Tuesday, June 28, 2022

Latest Posts

ಇಂಡಿಯಾ ಲಾಕ್‌ಡೌನ್ 2.0 : ಹೇಗಿದೆ ನಮ್ಮ ಕರಾವಳಿಯಲ್ಲಿ ಪ್ರತಿಕ್ರಿಯೆ?

ಮಂಗಳೂರು: ಅಂತೂ ಕುತೂಹಲ ಮುಗಿದಿದೆ. ಮೇ 3ರವರೆಗೂ ‘ಮನೆಯೇ ಮಂತ್ರಾಲಯ’ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಕೊರೋನಾ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಮನೆಯಲ್ಲಿ ಉಳಿದುಕೊಳ್ಳುವುದೇ ಮದ್ದು ಎಂದು ದೇಶದ ಜನತೆಗೆ ಮೋದಿ ಮನವರಿಕೆ ಮಾಡಿದ್ದಾರೆ. 21 ದಿನಗಳ ಲಾಕ್‌ಡೌನ್ ಕೊರೋನಾ ಹರಡುವಿಕೆ ತಡೆಗೆ ಹೇಗೆ ಪರಿಣಾಮಕಾರಿ ಆಯಿತು ಮತ್ತು ಮುಂದಿನ 19 ದಿನಗಳ ಲಾಕ್‌ಡೌನ್ ಯಾಕೆ ಮಹತ್ವ ಎಂಬುದನ್ನು ಮಂಗಳವಾರದ ತಮ್ಮ ಭಾಷಣದಲ್ಲಿ ಪ್ರಧಾನಿ ಹೇಳಿದ್ದಾರೆ.
ಮೋದಿ ಭಾಷಣಕ್ಕಾಗಿ ಕಾದು ಕುಳಿದ ಜನತೆಗೆ ಲಾಕ್ ಡೌನ್ ವಿಸ್ತರಣೆ ಖಚಿತ ಎಂಬುದು ಮೊದಲೇ ತಿಳಿದಿತ್ತು. ಆದರೆ, ಎಷ್ಟು ದಿನದವರೆಗೆ ಲಾಕ್‌ಡೌನ್ ವಿಸ್ತರಣೆ ಆಗಲಿದೆ, ಸ್ವರೂಪ ಹೇಗಿರಲಿದೆ ಎಂಬ ಕುತೂಹಲ ಇತ್ತು. ಎಷ್ಟು ದಿನ ಎಂಬುದು ಮಂಗಳವಾರ ಸ್ಪಷ್ಟಗೊಂಡಿದೆ. ಸ್ವರೂಪದ ಬಗ್ಗೆ ಬುಧವಾರ ಮಾರ್ಗಸೂಚಿ ಘೋಷಣೆಯಾಗಿದೆ. 21 ದಿನ ಮನೆಯಲ್ಲಿ ಕುಳಿತ ಜನತೆ ಮುಂದಿನ 19 ದಿನ ಲಾಕ್‌ಡೌನ್‌ನಲ್ಲಿ ಏನು ಬೇಕು, ಏನು ಬೇಡ ಎಂಬ ಸಮಾಲೋಚನೆಯಲ್ಲಿ ತೊಡಗಿದ್ದಾರೆ.
ಲಾಕ್‌ಡೌನ್‌ಗೆ ಒಗ್ಗಿಕೊಂಡಿದ್ದಾರೆ ಜನ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಲಾಕ್‌ಡೌನ್‌ನ ಆರಂಭಿಕ ದಿನಗಳಲ್ಲಿ ಜನರು ದಿನಸಿ, ತರಕಾರಿ ಖರೀದಿಗೆ ಅಂಗಡಿಗಳ ಮುಂದೆ ಮುಗಿಬಿದ್ದರೂ, ಬಳಿಕ ಲಾಕ್‌ಡೌನ್‌ಗೆ ಒಗ್ಗಿಕೊಂಡಿದ್ದಾರೆ. ದ.ಕ. ಜಿಲ್ಲೆಯಲ್ಲಿ 12 ಕೊರೋನಾ ಪಾಸಿಟಿವ್ ಪ್ರಕರಣ ದೃಢಗೊಂಡಿದೆ. ಈ ಪೈಕಿ 9 ಮಂದಿ ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಪಾಸಿಟಿವ್ ಕಂಡುಬಂದ 12 ಮಂದಿಯಲ್ಲಿ ನಾಲ್ವರು ಕೇರಳ ಮೂಲದವರು, ಓರ್ವ ಭಟ್ಕಳ ನಿವಾಸಿ, ಇನ್ನೊಬ್ಬರು ಕಾರ್ಕಳದವರು. ದ.ಕ. ಜಿಲ್ಲೆ ನಿವಾಸಿಗಳು ಆರು ಮಂದಿ ಮಾತ್ರ.
ಲಾಕ್‌ಡೌನ್ ಅವಧಿಯಲ್ಲಿ ಸಹಜವಾಗಿ ಜನರಿಗೆ ವಿವಿಧ ರೀತಿಯ ತೊಂದರೆ ಉಂಟಾಗಿದೆ. ಆದರೆ, ಜನತೆ ಲಾಕ್‌ಡೌನ್‌ಗೆ ಸಹಕರಿಸಿದ ಕಾರಣ ಕೊರೋನಾ ಹರಡುವಿಕೆ ನಿಯಂತ್ರಣಗೊಂಡಿದೆ.
ನೆರವಿಗೆ ಬಂದಿದೆ ಸಂಘ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಅವಧಿಯಲ್ಲಿ ಆಹಾರ ಸಹಿತ ಅವಶ್ಯ ವಸ್ತುಗಳ ಕೊರತೆ ಉಂಟಾದವರಿಗೆ, ಕಾರ್ಮಿಕರು, ಕೂಲಿ ಇಲ್ಲದೆ ಸಂಕಷ್ಟಕ್ಕೆ ಒಳಗಾದವರಿಗೆ ಸರಕಾರದ ಪಡಿತರ, ವಿವಿಧ ಸಂಘ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು ಒದಗಿಸಿದ ಆಹಾರದ ಕಿಟ್, ಊಟ ನೆರವಿಗೆ ಬಂದಿದೆ. ಆದರೆ, ಆಹಾರ ಕಿಟ್‌ಗಳನ್ನು ಒಮ್ಮೆ ಪಡೆದುಕೊಂಡವರೇ ಮತ್ತೆ ಪಡೆದುಕೊಳ್ಳುತ್ತಿದ್ದಾರೆ. ಕೆಲವರಿಗೆ ಒಂದು ಬಾರಿಯೂ ಕಿಟ್ ದೊರೆತಿಲ್ಲ ಎಂಬ ಆರೋಪವಿದೆ. ಮುಂದಿನ 19 ದಿನಗಳ ಅವಧಿಯಲ್ಲಿ ಈಗಾಗಲೇ ಅಕ್ಕಿ, ಆಹಾರದ ಕಿಟ್ ಉಚಿತವಾಗಿ ಪಡೆದವರು ಮತ್ತೆ ಕೈಯೊಡ್ಡದೆ ಯಾರಿಗೆ ಸಿಕ್ಕಿಲ್ಲವೋ ಅವರಿಗೆ ನೀಡುವ ಮೂಲಕ ಮಾನವೀಯ ಸ್ಪಂದನೆ ನೀಡಬೇಕಿದೆ.
ಉತ್ಪನ್ನ ಮಾರಾಟವಾಗದೆ ರೈತರು ಸಂಕಷ್ಟದಲ್ಲಿ
ಲಾಕ್‌ಡೌನ್ ಅವಧಿಯಲ್ಲಿ ಅಡಿಕೆ, ಕೊಕ್ಕೊ, ರಬ್ಬರ್ ಸಹಿತ ಕೃಷಿ ಉತ್ಪನ್ನ ಮಾರಾಟವಾಗದೆ ರೈತರು ಸಂಕಷ್ಟದಲ್ಲಿ ಇದ್ದಾರೆ. ಕೊಕ್ಕೊ ಮತ್ತು ಅಡಿಕೆ ಖರೀದಿಗೆ ವಾರದ ಕೆಲ ದಿನಗಳನ್ನು ಕ್ಯಾಂಪ್ಕೊ ನಿಗದಿಪಡಿಸಿದೆ. ರೈತರಿಗೆ ಅಡಿಕೆ ಮಾರಾಟಕ್ಕೆ ಮಿತಿಯನ್ನು ಹಾಕಲಾಗಿದೆ. ಲಾಕ್‌ಡೌನ್ 2 ರ ಅವಧಿಯಲ್ಲಿ ಈ ಮಿತಿ ತೆಗೆದು ಹಾಕಿ ಕ್ಯಾಂಪ್ಕೊ ಎಲ್ಲ ಕಡೆ ವಾರದ ಎಲ್ಲ ದಿನಗಳಲ್ಲಿ ಅಡಿಕೆ, ಕೊಕ್ಕೊ ಖರೀದಿಸಬೇಕು. ರಬ್ಬರ್ ಖರೀದಿಗೂ ಸರಕಾರ ವ್ಯವಸ್ಥೆ ಮಾಡಬೇಕು ಎಂಬ ಆಗ್ರಹ ಬೆಳೆಗಾರರದ್ದು.
ಕೆಲವೆಡೆ ಭತ್ತ ಕೊಯ್ಲಿಗೆ ಬಂದಿದ್ದು, ಕಾರ್ಮಿಕರು ಸಿಗದ ಕಾರಣ ಕೊಯ್ಲ ಆಗಿಲ್ಲ. ಅಂತಹಾ ಕಡೆಗಳಿಗೆ ಕಾರ್ಮಿಕರನ್ನು ಒದಗಿಸಲು ಅಥವಾ ಭತ್ತ ಕಟಾವು ಯಂತ್ರ ಕಳುಹಿಸುವ ಕೆಲಸ ಸರಕಾರದಿಂದ ಆಗಬೇಕಿದೆ.
ನಿಯಮ ಮತ್ತಷ್ಟು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕಿದೆ
ಲಾಕ್ ಡೌನ್ ಅವಧಿಯಲ್ಲಿ ಸಂಚಾರ ಅನಗತ್ಯ ಸಂಚಾರ ನಡೆಸುವ ಎಲ್ಲ ವಾಹನಗಳನ್ನು ಮುಟ್ಟುಗೋಲು ಹಾಕುವ ನಿಯಮ ಮತ್ತಷ್ಟು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕಿದೆ. ದ.ಕ., ಕೊಡಗು, ಉಡುಪಿ, ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದರೂ, ಎಚ್ಚರ ಅಗತ್ಯ. ಈ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಯಲ್ಲಿ ಖಾಸಗಿ ವಾಹನ ಸಂಚಾರಕ್ಕೂ ನಿರ್ಬಂಧ ಮುಂದುವರೆಯುವ ಅಗತ್ಯವಿದೆ.
ಗಡಿ ಬಂದ್ ವಿಚಾರದಲ್ಲಿ ಉಡುಪಿ ಜಿಲ್ಲಾಧಿಕಾರಿ ದಿಟ್ಟ ಕ್ರಮ
ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳು ಅಂತಾರಾಜ್ಯ ಮತ್ತು ಅಂತರ್ ಜಿಲ್ಲೆಗಳ ಗಡಿಗಳನ್ನು 21 ದಿನದ ಲಾಕ್ ಡೌನ್ ಅವಧಿಯಲ್ಲಿ ಸಂಪೂರ್ಣ ಬಂದ್ ಮಾಡಿವೆ. 19 ದಿನದ ಲಾಕ್‌ಡೌನ್ ಅವಧಿಯಲ್ಲೂ ಈ ಗಡಿ ಬಂದ್ ಮುಂದುವರೆಯಬೇಕಿದೆ. ಈಗಾಗಲೇ ರಸ್ತೆಗೆ ಮಣ್ಣು ಸುರಿದು, ಮರದ ದಿಮ್ಮಿ ಇಟ್ಟು, ತಾತ್ಕಾಲಿಕ ಬೇಲಿ ಹಾಕಿ, ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರಕ್ಕೆ ತಡೆ ಒಡ್ಡಲಾಗಿದೆ. ಈ ತಡೆಯ ಯಥಾಸ್ಥಿತಿ ಕಾಪಾಡಿಕೊಳ್ಳುವುದು ಅಗತ್ಯ. ಗಡಿ ಬಂದ್ ವಿಚಾರದಲ್ಲಿ ಉಡುಪಿ ಜಿಲ್ಲಾಧಿಕಾರಿ ದಿಟ್ಟ ಕ್ರಮ ಕೈಗೊಂಡು ಮಾದರಿಯಾಗಿದ್ದಾರೆ.
ಕೊರೋನಾ ರಹಿತ ರೋಗಿಗಳನ್ನು ಮಾತ್ರ ಗಡಿಯೊಳಗೆ ಬಿಡಬೇಕು
21 ದಿನಗಳ ಲಾಕ್‌ಡೌನ್ ಅವಧಿಯಲ್ಲಿ ಕರ್ನಾಟಕ-ಕೇರಳ ನಡುವಿನ ತಲಪಾಡಿ ಗಡಿಯಲ್ಲಿ ಹೆದ್ದಾರಿ ಬಂದ್ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು. ವೈದ್ಯಕೀಯ ಕಾರಣಕ್ಕಾಗಿ ಗಡಿ ತೆರವುಗೊಳಿಸುವಂತೆ ಕೇರಳ ಸರಕಾರ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿತ್ತು. ಸುಪ್ರೀಂಕೋರ್ಟ್ ನಿದೇಶನದ ಅನ್ವಯ ಕೇರಳದ ಕೋವಿಡ್ 19 ಇಲ್ಲದ, ಕೇರಳದಲ್ಲಿ ಚಿಕಿತ್ಸೆ ಇಲ್ಲದಿರುವ ರೋಗಿಗಳಿಗೆ ಆಂಬುಲೆನ್ಸ್ ಮೂಲಕ ಮಂಗಳೂರಿನ ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸಲು ಅವಕಾಶ ನೀಡಲಾಗಿದೆ. ಆದರೆ, ಇಲ್ಲೂ ರಾಜಕೀಯ ಮಾಡುತ್ತಿರುವ ಕೇರಳ ಸರಕಾರ ದ.ಕ. ಜಿಲ್ಲಾಡಳಿತವನ್ನು ದೂರುತ್ತಿದೆ. ಚಿಕಿತ್ಸೆಗೆ ಆಗಮಿಸಿದ ರೋಗಿಗಳು ವಾಪಸ್ ತೆರಳಿ, ಮಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಮುಂದಿನ 19 ದಿನಗಳ ಅವಧಿಯಲ್ಲಿ ದ.ಕ. ಜಿಲ್ಲಾಡಳಿತ ಸಮರ್ಪಕ ತಪಾಸಣೆ ನಡೆಸಿ, ಚಿಕಿತ್ಸೆ ಅವಶ್ಯ ಇರುವ ಕೊರೋನಾ ರಹಿತ ರೋಗಿಗಳನ್ನು ಮಾತ್ರ ತಲಪಾಡಿ ಗಡಿಯೊಳಗೆ ಆಗಮಿಸಲು ಬಿಡಬೇಕು.
ಜನರು ಮೀನಿಗಾಗಿ ಮುಗಿಬೀಳುವ ಸಾಧ್ಯತೆ!
ಕೇಂದ್ರ ಮತ್ತು ರಾಜ್ಯ ಸರಕಾರದ ನಿರ್ದೇಶನದಂತೆ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮೀನುಗಾರಿಗೆ ಅವಕಾಶ ನೀಡಲಾಗಿದೆ. 21 ದಿನಗಳ ಕಾಲ ಹಸಿ ಮೀನು ಇಲ್ಲದೆ ಕಾಲ ಕಳೆದ ಜನರು ಮೀನಿಗಾಗಿ ಮುಗಿಬೀಳುವ ಸಾಧ್ಯತೆಯಿದೆ. ಮೀನು ಮಾರಾಟ ಸಂದರ್ಭ ಸೂಕ್ತ ಮುನ್ನೆಚ್ಚರಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅವಶ್ಯವಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss