ಇಂಗ್ಲಿಷ್‌ನಲ್ಲಿ ‘ನಲಿ ಕಲಿ’ ವರ್ಸಸ್ ರಾಷ್ಟೀಯ ಶಿಕ್ಷಣ ನೀತಿ

0
259

-ಚಂದ್ರಶೇಖರ ದಾಮ್ಲೆ

ಒಂದು ಕ್ರಾಂತಿಕಾರಿ ಜ್ಞಾನ ಪರಿವರ್ತನೆಗೆ ಕರ್ನಾಟಕ ರಾಜ್ಯ ಸಿದ್ಧವಾದಂತಿದೆ. ಇನ್ನು ಮುಂದೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳೂ ಪ್ರಾಥಮಿಕ ಹಂತದಲ್ಲೇ ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಯಲಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಯಶಸ್ವಿಯಾದ ನಲಿಕಲಿ ಮಾದರಿಯಲ್ಲಿ 1ನೇಯಿಂದ 3ನೇ ತನಕ ಆಂಗ್ಲಭಾಷೆಯಲ್ಲಿ ಕಲಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. “ಸರ್ಕಾರಿ ಶಾಲಾ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ರಾಜ್ಯದ 50 ಸಾವಿರ ಶಾಲೆಗಳಲ್ಲಿ ಜಾರಿ” ಎಂಬ ವಾರ್ತೆ ಇದೇ ಮಾರ್ಚ್ 2ರಂದು ಪ್ರಕಟವಾಗಿದೆ. ಇದೇ ವಾರದಲ್ಲಿ ಕೇಂದ್ರ ಸರ್ಕಾರವು ಹೊಸ ಶಿಕ್ಷಣ ನೀತಿಯನ್ನು ಮಂಡಿಸಲಿದೆ. ಆ ನೀತಿಯಲ್ಲಿ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯೇ ಶಿಕ್ಷಣ ಮಾಧ್ಯಮವಾಗಿರಬೇಕು ಎಂತ ಇದೆ. ಅಂದರೆ ಕರ್ನಾಟಕದ ಶಿಕ್ಷಣ ಇಲಾಖೆಯು ರಾಷ್ಟ್ರೀಯ ಶಿಕ್ಷಣ ನೀತಿಯು ಜಾರಿಗೆ ಬರದಂತೆ ಈಗಲೇ ತಡೆ ನಿರ್ಮಿಸಿದಂತಾಗಿದೆ. ಏಕೆಂದರೆ ಕೇಂದ್ರ ಸರಕಾರದ ನೀತಿಯು ಬರುವಷ್ಟರಲ್ಲೇ ಕರ್ನಾಟಕದ ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮವೇ ಬೇಕು ಎಂತ ಹಟ ಹಿಡಿಯುವಂತಹ ವಾತಾವರಣವನ್ನು ನಮ್ಮ ಶಿಕ್ಷಣ ಇಲಾಖೆ ನಿರ್ಮಿಸುತ್ತಿದೆ. ಇದೇ ವಾರ್ತೆಯ ಮುಂದುವರಿದ ಭಾಗ ಹೀಗಿದೆ. ಈಗಾಗಲೇ ರಾಜ್ಯದಲ್ಲಿರುವ ಒಂದು ಸಾವಿರ ಶಾಲೆಗಳಲ್ಲಿ ಮಕ್ಕಳಿಗೆ ಸ್ಪೆಲ್ಲಿಂಗ್ ಹೇಳಿಕೊಡಲಾಗುತ್ತಿದೆ. ಅಲ್ಲದೆ ಮುಂದಿನ ಶೈಕ್ಷಣಿಕ ವರ್ಷದಿಂದ ನಲಿ-ಕಲಿ ಕಾರ್ಯಕ್ರಮದಲ್ಲಿ ಆಂಗ್ಲಭಾಷೆಯನ್ನು ಸೇರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ವಾರ್ತೆಯ ಒಂದೆಡೆಯಲ್ಲಿ ಶಿಕ್ಷಣ ಇಲಾಖೆ ತೀರ್ಮಾನಿಸುತ್ತದೆ ಎಂತ ಇದ್ದರೆ ಇನ್ನೊಂದೆಡೆಯಲ್ಲಿ ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂತ ಇದೆ. ಶಿಕ್ಷಣ ಇಲಾಖೆ ಎಂದರೆ ಅಧಿಕಾರಿಗಳು ಮಾತ್ರ ಎಂತ ತಿಳಿದುಕೊಳ್ಳಬಹುದು. ಆದರೆ ರಾಜ್ಯ ಸರಕಾರವೇ ತೀರ್ಮಾನಿಸಿದೆ ಎಂತಾದರೆ ಅದರಲ್ಲಿ ಮಂತ್ರಿಮಂಡಲವೂ, ಕೊನೆಪಕ್ಷ ನಮ್ಮ ಶಿಕ್ಷಣ ಮಂತ್ರಿಗಳಾದರೂ ಇರಬೇಕು.

ಈ ಪ್ರಶ್ನೆ ಯಾಕೆಂದರೆ ನಮ್ಮ ಶಿಕ್ಷಣ ಸಚಿವರು ಕಟ್ಟಾ ಕನ್ನಡ ಮಾಧ್ಯಮದ ಬೆಂಬಲಿಗರು. ಅವರಿದ್ದಾಗಲೇ ಇಂತಹ ಬೆಳವಣಿಗೆ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವುದು ಆಶ್ಚರ್ಯಕರ. ಇನ್ನೂ ಮುಂದುವರಿದು ನೋಡಿದರೆ ಈ ಪ್ರಯೋಗದ ಆರಂಭ 2015-16ನೇ ಸಾಲಿನಲ್ಲೇ ಆಗಿದೆ. ಯುನಿಸೆಫ್ ಸಂಸ್ಥೆಯ ಸಹಯೋಗದಿಂದ ‘ಸಮಗ್ರ ಶಿಕ್ಷಣ ಕರ್ನಾಟಕದ’ ಅಡಿಯಲ್ಲಿ ತುಮಕೂರು, ರಾಮನಗರ, ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಆಯ್ದ 75 ಶಾಲೆಗಳಲ್ಲಿ ಮೊದಲ ಬಾರಿಗೆ ಆಂಗ್ಲಭಾಷೆಯಲ್ಲಿ ನಲಿ-ಕಲಿ ಯೋಜನೆಯನ್ನು ಅನುಷ್ಟಾನ ಮಾಡಿತ್ತು. ಅಂದರೆ ಪ್ರಸ್ತುತ ಬಿ.ಜೆ.ಪಿ ಸರ್ಕಾರ ಅಧಿಕಾರವನ್ನು ವಹಿಸುವ ಮೊದಲೇ ಪ್ರಾರಂಭವಾದ ಪ್ರಯೋಗ ಇದು. ಅದು ಮುಂದುವರಿದು 2019-20ನೇ ಸಾಲಿನ 2000 ಶಾಲೆಗಳಲ್ಲಿ ಅನುಷ್ಟಾನಕ್ಕೆ ಬಂತು. ಈ ಪ್ರಯೋಗದ ಪ್ರಗತಿ ಪರಿಶೀಲನೆ ನಡೆದು ಯಶಸ್ಸು ದಾಖಲಾಗಿದೆ ಎನ್ನಲಾಗುತ್ತದೆ. ಅಧಿಕಾರಿಗಳು ಯಶಸ್ಸನ್ನು ದಾಖಲಿಸದಿದ್ದರೆ ಮುಂದಿನ ಅನುದಾನಗಳು ಬರುವುದಿಲ್ಲ. ಈ ಯೋಜನೆಗೆ ಕೇಂದ್ರ ಸರಕಾರದಿಂದ ಮಂಜೂರಾದ ಹಣ 27 ಕೋಟಿ ರೂಪಾಯಿ. ಶಿಕ್ಷಣ ಇಲಾಖೆಯು ರಾಜ್ಯ ಸರಕಾರದ ಆಡಳಿತಾತ್ಮಕ ಅನುಮೋದನೆ ಪಡೆದು ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ 43,000 ಕನ್ನಡ ಶಾಲೆಗಳು ಹಾಗೂ 5000 ಉರ್ದು ಮಾಧ್ಯಮ ಶಾಲೆಗಳಲ್ಲಿ ಅನುಷ್ಟಾನಕ್ಕೆ ಸಿದ್ಧವಾಗಿದೆ. ಅಲ್ಲಿಗೆ ಇವಿಷ್ಟು ಶಾಲೆಗಳಲ್ಲಿಯೂ ಅವುಗಳ ಸಮೀಪದ ಇತರ ಶಾಲೆಗಳ ಮೇಲೂ ಇಂಗ್ಲಿಷ್ ಮಾಧ್ಯಮದ ಪ್ರಭುತ್ವ ಬರುತ್ತದೆ. ಅಂದರೆ ಕನ್ನಡ ಮತ್ತು ಉರ್ದು ಈ ಎರಡೂ ಮಾಧ್ಯಮಗಳು ಸುಮಾರು 50,000 ಶಾಲೆಗಳಲ್ಲಿ ಮರೆಯಾಗಿ ಹೋಗಲಿವೆ.

ಪ್ರಸ್ತುತ ಮಕ್ಕಳಿಗೆ ಆಂಗ್ಲಭಾಷೆ ಕಲಿಸಲು ಶಿಕ್ಷಣ ಇಲಾಖೆಯು ಈಗಾಗಲೇ 2700 ಶಿಕ್ಷಕರಿಗೆ ತರಬೇತಿ ನೀಡಿದೆ. ಈ ಶಿಕ್ಷಕರು ತಮ್ಮ ಕೌಶಲ್ಯವನ್ನು ಶಾಲೆಗಳ ಇತರ ಶಿಕ್ಷಕರಿಗೆ ವರ್ಗಾಯಿಸಲಿದ್ದಾರೆ. ಇಂತಹ ತರಬೇತಿಯು ಮುಂದಿನ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ಪೂರ್ಣವಾಗಲಿದೆ. ಈ ವಿಧಾನದಲ್ಲಿ ಮಕ್ಕಳ ವಯಸ್ಸಿನ ಆಧಾರದ ಮೇಲೆ ಸುಲಭ ಕಲಿಕೆಯ ಪಠ್ಯಕ್ರಮವನ್ನು ಯುನಿಸೆಫ್ ರೂಪಿಸಿದೆ. ಮುಖ್ಯವಾಗಿ ಹಾಡುಗಳು, ಕಿರುಗತೆಗಳು ಮತ್ತು ಗೊಂಬೆಗಳು ಕಲಿಕಾ ಸಾಮಗ್ರಿಗಳಾಗಿ ಬಳಕೆಯಾಗಲಿವೆ. ಸಹಜವಾಗಿಯೇ ಇಂಗ್ಲಿಷ್ ನಲಿ-ಕಲಿ ವ್ಯವಸ್ಥೆಯು ಸದ್ಯದ ಕನ್ನಡ ನಲಿ-ಕಲಿ ವ್ಯವಸ್ಥೆಗಿಂತಲೂ ಉತ್ತಮವಾಗಿದೆ ಎಂಬ ಪ್ರಸಿದ್ಧಿ ಪಡೆಯುವುದರಲ್ಲಿ ಅಚ್ಚರಿ ಇಲ್ಲ. ಕಾಲಾನುಕ್ರಮದಲ್ಲಿ ಕನ್ನಡ ಮಾಧ್ಯಮವೇ ನಾಪತ್ತೆಯಾಗಿ ಶಿಕ್ಷಣದ ಇತಿಹಾಸದಲ್ಲಿ ಸೇರ್ಪಡೆಯಾಗುವುದಕ್ಕೆ ಹೊಣೆ ವಹಿಸುವವರು ಯಾರೂ ಇರುವುದಿಲ್ಲ. ಈಗ ಸಮಸ್ಯೆ ಏನೆಂದರೆ ರಾಷ್ಟ್ರೀಯ ಶಿಕ್ಷಣ ನೀತಿಯು ರೂಪುಗೊಳ್ಳುತ್ತಿದ್ದ ವಿಚಾರ ಶಿಕ್ಷಣ ಇಲಾಖೆಗೇನೂ ಗೊತ್ತಿಲ್ಲದ್ದಲ್ಲ. ಹಾಗಿದ್ದರೂ ಅದು ಇಂಗ್ಲಿಷ್‌ನಲ್ಲಿ ನಲಿ-ಕಲಿ ಯೋಜನೆಯನ್ನು 2020-21ರಲ್ಲಿ ಜಾರಿಗೊಳಿಸುವುದರಲ್ಲಿ ಆಸಕ್ತಿ ತೋರುತ್ತಿರುವುದರ ಹಿಂದಿನ ಗುಟ್ಟೇನು?

ಕರ್ನಾಟಕ ಪಬ್ಲಿಕ್ ಸ್ಕೂಲ್‌ ಗಳ ಕತೆಯೂ ಇದೇ ಆಯಿತು. ಸಮ್ಮಿಶ್ರ ಸರಕಾರವು ಆಲೋಚನೆ ಮಾಡಿದ ಮರುಕ್ಷಣವೇ ಎಂಬಂತೆ ಅದಕ್ಕೆ ಬೇಕಾದ ನಿಯಮಾವಳಿಗಳನ್ನು ಗುರುತಿಸಿ ರಾಜ್ಯ ಸರಕಾರ ಕಳೆದ ವರ್ಷ ಎಂದು ಸಾವಿರ ಶಾಲೆಗಳಲ್ಲಿ ಪೂರ್ಣವಾಗಿ ಆಂಗ್ಲ ಮಾಧ್ಯಮ ಆರಂಭಿಸಿತು. ವಾಸ್ತವಿಕವಾಗಿ ಅವು ಅಗತ್ಯದ ಆವಶ್ಯಕತೆಗಳನ್ನು ಪಡೆಯದೇನೇ ಆರಂಭಗೊಂಡು ನಡೆಯುತ್ತಿದ್ದರೂ ಶಿಕ್ಷಣ ಇಲಾಖೆಗೆ ಅದು ಯಶಸ್ವಿ ಪ್ರಯೋಗ ಎಂಬ ವರದಿ ಸಿಕ್ಕಿದೆ. ಹಾಗಾಗಿ ಆ ಯೋಜನೆಯನ್ನು ಇನ್ನೂ ವಿಸ್ತರಿಸುವ ಕಾರ್ಯಸೂಚಿ ಶಿಕ್ಷಣ ಇಲಾಖೆಯಲ್ಲಿದೆ. ಅಂದರೆ ಕನ್ನಡ ಮಾಧ್ಯಮದ ಶಾಲೆಗಳ ಅಸ್ತಿತ್ವವನ್ನು ಅಲುಗಾಡಿಸುವ ಪ್ರಕ್ರಿಯೆ ಆಡಳಿತದ ವಲಯದಿಂದಲೇ ನಡೆಯುತ್ತಿದೆ.

ಇದ್ಯಾಕೆ ಹೀಗೆ ಆಗುತ್ತದೆಂದರೆ ಸಮಗ್ರವಾಗಿ ಶಿಕ್ಷಣದ ಬಗ್ಗೆ ಕಾಳಜಿ ಯಾರಲ್ಲೂ ಇಲ್ಲ. ಶಿಕ್ಷಣ ಮಾಧ್ಯಮದ ಪ್ರಶ್ನೆ ಬರುವುದು ಬದುಕು ಮತ್ತು ಸಂಸ್ಕೃತಿಗೆ ಸಂಬಂಧಿಸಿ. ಆದರೆ ಇಂಗ್ಲಿಷ್ ಭಾಷೆಯ ಅಗತ್ಯ ಬೀಳುವುದು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿ. ಈ ಭಿನ್ನತೆಯನ್ನು ಅರ್ಥಮಾಡಿಕೊಂಡಾಗ ಪ್ರಾಥಮಿಕ ಹಂತದಲ್ಲಿ ಸ್ಥಳೀಯ ಭಾಷಾ ಮಾಧ್ಯಮವೇ ಸೂಕ್ತ ಎಂಬುದು ವಿದಿತವಾಗುತ್ತದೆ. ಇದೇನೂ ಹೊಸ ತರ್ಕ ಅಥವಾ ಸಿದ್ಧಾಂತವಲ್ಲ. ಭಾರತದ ಶಿಕ್ಷಣ ತಜ್ಞರು ಇದನ್ನು ಪ್ರತಿಪಾದಿಸಿದ್ದಾರೆ. ಆದರೆ ಈ ವಿಚಾರವಾಗಿ ಹೋರಾಟಕ್ಕೆ ನಿಲ್ಲುವವರು ಯಾರು?

ಕನ್ನಡಪರ ಸಂಘಟನೆಗಳು ಶಿಕ್ಷಣ ಇಲಾಖೆಯ ಆಂಗ್ಲ ಮಾಧ್ಯಮದ ಒಲವಿನ ವಿರುದ್ಧ ಧ್ವನಿ ಎತ್ತಿರುವುದಾಗಿ ಸುದ್ದಿ ಇದೆ. ಆದರೆ ಇವುಗಳನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾದ ಅಗತ್ಯ ಶಿಕ್ಷಣ ಇಲಾಖೆಗೆ ಇಲ್ಲ. ಏಕೆಂದರೆ ಕನ್ನಡಪರ ಮುಂದಾಳುಗಳ ಮಕ್ಕಳು ಈಗಾಗಲೇ ಆಂಗ್ಲ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಾಗಿದ್ದಾರೆ. ಅದೇ ರೀತಿ ಸಾಹಿತಿಗಳ ಸಂಘಟನೆಗಳಿಂದಲೂ ಈ ಬೆಳವಣಿಗೆಯನ್ನು ತಡೆಯಲು ಸಾಧ್ಯವಿಲ್ಲ. ಏಕೆಂದರೆ ಅವರೂ ತಮ್ಮ ಮಕ್ಕಳ ಶ್ರೇಯಸ್ಸನ್ನು ಆಂಗ್ಲ ಮಾಧ್ಯಮ ಶಾಲೆಗಳ ಮೂಲಕ ಪಡೆಯಲು ಬಯಸಿರುತ್ತಾರೆ. ಇನ್ನು ಕನ್ನಡದ ಕಾವಲು ಮಾಡುವುದಕ್ಕಾಗಿ ಆರಂಭಗೊಂಡು ರೂಪಾಂತರಗೊಂಡ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಏನೂ ಮಾಡಲು ಹೊರಡುವುದಿಲ್ಲ. ಏಕೆಂದರೆ ಕನ್ನಡದ ಕಮಿಟ್‌ಮೆಂಟ್‌ ಗಿಂತ ಅಧಿಕಾರದ ಸವಿಯರಿತಿರುವ ಅದರ ಅಧ್ಯಕ್ಷರು ತಾವು ಕ್ಷೇಮವಾಗಿರಲು ಬಯಸುತ್ತಾರೆ.

ಇನ್ನು ಈ ವಿಷಯದಲ್ಲಿ ಗಟ್ಟಿ ನಿಲ್ಲಬೇಕಾದವರು ನಮ್ಮ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣಮಂತ್ರಿಗಳು. ಅವರು ಕೂಡಾ ನಿಯಮಗಳ ಜಾಲದಲ್ಲಿ ಏನೂ ಮಾಡುವುದಕ್ಕಾಗುವುದಿಲ್ಲ ಎಂದು ಬಿಟ್ಟರೆ ಕನ್ನಡ ಮಾಧ್ಯಮದ ಸ್ಥಿತಿ ಅಯೋಮಯ.

LEAVE A REPLY

Please enter your comment!
Please enter your name here