ಹೊಸ ದಿಗಂತ ವರದಿ, ಹಾಸನ:
ನಗರದ ಹೊರವಲಯದ ಪ್ರಾದೇಶಿಕ ಸಾರಿಗೆ ಕಚೇರಿ ಕಾಂಪೌಂಡ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಚಲಾವಣೆಯಾಗದೆ ನಿಂತಿದ್ದ ಮೂರ್ನಾಲ್ಕು ವಾಹನಗಳು ಹೊತ್ತಿ ಉರಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಅಗ್ನಿ ಅವಘಡದಲ್ಲಿ 2 ವ್ಯಾನ್ ಮತ್ತು 1 ಟಾಟಾ ಏಸಿ ವಾಹನ ಬಹುತೇಕ ಅಗ್ನಿಗಾಹುತಿಯಾಗಿದೆ.
ಸೀಜ್ ಮಾಡಿದ್ದ ಹತ್ತಾರು ವಾಹನಗಳನ್ನು ಆರ್ಟಿಒ ಕಾಂಪೌಂಡ್ ಒಳಗೆ ನಿಲ್ಲಿಸಲಾಗಿತ್ತು. ಆದರೆ ಬುಧವಾರ ಮಧ್ಯಾಹ್ನ ಒಂದು ವಾಹನದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಕೆಲವೇ ಹೊತ್ತಿನಲ್ಲಿ ಸುತ್ತಮುತ್ತಲಿನ ವಾಹನಗಳಿಗೆ ವ್ಯಾಪಿಸಿದೆ. ಇದರಿಂದ ಮೂರ್ನಾಲ್ಕು ಹಳೆಯ ವಾಹನಗಳು ನೋಡ ನೋಡುತ್ತಿದ್ದಂತೆಯೇ ಹೊತ್ತಿ ಉರಿದವು. ಇದನ್ನು ಕಂಡು ಸಹಜವಾಗಿಯೇ ಆತಂಕಗೊಂಡ ಜನರು ದಿಕ್ಕಾಪಾಲಾಗಿ ಸ್ಥಳದಿಂದ ಓಡಿದರು. ಘಟನೆಯಲ್ಲಿ ಮೂರ್ನಾಲ್ಕು ವಾಹನಗಳು ಬಹುತೇಕ ದಹವಾಗಿವೆ.
ಬೆಂಕಿನ ಕೆನ್ನಾಲಿಗೆ ಹೆಚ್ಚಾಗುವ ಮುನ್ನವೇ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದರು. ಈ ಘಟನೆ ಹಿಂದೆ ಕಿಡಿಗೇಡಿಗಳ ಕೈವಾಡ ಅಥವಾ ಯಾರೋ ಧೂಮಪಾನ ಮಾಡಲು ಹೋಗಿ ಕಿಡಿ ಹೊತ್ತಿಸಿರಬಹುದು ಎಂದು ಶಂಕಿಸಲಾಗಿದೆ. ಆರ್ಟಿಒ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.