ಹಿಂದುವಾಗಿ ಸಾಯುವುದಿಲ್ಲ ಎಂದು ಅಂಬೇಡ್ಕರ್ ಹೇಳಿದಾಗ, ಅವರನ್ನು ಮತಾಂತರಗೊಳಿಸಲು ಹಲವು ಮುಸ್ಲಿಂ, ಕ್ರೈಸ್ತ ಸಂಘಟನೆಗಳು ಪ್ರಯತ್ನಿಸಿದ್ದವು. ಬೌದ್ಧ ಧರ್ಮ ಸ್ವೀಕರಿಸಿದರೂ ಅವರ ವಿಚಾರಧಾರೆ ಬದಲಾಗಿರಲಿಲ್ಲ. ನಮ್ಮದು ಅಬ್ದುಲ್ ಕಲಾಂ ತತ್ತ್ವ ನಂಬಿದ ಪಕ್ಷ, ಲಾಡನ್, ಸದ್ದಾಂ ಹುಸೇನ್‌ರ ತತ್ತ್ವ ನಂಬಿದ ಪಕ್ಷವಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss